ಶಬರಿಮಲೆ ಆಯ್ತು, ಮಸೀದಿಗಳಲ್ಲಿ ಸ್ತ್ರೀಯರ ಪ್ರವೇಶಕ್ಕೆ ಈಗ ಹೋರಾಟ

By Kannadaprabha NewsFirst Published Oct 13, 2018, 10:21 AM IST
Highlights

ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನೀಡಿ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿಯೇ ಕೇರಳದ ಮಹಿಳಾ ಸಂಘಟನೆಯೊಂದು ಮಸೀದಿಯಲ್ಲಿಯೂ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಆಗ್ರಹಿಸಿ ಹೋರಾಟಕ್ಕೆ ಮುಂದಾಗುತ್ತಿದೆ.

ನವದೆಹಲಿ: ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಹಿಳೆಯರಿಗೆ ಹೇರಲಾಗಿದ್ದ ನಿಷೇಧವನ್ನು ಸುಪ್ರೀಂಕೋರ್ಟ್‌ ತೆರವುಗೊಳಿಸಿದ ಬೆನ್ನಲ್ಲೇ ಸುನ್ನಿ ಮುಸ್ಲಿಂ ಸಮುದಾಯದ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಮಹಿಳೆಯರಿಗೆ ಅವಕಾಶ ನೀಡಬೇಕು ಎಂಬ ಕೂಗು ಎದ್ದಿದೆ. ಈ ಸಂಬಂಧ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಲು ಕೇರಳದ ಮೂಲದ ಮುಸ್ಲಿಂ ಮಹಿಳಾ ಸಂಘಟನೆಯೊಂದು ಸಜ್ಜಾಗಿದೆ.

ದೇಶಾದ್ಯಂತ ಸುನ್ನಿ ಮುಸ್ಲಿಂ ಸಮುದಾಯದ ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಈ ಲಿಂಗತಾರತಮ್ಯ ಧೋರಣೆ ವಿರುದ್ಧ ಸುಪ್ರೀಂ ಕೋರ್ಟಿನ ಮೊರೆ ಹೋಗಲಾಗುವುದು ಎಂದು ಕೋಳಿಕ್ಕೋಡ್‌ ಮೂಲದ ಪ್ರಗತಿಪರ ಮುಸ್ಲಿಂ ಮಹಿಳೆಯರ ವೇದಿಕೆ ನಿಸಾ ಅಧ್ಯಕ್ಷೆ ವಿ.ಪಿ. ಜುಹ್ರಾ ಹೇಳಿದ್ದಾರೆ.

ದೆಹಲಿಯ ಜಾಮಾ ಮಸೀದಿ ಸೇರಿದಂತೆ ದೇಶದ ಇತರೆ ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶವಿದೆ. ಆದರೆ ಅಲ್ಲಿ ಅವರು ಪುರುಷರ ಜತೆ ಕೂರುವಂತಿಲ್ಲ. ಮಹಿಳೆಯರಿಗಾಗಿ ಪ್ರತ್ಯೇಕ ಸ್ಥಳವಿರುತ್ತದೆ. ಸಂಜೆ ನಂತರ ಪ್ರಾರ್ಥನೆ ಸಲ್ಲಿಸುವುದೂ ಸೇರಿದಂತೆ ಕೆಲವೊಂದು ನಿರ್ಬಂಧಗಳನ್ನು ಹೇರಲಾಗುತ್ತದೆ.

ಮಹಾರಾಷ್ಟ್ರದ ಹಾಜಿ ಅಲಿ ದರ್ಗಾದ ಒಳಭಾಗಕ್ಕೆ ಮಹಿಳೆಯರಿಗೆ ಪ್ರವೇಶ ನೀಡದಿರುವುದನ್ನು ವಿರೋಧಿಸಿ ಮಹಿಳಾ ಸಂಘಟನೆಗಳು ಕಾನೂನು ಹೋರಾಟ ನಡೆಸಿದ್ದವು. ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಬಾಂಬೆ ಹೈಕೋರ್ಟ್‌ 2016ರಲ್ಲಿ ತೀರ್ಪು ನೀಡಿತ್ತು.

click me!