
ನವದೆಹಲಿ(ಜೂನ್ 13): ಒಂದಲ್ಲ, ಎರಡಲ್ಲ, ನೂರಲ್ಲ, ಇನ್ನೂರಲ್ಲ... ಬರೋಬ್ಬರಿ 4 ಸಾವಿರ ಹಸುಗಳು ವಿಮಾನದಲ್ಲಿ ಹಾರಾಡಲಿವೆ. ಇದು ಜಗತ್ತಿನ ಅತ್ಯಂತ ಶ್ರೀಮಂತ ದೇಶವೆನಿಸಿರುವ ಕತಾರ್ ತನ್ನ ವಿರೋಧಿಗಳಿಗೆ ಸೆಡ್ಡು ಹೊಡೆದು ಬದುಕು ನಡೆಸುವ ಎಕ್ಸಾಂಪಲ್. ಐಸಿಸ್ ಉಗ್ರರಿಗೆ ಸಪೋರ್ಟ್ ಮಾಡುತ್ತಾರೆಂದು ಆರೋಪಿಸಿ ಕತಾರ್ ದೇಶಕ್ಕೆ ಅನೇಕ ನೆರೆ ರಾಷ್ಟ್ರಗಳು ತಮ್ಮ ರಾಜತಾಂತ್ರಿಕ ಸಂಬಂಧವನ್ನು ಕಡಿದುಹಾಕಿವೆ. ಸೌದಿ ಅರೇಬಿಯಾ, ಬಹರೇನ್, ಯುಎಇ, ಈಜಿಪ್ಟ್ ಸೇರಿದಂತೆ 10 ರಾಷ್ಟ್ರಗಳು ಕತಾರ್'ಗೆ ಬಹಿಷ್ಕಾರ ಹಾಕಿವೆ.
ಈ ಸುದ್ದಿಯ ಆರಂಭದಲ್ಲಿ ಪ್ರಸ್ತಾಪಿಸಿದ ಹಸುಗಳ ವಿಚಾರಕ್ಕೂ ಈ ಬಹಿಷ್ಕಾರದ ವಿಚಾರಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಮೂಡಿರಬಹುದು. ಸಿರಿವಂತ ರಾಷ್ಟ್ರವಾಗಿರುವ ಕತಾರ್'ನ ಜನಜೀವನದ ಅನೇಕ ವಸ್ತುಗಳು ಆಮದುಗಳ ಮೇಲೆ ನಿಂತಿವೆ. ಇದರಲ್ಲಿ ಹಾಲು ಕೂಡ ಪ್ರಮುಖವಾದುದು. ಕತಾರ್'ಗೆ ಅಗತ್ಯವಿದ್ದ ಬಹುತೇಕ ಹಾಲು ಸೌದಿ ಅರೇಬಿಯಾದಿಂದಲೇ ಪೂರೈಕೆಯಾಗುತ್ತಿತ್ತು. ಇದೀಗ ಸೌದಿಯು ಕತಾರ್ ವಿರುದ್ಧ ಮುನಿಸಿಕೊಂಡಿರುವುದರಿಂದ ಹಾಲಿನ ಸಪ್ಲೈ ನಿಂತುಹೋಗಿದೆ. ಹಾಲಿಗೆ ಏನು ಮಾಡುವುದು? ಕತಾರ್'ನ ಪವರ್ ಇಂಟರ್ನ್ಯಾಷನಲ್ ಹೋಲ್ಡಿಂಗ್ ಸಂಸ್ಥೆಯ ಮುಖ್ಯಸ್ಥ ಮೌತಾಜ್ ಅಲ್ ಖಯ್ಯಾತ್ ಅವರು ಆಸ್ಟ್ರೇಲಿಯಾ ಮತ್ತು ಅಮೆರಿಕದಿಂದ 4 ಸಾವಿರ ಜೆರ್ಸಿ ಹಸುಗಳನ್ನ ಖರೀದಿ ಮಾಡಿದ್ದಾರೆ. ಸುಮಾರು 10 ಲಕ್ಷ ಜನಸಂಖ್ಯೆ ಇರುವ ಕತಾರ್ ರಾಜಧಾನಿ ದೋಹಾದ ಹಾಲಿನ ದಾಹ ತೀರಿಸಲು ಈ 4 ಸಾವಿರ ಹಸುಗಳು ಮುಡಿಪಾಗಿರಲಿವೆ. ಕತಾರ್'ನ ಅರ್ಧದಷ್ಟು ಹಾಲಿನ ಬೇಡಿಕೆ ತಣಿಸಲು ಹಾಲಿನ ಉತ್ಪಾದನೆ ಇದೇ ತಿಂಗಳೇ ಆರಂಭಗೊಳ್ಳಲಿದೆ. ಅಂದಹಾಗೆ, ಅಮೆರಿಕ, ಆಸ್ಟ್ರೇಲಿಯಾ ಈ ಒಂದೊಂದು ಹಸುವು ಏನಿಲ್ಲವೆಂದರೂ 500-600 ಕಿಲೋ ತೂಕ ಇವೆ. ಇವುಗಳನ್ನು ಸಾಗಿಸಲು 60 ಫ್ಲೈಟ್'ಗಳಾದರೂ ಬೇಕಾಗಬಹುದು.
ಈ ಹಸುಗಳ ಉದಾಹರಣೆಯು ಕತಾರ್'ನ ಶ್ರೀಮಂತಿಕೆಯ ಅಹಂ ಅನ್ನು ಬಹಳ ಸ್ಪಷ್ಟವಾಗಿ ತೋರಿಸುತ್ತದೆ. ತಾವು ಬೆರಳೆಣಿಕೆಯಷ್ಟು ದೇಶಗಳ ಮೇಲೆ ಅವಲಂಬಿತವಾಗಿಲ್ಲ. ತಮಗೆ ಬೇಕಾದ್ದನ್ನು ತರಿಸಿಕೊಳ್ಳುವ ಸಾಮರ್ಥ್ಯ ತನಗಿದೆ ಎಂದು ಕತಾರ್ ಆಡಳಿತ ಸಾಬೀತು ಮಾಡಿದೆ. ಇರಾನ್'ನಿಂದ ಹಣ್ಣು-ತರಕಾರಿ, ಟರ್ಕಿಯಿಂದ ಡೈರಿ ಐಟಂಗಲು ಆಮದಾಗುತ್ತಿವೆ. ಕತಾರ್'ನ ಯಾವ ನಾಗರಿಕನಿಗೂ ಬಿಕ್ಕಟ್ಟಿನ ಅನುಭವವಾಗಬಾರದು ಎಂಬುದು ಕತಾರ್ ಸರಕಾರದ ಅಪೇಕ್ಷೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.