
ಮಂಡ್ಯ/ಬೆಂಗಳೂರು: ಖಾತೆ ಹಂಚಿಕೆ ಬೆನ್ನಲ್ಲೇ ಜೆಡಿಎಸ್ ಪಾಳೆಯದಲ್ಲಿ ಅಸಮಾಧಾನ ಹೊರಬಿದ್ದಿದ್ದು, ತಮಗೆ ನೀಡಿರುವ ಖಾತೆಯ ಬಗ್ಗೆ ಸಚಿವ ಸಿ.ಎಸ್.ಪುಟ್ಟರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರು ಸದ್ಯ ಯಾರ ಸಂಪರ್ಕಕ್ಕೂ ಕೂಡ ಸಿಗುತ್ತಿಲ್ಲ.
ಈ ಮಧ್ಯೆ, ಪುಟ್ಟರಾಜು ಬೆಂಬಲಿಗರಂತೂ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ. ಮಂಡ್ಯ ಜಿಲ್ಲೆಯ ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಖಾತೆಯನ್ನು ನೀಡಲಾಗಿದೆ. ಆದರೆ, ಅದೇ ಜಿಲ್ಲೆಯ ಡಿ.ಸಿ. ತಮ್ಮಣ್ಣ ಅವರಿಗೆ ಪ್ರಬಲವಾದ ಸಾರಿಗೆ ಖಾತೆಯನ್ನು ನೀಡಲಾಗಿದೆ.
ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗಾಗಿ ತೀವ್ರ ಪ್ರಯತ್ನ ನಡೆಸಿ ಯಶಸ್ವಿಯಾದರೂ ತಮಗೆ ಪ್ರಮುಖವಲ್ಲದ ಖಾತೆಯನ್ನು ನೀಡಿ ರುವುದಕ್ಕೆ ಬೇಸರಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶನಿವಾರ ಪುಟ್ಟರಾಜು ಅವರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅಸಮಾಧಾನ ವನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಬೆಂಬಲಿಗರ ಆಕ್ರೋಶ: ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಖಾತೆ ನೀಡಿದ್ದಕ್ಕೆ ಬೆಂಬಲಿಗರಿಂದ ತೀವ್ರ ಆಕ್ರೋಶ ವ್ಯಕ್ತ ವಾಗಿದೆ. ಸಂಪುಟ ದರ್ಜೆ ಸಚಿವರಾದರೂ ಪುಟ್ಟ ರಾಜು ಅವರಿಗೆ ಸಣ್ಣ ನೀರಾವರಿ ಖಾತೆ ನೀಡಿ ಅಪಮಾನ ಮಾಡಲಾಗಿದೆ. ಈ ಖಾತೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು ಎಂದು ಬೆಂಬಲಿಗರು ಬಹಿರಂಗವಾಗಿಯೇ ಆಗ್ರಹಿಸಿದ್ದಾರೆ.
ಈ ಮೊದಲು ಸಾರಿಗೆ ಖಾತೆ ಅಥವಾ ಕಂದಾಯ ಖಾತೆ ಕೊಡುವುದಾಗಿ ಪುಟ್ಟರಾಜು ಅವರಿಗೆ ಭರವಸೆ ನೀಡಲಾಗಿತ್ತು. ಆದರೆ, ದೇವೇಗೌಡರ ಕುಟುಂಬ ದವರು ಕೊನೇ ಕ್ಷಣದಲ್ಲಿ ಪುಟ್ಟರಾಜು ಮತ್ತು ಮಂಡ್ಯ ಜಿಲ್ಲೆಗೆ ಅವಮಾನ ಮಾಡಲು ಸಣ್ಣ ನೀರಾವರಿ ಖಾತೆ ನೀಡಿದ್ದಾರೆ ಎಂದು ಶಾಸಕರ ಬೆಂಬಲಿಗರಾದ ಹುಳ್ಳೇನಹಳ್ಳಿ ನಾಗರಾಜು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಣ್ಣ ನೀರಾವರಿ ಖಾತೆಯನ್ನು ಯಾವುದೇ ಕಾರಣಕ್ಕೂ ಪುಟ್ಟರಾಜು ಒಪ್ಪಿಕೊಳ್ಳಬಾರದು. ಈ ವಿಚಾರದಲ್ಲಿ ಸಚಿವರ ಮುಂದಿನ ನಡೆ ಹೇಗಿರಬೇಕು ಎಂಬ ಬಗ್ಗೆ ಶನಿವಾರ ಜಿಲ್ಲೆಯ ನಾಯಕರು, ಕ್ಷೇತ್ರದ ಅಭಿಮಾನಿಗಳು, ಕಾರ್ಯಕರ್ತರು ಸೇರಿದಂತೆ ಎಲ್ಲರ ಸಭೆ ಕರೆದು ಚರ್ಚಿಸಲಾಗುವುದು ಎಂದು ನಾಗರಾಜು ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಬಳಿ ಇರುವ ಇಂಧನ ಖಾತೆಯನ್ನಾದರೂ ಪುಟ್ಟರಾಜು ಅವರಿಗೆ ಕೊಡಬೇಕು.
ಇಲ್ಲದೆ ಹೋದರೆ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಅವರು ಸಾಮಾನ್ಯ ಶಾಸಕರಾಗಿ ಕೆಲಸ ನಿರ್ವಹಿಸುವುದೇ ಲೇಸು ಎಂಬ ಅಭಿಪ್ರಾಯಕ್ಕೆ ಕಾರ್ಯಕರ್ತರು ಬಂದಿದ್ದಾರೆ ಎಂದು ನಾಗರಾಜು ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಜತೆಗೆ, ಖಾತೆ ನೀಡುವಲ್ಲಿ ಮಾಡಿರುವ ವಂಚನೆಯಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನೂ ತಪ್ಪಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.