ಬೃಹತ್‌ ಬ್ಯಾಂಕ್‌ ಹಗರಣ ಸ್ಫೋಟ!

By Suvarna Web DeskFirst Published Feb 15, 2018, 8:04 AM IST
Highlights

ದೇಶದ ಬ್ಯಾಂಕಿಂಗ್‌ ಇತಿಹಾಸದಲ್ಲೇ ಅತಿದೊಡ್ಡ ಹಗರಣಗಳ ಸಾಲಿಗೆ ಸೇರಬಲ್ಲ ಬೃಹತ್‌ ವಂಚನೆ ಪ್ರಕರಣವೊಂದು ಇದೀಗ ಸ್ಫೋಟಗೊಂಡಿದೆ. ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಗಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ (ಪಿಎನ್‌ಬಿ) ಮುಂಬೈ ಶಾಖೆಯೊಂದರಲ್ಲಿ ಬರೋಬ್ಬರಿ 11500 ಕೋಟಿ ರು. ಅವ್ಯವಹಾರ ಪತ್ತೆಯಾಗಿದೆ.

ನವದೆಹಲಿ: ದೇಶದ ಬ್ಯಾಂಕಿಂಗ್‌ ಇತಿಹಾಸದಲ್ಲೇ ಅತಿದೊಡ್ಡ ಹಗರಣಗಳ ಸಾಲಿಗೆ ಸೇರಬಲ್ಲ ಬೃಹತ್‌ ವಂಚನೆ ಪ್ರಕರಣವೊಂದು ಇದೀಗ ಸ್ಫೋಟಗೊಂಡಿದೆ. ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಗಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ (ಪಿಎನ್‌ಬಿ) ಮುಂಬೈ ಶಾಖೆಯೊಂದರಲ್ಲಿ ಬರೋಬ್ಬರಿ 11500 ಕೋಟಿ ರು. ಅವ್ಯವಹಾರ ಪತ್ತೆಯಾಗಿದೆ.

ಮುಂಬೈನ ಪಿಎನ್‌ಬಿ ಬ್ಯಾಂಕ್‌ನ ಶಾಖೆಯೊಂದರಿಂದ ಆಭರಣ ಉದ್ಯಮಿ ನೀರವ್‌ ಮೋದಿ ಅಕ್ರಮವಾಗಿ ಅನುಮತಿ ಪತ್ರ ಪಡೆದು, ಅದರ ಮೂಲಕ ವಿದೇಶದಲ್ಲಿನ ವಿವಿಧ ಬ್ಯಾಂಕ್‌ಗಳಿಂದ ಭಾರೀ ಪ್ರಮಾಣದ ಹಣ ಪಡೆದು ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಈ ಕುರಿತು ಬಾಂಬೆ ಷೇರುಪೇಟೆ ಮತ್ತು ಸಿಬಿಐಗೆ ಪಿಎನ್‌ಬಿ 2 ದೂರು ಸಲ್ಲಿಸಿದೆ. ಜೊತೆಗೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ತನ್ನ 10 ಸಿಬ್ಬಂದಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

ಬ್ಯಾಂಕ್‌ನ ದೂರು ಸಲ್ಲಿಕೆಯಾದ ಬೆನ್ನಲ್ಲೇ, ಸಿಬಿಐ ಎಫ್‌ಐಆರ್‌ ದಾಖಲಿಸಿದೆ. ಈ ಎಫ್‌ಐಆರ್‌ ಆಧರಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರವೇ ಉದ್ಯಮಿ ನೀರವ್‌ ಮೋದಿ ಮತ್ತು ಬ್ಯಾಂಕ್‌ನ ಕೆಲ ಅಧಿಕಾರಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ ಇಡೀ ಪ್ರಕರಣದ ಕುರಿತು ಕೇಂದ್ರ ಸರ್ಕಾರ ಬ್ಯಾಂಕ್‌ನಿಂದ ವರದಿ ಕೇಳಿದೆ.

ಭಾರೀ ಅಕ್ರಮ: ಮುಂಬೈನ ಶಾಖೆಯೊಂದರಲ್ಲಿ ಕೆಲ ನಿರ್ದಿಷ್ಟಖಾತೆಗಳಲ್ಲಿ ಅಕ್ರಮ ವಹಿವಾಟುಗಳು ನಡೆದಿದೆ. ಇದು ಆಯಾ ಖಾತೆದಾರರಿಗೆ ಅನುಕೂಲ ಮಾಡಿಕೊಡುವಂತೆ ನಡೆದಿವೆ. ಈ ವಹಿವಾಟುಗಳ ಆಧಾರದಲ್ಲಿ ಇತರ ಬ್ಯಾಂಕುಗಳು ಇವೇ ಗ್ರಾಹಕರಿಗೆ ವಿದೇಶಗಳಲ್ಲಿ ಮುಂಗಡ ಹಣ ಪಾವತಿಸಿರುವ ಸಾಧ್ಯತೆಯಿದೆ’ ಎಂದು ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ಪಿಎನ್‌ಬಿ ಹೇಳಿದೆ. ಈ ಬ್ಯಾಂಕ್‌ಗಳು ಯಾವುದೆಂದು ಪಿಎನ್‌ಬಿ ಹೇಳಿಲ್ಲವಾದರೂ, ನೀರವ್‌ ಮೋದಿ ಸಲ್ಲಿಸಿದ ಅನುಮತಿ ಪತ್ರ (ಲೆಟ​ರ್‍ಸ್ ಆಫ್‌ ಅಂಡರ್‌ಟೇಕಿಂಗ್‌- ಎಲ್‌ಒಯು) ಆಧರಿಸಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಅಲಹಾಬಾದ್‌ ಬ್ಯಾಂಕ್‌ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌ಗಳು, ನೀರವ್‌ ಮೋದಿ ಮತ್ತು ಅವರ ಕುಟುಂಬ ಸದಸ್ಯರು ಪಾಲುದಾರರಾಗಿರುವ ಸಂಸ್ಥೆಗಳಿಗೆ ಭಾರೀ ಪ್ರಮಾಣದ ಸಾಲ ನೀಡಿವೆ ಎಂದು ಮೂಲಗಳು ತಿಳಿಸಿವೆ. ಹಗರಣ ನಡೆದಿರುವ ಸಂಗತಿ ಬೆಳಕಿಗೆ ಬರುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಪಿಎನ್‌ಬಿ ಷೇರುಗಳು ಶೇ.8ರಷ್ಟುಕುಸಿದಿವೆ.

ಇತರೆ ಉದ್ಯಮಗಳ ಮೇಲೂ ಕಣ್ಣು: ನೀರವ್‌ ಮೋದಿ ಪ್ರಕರಣದ ಹಿನ್ನೆಲೆಯಲ್ಲಿ ದೇಶದ ಖ್ಯಾತನಾಮ ಆಭರಣ ಸಂಸ್ಥೆಗಳಾದ ಗೀತಾಂಜಲಿ, ಗಿನಿ ಮತ್ತು ನಕ್ಷತ್ರ ಕಂಪನಿಗಳ ವ್ಯವಹಾರದ ಮೇಲೂ ಇಡಿ ಮತ್ತು ಸಿಬಿಐ ಕಣ್ಣು ಇಟ್ಟಿವೆ ಎನ್ನಲಾಗಿದೆ.

click me!