
ನವದೆಹಲಿ: ಪಿಎನ್‌ಬಿಯಲ್ಲಿ ನಡೆದ 11,400 ಕೋಟಿ ರು. ಹಗರಣ ಇದೀಗ ರಾಜಕೀಯ ಪಕ್ಷಗಳ ಮಧ್ಯೆ ಕೆಸರೆರೆಚಾಟಕ್ಕೆ ಕಾರಣವಾಗಿದೆ. ಲೂಟಿ ಮತ್ತು ಪರಾರಿ ಮೋದಿ ಸರ್ಕಾರದ ಹೆಗ್ಗುರುತಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
‘ಭಾರತವನ್ನು ಲೂಟಿ ಮಾಡುವುದು ಹೇಗೆಂದು ನೀರವ್ ಮೋದಿ ತೋರಿಸಿಕೊಟ್ಟಿದ್ದಾರೆ. ಮೊದಲು ಮೋದಿ ಅವರನ್ನು ಅಪ್ಪಿಕೊಳ್ಳಿ. ಬಳಿಕ ಅವರ ಜೊತೆ ದಾವೋಸ್‌ನಲ್ಲಿ ಕಾಣಿಸಿಕೊಳ್ಳಿ. 12,000 ಕೋಟಿ ರು.ನೊಂದಿಗೆ ಮಲ್ಯ ರೀತಿಯಲ್ಲಿ ದೇಶವನ್ನು ಬಿಟ್ಟು ಪರಾರಿಯಾಗಿ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಜೊತೆಗೆ ಕಾಂಗ್ರೆಸ್ ನಾಯಕರು ನೀರವ್ ಮೋದಿ ಚೋಟಾ ಮೋದಿ ಎನ್ನುವ ಮೂಲಕ ಪರೋಕ್ಷವಾಗಿ ಪ್ರಧಾನಿ ಮೋದಿಗೆ ಹೋಲಿಸಿದ್ದಾರೆ.
ಇದೇ ವೇಳೆ, ಎಡಪಕ್ಷಗಳು, ಟಿಎಂಸಿ, ಆಮ್‌ಆದ್ಮಿ ಪಕ್ಷಗಳು, ಪಿಎನ್‌ಬಿ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ದಾವೋಸ್‌ನಲ್ಲಿ ಭಾರತೀಯ ಸಿಇಒಗಳ ಜೊತೆ ನೀರವ್ ಮೋದಿ ಕಾಣಿಸಿಕೊಂಡಿದ್ದು ಹೇಗೆ ಎಂಬ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿವೆ.
ರವಿಶಂಕರ್ ಸ್ಪಷ್ಟನೆ: ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ನೀರವ್ ದಾವೋಸ್‌ನಲ್ಲಿ ಪ್ರಧಾನಿ ಮೋದಿ ನಿಯೋಗದ ಭಾಗವಾಗಿರಲಿಲ್ಲ. ತಾವಾಗಿಯೇ ಅಲ್ಲಿಗೆ ಬಂದಿದ್ದರು. ಜೊತೆಗೆ ನೀರವ್‌ರನ್ನು ಮೋದಿ ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ನೀರವ್‌ರನ್ನು ಚೋಟಾ ಮೋದಿ ಎಂದು ಬಣ್ಣಿಸುವ ಮೂಲಕ ಮೋದಿಗೆ ಹೋಲಿಸಿದ್ದು ಕೀಳುತನ ಎಂದು ಕಿಡಿಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.