ಕಾರ್ಗಿಲ್ ಹೀರೋ ಸತ್ಪಾಲ್ ಸಿಂಗ್‌ಗೆ ಡಬಲ್ ಪ್ರಮೋಷನ್ ಕೊಟ್ಟ ’ಕ್ಯಾಪ್ಟನ್’

By Web DeskFirst Published Jul 26, 2019, 6:46 PM IST
Highlights

ಕಾರ್ಗಿಲ್ ಯುದ್ದದ 20ನೇ ಸಂಭ್ರಮಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಗಿಲ್ ವೀರ ಯೋಧ ಸತ್ಪಾಲ್ ಸಿಂಗ್‌ಗೆ ASI ಆಗಿ ಮುಂಬಡ್ತಿ ನೀಡುವ ಮೂಲಕ ಗೌರವ ಸಲ್ಲಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ನವದೆಹಲಿ[ಜು.26]: ಕಾಗಿಲ್ ಯುದ್ಧದ ಹೀರೋ ಸತ್ಪಾಲ್ ಸಿಂಗ್ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ವೀರ ಯೋಧನಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ದೇಶದಾದ್ಯಂತ 20ನೇ ಕಾರ್ಗಿಲ್ ವಿಜಯ ದಿವಸ ಆಚರಣೆಯ ಸಂದರ್ಭದಲ್ಲೇ ಸತ್ಪಾಲ್ ಸಿಂಗ್ ಅವರಿಗೆ ಮುಖ್ಯ ಪೇದೆ ಹುದ್ದೆಯಿಂದ ASI(ಅಸಿಸ್ಟೆಂಟ್ ಸಬ್ ಇನ್ಸ್’ಪೆಕ್ಟರ್)  ಸಹಾಯಕ ಪೊಲೀಸ್ ನಿರೀಕ್ಷಕರನ್ನಾಗಿ ಬಡ್ತಿ ನೀಡಿದ್ದಾರೆ.

1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸಾಮಾನ್ಯ ಸಿಪಾಯಿ ಆಗಿದ್ದ ಸತ್ಪಾಲ್ ಸಿಂಗ್, ದ್ರಾಸ್ ಸೆಕ್ಟರ್ ಟೈಗರ್ ಹಿಲ್ಸ್’ನಲ್ಲಿ ಪಾಕಿಸ್ತಾನದ ಸೇನೆಯನ್ನು ಹಿಮ್ಮೆಟ್ಟಿಸಿದ್ದರು. ಅದರಲ್ಲೂ ಪಾಕಿಸ್ತಾನದ ಕರ್ನಲ್ ಶೇರ್ ಖಾನ್ ಮತ್ತು ಇನ್ನೂ ಮೂವರನ್ನು ಹೊಡೆದುರುಳಿಸಿದ್ದರು. ಆ ಬಳಿಕ ಶೇರ್ ಖಾನ್’ಗೆ ಮರಣೋತ್ತರವಾಗಿ ಪಾಕಿಸ್ತಾನದ ಅತ್ಯುನ್ನತ ಸೇನಾ ಪ್ರಶಸ್ತಿಯಾದ ನಿಶಾನ್-ಎ-ಹೈದರ್ ನೀಡಿ ಗೌರವಿಸಿತ್ತು. ಆದರೆ ಭಾರತ ಸರ್ಕಾರ ನಮ್ಮ ದೇಶದ ಸಿಪಾಯಿ ಸಾಧನೆಯನ್ನು ಮರೆತಿತ್ತು. 

2010ರಲ್ಲಿ ಶಿರೋಮಣಿ ಅಕಾಲಿ ದಳ ಸರ್ಕಾರ ಕಾನ್ಸ್‌ಟೇಬಲ್ ಕೆಲಸ ನೀಡಿತ್ತು. ಪಂಜಾಬ್’ನ ಸಂಗ್ರೂರ್ ಜಿಲ್ಲೆಯ ಭವಾನಿಗಢ ಎಂಬ ಪಟ್ಟಣದಲ್ಲಿ ಮುಖ್ಯ ಕಾನ್ಸ್’ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಸತ್ಪಾಲ್ ASI ಆಗಿ ಮುಂಬಡ್ತಿ ಪಡೆದಿದ್ದಾರೆ. ಈ ಮೂಲಕ ತಮ್ಮ ಜೀವದ ಹಂಗು ತೊರೆದು ಹೋರಾಡಿದ ವೀರ ಯೋಧನಿಗೆ 20 ವರ್ಷಗಳ ಬಳಿಕ ಗೌರವ ನೀಡಿದಂತಾಗಿದೆ.  

click me!