ಪರಿಸರ ಗೀತೆ ಗಾಯನದ ಮೂಲಕ ಸ್ಟೀಲ್‌ ಬ್ರಿಡ್ಜ್‌ ಯೋಜನೆಗೆ ವಿರೋಧ

By Suvarna Web DeskFirst Published Nov 18, 2016, 5:55 AM IST
Highlights

‘ಹಳೆಯ ಛಾಯಾಚಿತ್ರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಗೊಂದಲ ಮೂಡಿಸುತ್ತಿದ್ದಾರೆ' ಎಂಬುದಾಗಿ ಸಚಿವ ಕೆ.ಜೆ.ಜಾಜ್‌ರ್‍ ಅವರು ತಮ್ಮ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ನರೇಶ್‌ ನರಸಿಂಹನ್‌, ‘‘ಸಚಿವರು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸರ್ಕಾರ ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ಕೈಬಿಟ್ಟು ಟೆಂಡರ್‌ ರದ್ದುಪಡಿಸಬೇಕು,''

ಬೆಂಗಳೂರು (ನ.18): ನಗರದ ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆವರೆಗೆ ಉಕ್ಕಿನ ಸೇತುವೆ ನಿರ್ಮಿಸುವ ಯೋಜನೆ ವಿರೋಧಿಸಿ ನ.20ರಂದು ಅರಮನೆ ಮೈದಾನದ ಶೀಷ ಮಹಲ್‌ನಲ್ಲಿ ಪರಿಸರ ಮತ್ತು ಬೆಂಗಳೂರು ಕುರಿತ ಗೀತೆಗಳ ಗಾಯನ ಹಾಗೂ ಚಿತ್ರಕಲೆ ಉತ್ಸವ ಆಯೋಜಿಸುವ ಮೂಲಕ ವಿಭಿನ್ನವಾಗಿ ಹೋರಾಟ ಮುಂದುವರಿಸಲು ಪ್ರತಿಭಟನಾಕಾರರು ಮುಂದಾಗಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಗಾಯಕಿ ಎಂ.ಡಿ.ಪಲ್ಲವಿ, ಅಭಿವೃದ್ಧಿಯ ಹೆಸರಿನಲ್ಲಿ ನಗರದ ಪರಿಸರ ಸಂಪತ್ತು ನಾಶವಾಗುತ್ತಿದ್ದು, ಉಕ್ಕಿನ ಸೇತುವೆ ನಿರ್ಮಾಣದಿಂದ ನೂರಾರು ಮರಗಳು ನಾಶವಾಗಲಿವೆ. ಹೀಗಾಗಿ ಉಕ್ಕಿನ ಸೇತುವೆ ವಿರೋಧಿ ಹೋರಾಟವನ್ನು ಬೆಂಬಲಿಸುತ್ತಿದ್ದೇನೆ. ವಾಹನಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದಿನೇ ದಿನೇ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದ್ದು, ಅಭಿವೃದ್ಧಿ ಹೆಸರಿನಲ್ಲಿ ಹಸಿರು ನಾಶವಾಗುತ್ತಿದೆ. ನಗರದ ಪರಿಸರವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದರು.

ಹೊರ ದೇಶಗಳಲ್ಲಿ ಬೈಸಿಕಲ್‌ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅದಕ್ಕೆ ಬೇಕಾದ ಎಲ್ಲ ಅಗತ್ಯ ಸೌಲಭ್ಯಗಳನ್ನು ಮಾಡಿಕೊಡಲಾಗಿದೆ. ಆದರೆ, ನಮ್ಮ ದೇಶದಲ್ಲಿ ಅಂತಹ ಪರಿಸ್ಥಿತಿಯಿಲ್ಲ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಬೇಕು. ಮೇಲ್ಸೇತುವೆ, ಉಕ್ಕಿನ ಸೇತುವೆಗಳಿಂದ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ದೊರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

ವಾಸ್ತುಶಿಲ್ಪ ತಜ್ಞ ನರೇಶ್‌ ನರಸಿಂಹನ್‌ ಮಾತನಾಡಿ, ಬೆಂಗಳೂರಿನ ರಸ್ತೆಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ನಗರದಲ್ಲಿ 25 ಲಕ್ಷ ವಾಹನಗಳು ಇರಬೇಕಿತ್ತು. ಆದರೆ, ಸದ್ಯ 63 ಲಕ್ಷ ವಾಹನಗಳಿವೆ. ಯಾವುದೇ ಸರ್ಕಾರ ಮೊದಲ ಆದ್ಯತೆಯನ್ನು ಪಾದಚಾರಿಗೆ ನೀಡಬೇಕು. ನಂತರದಲ್ಲಿ ಬೈಸಿಕಲ್‌, ಸಮೂಹ ಸಾರಿಗೆ ಹಾಗೂ ಕೊನೆಗೆ ಖಾಸಗಿ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು. ಆದರೆ, ನಗರದಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ಆದ್ಯತೆ ನೀಡಲಾಗಿದ್ದು, ಪಾದಚಾರಿಗಳನ್ನು ಕಡೆಗಣಿಸಲಾಗಿದೆ ಎಂದು ದೂರಿದರು.

‘ಹಳೆಯ ಛಾಯಾಚಿತ್ರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಗೊಂದಲ ಮೂಡಿಸುತ್ತಿದ್ದಾರೆ' ಎಂಬುದಾಗಿ ಸಚಿವ ಕೆ.ಜೆ.ಜಾಜ್‌ರ್‍ ಅವರು ತಮ್ಮ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ನರೇಶ್‌ ನರಸಿಂಹನ್‌, ‘‘ಸಚಿವರು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸರ್ಕಾರ ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ಕೈಬಿಟ್ಟು ಟೆಂಡರ್‌ ರದ್ದುಪಡಿಸಬೇಕು,'' ಎಂದು ಒತ್ತಾಯಿಸಿದರು.

ಸಿಟಿಜನ್ಸ್‌ ಫಾರ್‌ ಬೆಂಗಳೂರಿನ ಮುಖಂಡ ಪ್ರಕಾಶ್‌ ಬೆಳವಾಡಿ, ಉಕ್ಕಿನ ಸೇತುವೆಗೆ ಸಾರ್ವಜನಿಕರ ಬೆಂಬಲ ವ್ಯಕ್ತವಾಗುತ್ತಿದೆ ಎಂಬ ಮಾತು ಸುಳ್ಳು. ಸೇತುವೆಯ ಕುರಿತು ಈಗಾಗಲೇ ಹಲವು ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳ ಅಭಿಪ್ರಾಯ ಪಡೆಯಲಾಗಿದೆ. ಒಂದೊಂದು ಸಂಘವೂ ನಿರ್ಣಯ ಕೈಗೊಂಡು, ಸಹಿ ಮಾಡಿದ ಪತ್ರಗಳನ್ನು ಕಳುಹಿಸಿದೆ. ಹೀಗಾಗಿ ನ.20ರಂದು ಚಿತ್ರಕಲಾವಿದ ಎಸ್‌.ಜಿ.ವಾಸುದೇವ್‌ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಸೇರಿ ಎಲ್ಲ ವಯೋಮಾನದವರು ಚಿತ್ರಕಲೆ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ನಗರದಲ್ಲಿ ಮಾಲಿನ್ಯ ಪ್ರಮಾಣ ಅಳೆಯಲು 50 ಕಡೆಗಳಲ್ಲಿ ಮಾಪಕ ಅಳವಡಿಸಲಾಗುವುದು. ಹಾಗೆಯೇ ಕೆರೆಗಳ ನೀರಿನ ಪರೀಕ್ಷೆ, ಮರಗಳ ಸ್ಥಿತಿಗತಿ, ಋುತುಮಾನಕ್ಕೆ ತಕ್ಕಂತೆ ಮಣ್ಣಿನ ಪರೀಕ್ಷೆ ನಡೆಸಲು ‘ನಿಗಾ' ಎಂಬ ಕಾರ್ಯಕ್ರಮ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

click me!