ಬೆಂಗಳೂರಿಗೆ ಶರಾವತಿ: ಶಿವಮೊಗ್ಗದಲ್ಲಿ ಕಿಚ್ಚು

By Web DeskFirst Published Jun 25, 2019, 8:28 AM IST
Highlights

ಬೆಂಗಳೂರಿಗೆ ಶರಾವತಿ: ಶಿವಮೊಗ್ಗದಲ್ಲಿ ಕಿಚ್ಚು | ಸಾಗರದಲ್ಲಿ ಬಿಜೆಪಿ ಪ್ರತಿಭಟನಾ ಮೆರವಣಿಗೆ |  ಯೋಜನೆ ಜಾರಿಗೆ ಬಿಡಲ್ಲ: ಹೋರಾಟಗಾರರು

 ಶಿವಮೊಗ್ಗ (ಜೂ. 25): ಲಿಂಗನಮಕ್ಕಿ ಅಣೆಕಟ್ಟೆಯಿಂದ ಬೆಂಗಳೂರಿಗೆ ನೀರು ಒಯ್ಯುವ ಪ್ರಯತ್ನದ ವಿರುದ್ಧ ಶಿವಮೊಗ್ಗ ಜಿಲ್ಲೆಯಲ್ಲಿ ಆಕ್ರೋಶ ತೀವ್ರಗೊಳ್ಳುತ್ತಿದ್ದು, ಸಾಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಮತ್ತೊಂದೆಡೆ ಶರಾವತಿ ಉಳಿಸಿ ಹೋರಾಟ ಒಕ್ಕೂಟ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ್ದು, ಪ್ರಸ್ತಾವವನ್ನು ರಾಜ್ಯ ಸರ್ಕಾರ ಕೈಬಿಡದೇ ಹೋದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದೆ. ಈ ನಡುವೆ, ಯೋಜನೆ ವಿರೋಧಿಸಿ ಸಾಗರ ತಾಲೂಕು ವಕೀಲರ ಸಂಘ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಬಿಜೆಪಿ ಪ್ರತಿಭಟನೆ:

ಲಿಂಗನಮಕ್ಕಿ ಅಣೆಕಟ್ಟೆಯಿಂದ ಬೆಂಗಳೂರಿಗೆ ನೀರು ಒಯ್ಯಬಾರದು ಎಂದು ಆಗ್ರಹಿಸಿ ಸಾಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಯೋಜನೆ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನೆ ಬಳಿಕ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶಾಸಕ ಎಚ್‌. ಹಾಲಪ್ಪ, ಸರ್ಕಾರ ಶರಾವತಿ ನೀರು ಒಯ್ಯುವ ಆಲೋಚನೆ ಬದಿಗಿಟ್ಟು ಗೋದಾವರಿ ನದಿಯಿಂದ ಕಾವೇರಿಗೆ ನೀರು ಹರಿಸಿ, ತನ್ಮೂಲಕ ಬೆಂಗಳೂರಿಗರಿಗೆ ಸಮರ್ಪಕ ನೀರು ಪೂರೈಸುವ ಯೋಜನೆಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ನಾ. ಡಿಸೋಜಾ ಎಚ್ಚರಿಕೆ:

ಶರಾವತಿ ಉಳಿಸಿ ಹೋರಾಟ ಒಕ್ಕೂಟದ ಗೌರವಾಧ್ಯಕ್ಷ, ಹಿರಿಯ ಸಾಹಿತಿ ನಾ.ಡಿಸೋಜ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇವಲ 130 ಕಿ.ಮೀ. ಹರಿಯುವ ಶರಾವತಿ ನದಿಗೆ ಈಗಾಗಲೇ 5 ಅಣೆಕಟ್ಟು ನಿರ್ಮಿಸಲಾಗಿದೆ. ನದಿಯಲ್ಲಿ ಮೀನು ಮೊಟ್ಟೆಇಡಲು ಜಾಗವಿಲ್ಲದಂತಹ ಪರಿಸ್ಥಿತಿ ಇದೆ.

ಇಂತಹ ಸಂದರ್ಭದಲ್ಲಿ ಬೆಂಗಳೂರಿಗೆ ನೀರು ಕೊಂಡೊಯ್ಯುವ ನಿರ್ಧಾರ ಅವಿವೇಕತನದ್ದು ಎಂದರು. ಒಕ್ಕೂಟದ ಪ್ರಮುಖರು ಮಾತನಾಡಿ, ಯಾವುದೇ ಕಾರಣಕ್ಕೂ ಈ ಯೋಜನೆ ಜಾರಿಗೆ ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.

click me!