
ತಿರುವನಂತಪುರಂ (ಜ. 05): ಬಿಂದು ಮತ್ತು ಕನಕದುರ್ಗ ಎಂಬ ಇಬ್ಬರು ಮಹಿಳೆಯರು ಇದೇ ಮೊದಲ ಬಾರಿಗೆ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸಿದ್ದು ದೇಶಾದ್ಯಂತ ಸುದ್ದಿಯಾಗುತ್ತಿದೆ. ಕೇರಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಈ ಮಧ್ಯೆ ಈ ಕುರಿತ ಸುಳ್ಳುಸುದ್ದಿಗಳೂ ಹರಿದಾಡುತ್ತಿವೆ. ಸದ್ಯ ಇದೇ ವಿಯಕ್ಕೆ ಸಂಬಂಧಿಸಿದಂತೆ ಮಹಿಳೆಯರಿಬ್ಬರು ದೇವಸ್ಥಾನ ಪ್ರವೇಶಿಸಿದ್ದನ್ನು ಖಂಡಿಸಿ ಅಯ್ಯಪ್ಪ ಭಕ್ತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
@partyvillage17ಎಂಬ ಹೆಸರಿನ ಟ್ವೀಟರ್ ಖಾತೆಯು ‘ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಿದರು ಎಂಬ ಸುದ್ದಿ ತಿಳಿಯುತ್ತಿದ್ದಂತೇ ಕೇರಳದ ವಾಲಂಚೇರಿ ಮೂಲದ ಜಯರಾಜನ್ ಎಂಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹೀಗೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಈತ ನಾಲ್ಕನೆಯವನು’ ಎಂದು ಬರೆದು ವ್ಯಕ್ತಿಯೊಬ್ಬರ ಫೋಟೋವನ್ನು ಪೋಸ್ಟ್ ಮಾಡಿತ್ತು. ಈ ಪೋಸ್ಟ್ ಸದ್ಯ ವೈರಲ್ ಆಗಿದೆ.
ಆದರೆ ನಿಜಕ್ಕೂ ಫೋಟೋದಲ್ಲಿರುವ ವ್ಯಕ್ತಿ ಇದೇ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಂಡನೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ವಾಸ್ತವವಾಗಿ ಪೋಟೋದಲ್ಲಿರುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದೇನೋ ಸತ್ಯ. ಆದರೆ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರು ಎಂಬ ಕಾರಣಕ್ಕಲ್ಲ.
ಈ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಕ್ವಿಂಟ್ ಸುದ್ದಿಸಂಸ್ಥೆ ವಾಲಂಚೇರಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದು, ಅಲ್ಲಿ ‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. 3 ದಿನಗಳ ಹಿಂದೆ ಜಯರಾಜನ್ ಆತ್ಮಹತ್ಯೆಗೆ ಶರಣಾಗಿದ್ದರು. ಅವರಿಗೆ ಮಾನಸಿಕ ಸಮಸ್ಯೆ ಇತ್ತು. ಸಾಲವೂ ಹೆಚ್ಚಿತ್ತು ಎಂದು ಅವರ ಪುತ್ರಿಯೇ ಹೇಳಿದ್ದಾರೆ’ ಎಂದು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.