ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಗೆ ಹಾಲುಣಿಸಿದ ಸಿಂಹಿಣಿ!

By Web DeskFirst Published Jan 5, 2019, 9:13 AM IST
Highlights

ಬೇರೆ ಸಿಂಹಗಳು ಬೇಟೆಯಾಡದಂತೆಯೂ ಕಣ್ಗಾವಲು| ಗಿರ್‌ ಅರಣ್ಯದಲ್ಲಿ ಅಪರೂಪದ ಪ್ರಸಂಗ| ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಗೆ ಹಾಲುಣಿಸಿದ ಸಿಂಹಿಣಿ!

ಅಹಮದಾಬಾದ್‌[ಜ.05]: ತಾಯಿಯಿಂದ ಬೇರೆಯಾದ ಚಿರತೆ ಮರಿಗೆ ಸಿಂಹಿಣಿಯು ಹಾಲುಣಿಸುತ್ತಿರುವ ಅಪರೂಪದ ಪ್ರಸಂಗ ಗುಜರಾತ್‌ನ ಗಿರ್‌ ಅರಣ್ಯದಲ್ಲಿ ನಡೆದಿದೆ. ಈ ಸಿಂಹಿಣಿಗೆ ಮೊದಲೇ ಎರಡು ಮರಿಗಳು ಇದ್ದವು. ಅದು ತನ್ನ ಮರಿಗಳ ಜತೆಗೆ ಚಿರತೆ ಮರೆಗೂ ಹಾಲುಣಿಸುತ್ತಿರುವುದನ್ನು ಪಶ್ಚಿಮ ಗಿರ್‌ ಅರಣ್ಯ ಸಿಬ್ಬಂದಿ ಗಮನಿಸಿದ್ದಾರೆ. ಇಷ್ಟೇ ಅಲ್ಲದೆ, ಬೇರೆ ಸಿಂಹಗಳು ಬಂದು ಚಿರತೆ ಮರಿಯನ್ನು ಬೇಟೆಯಾಡಬಹುದು ಎಂಬ ಆತಂಕದಿಂದ ಕಣ್ಗಾವಲನ್ನೂ ಇರಿಸಿದೆ ಎಂದು ಪಶ್ಚಿಮ ಗಿರ್‌ ಅರಣ್ಯ ವಿಬಾಗದ ಉಪ ಅರಣ್ಯ ಸಂರಕ್ಷಕ ಧೀರಜ್‌ ಮಿತ್ತಲ್‌ ಹೇಳಿದ್ದಾರೆ.

6 ದಿನಗಳ ಹಿಂದೆಯೇ ಅರಣ್ಯ ಸಿಬ್ಬಂದಿಗಳು ಇದನ್ನು ನೋಡಿದ್ದಾರೆ. ಈ ಕುರಿತಾದ ಚಿತ್ರಗಳನ್ನು ಹಾಗೂ ವಿಡಿಯೋಗಳನ್ನು ಮಿತ್ತಲ್‌ ಅವರು ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. ಚಿತ್ರಗಳನ್ನು ಗಮನಿಸಿದಾಗ ಚಿರತೆ ಮರಿ ನಿರಾಳವಾಗಿರುವುದು ಕಂಡುಬರುತ್ತದೆ.

‘ಇದು ಅಪರೂಪದ ಪ್ರಸಂಗ. ಸಿಂಹಗಳು ಸಾಮಾನ್ಯವಾಗಿ ಚಿರತೆಗಳನ್ನು ಕೊಲ್ಲುತ್ತವೆ. ಆದರೆ ಇಲ್ಲಿ ಇದಕ್ಕೆ ತದ್ವಿರುದ್ಧ ಪ್ರಸಂಗ ನಡೆದಿದೆ. ಸಿಂಹಿಣಿಯು ಚಿರತೆ ಮರಿಗೆ ಹಾಲುಣಿಸಿ ಅದರ ಮೇಲೆ ಯಾವ ಪ್ರಾಣಿಗಳೂ ದಾಳಿ ಮಾಡದಂತೆ ಕಣ್ಗಾವಲು ಇಟ್ಟಿದೆ. ಚಿರತೆ ಮರಿ ಕೂಡ ಇದಕ್ಕೆ ಸ್ಪಂದಿಸುತ್ತಿದ್ದು ಸಿಂಹಿಣಿಯ ಸಂಜ್ಞೆ ಹಾಗೂ ಧ್ವನಿಗಳನ್ನು ಅರ್ಥ ಮಾಡಿಕೊಳ್ಳುತ್ತಿದೆ’ ಎಂದು ಹೇಳಿದರು.

ಈ ಚಿರತೆ ಮರಿ ಆಕಸ್ಮಿಕವಾಗಿ ತಾಯಿ ಚಿರತೆಯಿಂದ ಬೇರ್ಪಟ್ಟಿರಬಹುದು. ಇಷ್ಟೇ ಅಲ್ಲ, ಸಿಂಹಿಣಿಯೊಂದಿಗೆ ತನ್ನ ಮರಿ ಇರುವುದನ್ನು ನೋಡಿ ಹತ್ತಿರ ಹೋಗಲು ಭಯಪಡುತ್ತಿರಬಹುದು ಎಂದೂ ಅವರು ಹೇಳಿದರು.

click me!