ಬೆಳಗಾವಿ, ಮಹಾರಾಷ್ಟ ಮಧ್ಯೆ ಮಸಿ ಸಮರ

Published : Nov 06, 2016, 01:52 AM ISTUpdated : Apr 11, 2018, 12:40 PM IST
ಬೆಳಗಾವಿ, ಮಹಾರಾಷ್ಟ ಮಧ್ಯೆ ಮಸಿ ಸಮರ

ಸಾರಾಂಶ

ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್ ಸಂಘಟಿಸಿದ್ದ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಕರ್ನಾಟಕ ಸರ್ಕಾರಕ್ಕೆ, ಕನ್ನಡಿಗರಿಗೆ ಸೆಡ್ಡು ಹೊಡೆದಿದ್ದ ಮೇಯರ್, ಉಪಮೇಯರ್ ಅವರಿಗೆ ರಾಜ್ಯ ಸರ್ಕಾರ ಶನಿವಾರ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಮೇಯರ್ ಸರಿತಾ ಪಾಟೀಲ ಹಾಗೂ ಉಪಮೇಯರ್ ಸಂಜಯ ಶಿಂಧೆ ನೋಟಿಸ್ ಸ್ವೀಕರಿಸಿದ್ದಾರೆ.

ಬೆಳಗಾವಿ/ಬೀದರ್: ರಾಜ್ಯದ ಗಡಿ ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳು ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮಧ್ಯೆ ಮಸಿ ಸಮರ ಮುಂದುವರಿದಿದೆ. ಮೇಯರ್, ಉಪ ಮೇಯರ್ ಹಾಗೂ ಶಾಸಕರ ಕಚೇರಿಗೆ ಮಸಿ ಬಳಿದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ. ಇದಕ್ಕೆ ಪ್ರತಿಯಾಗಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಮೇಲೆ ಮಸಿ ಬಳಿದು, ಕಲ್ಲು ತೂರಿದ್ದಾರೆ. ಇನ್ನೊಂದೆಡೆ ಬೀದರ್'ನಲ್ಲೂ ಮಹಾರಾಷ್ಟ್ರದ ಸಾರಿಗೆ ಬಸ್ ಮೇಲೆ ದಾಳಿ ನಡೆಸಿದ ಕರವೇ ಕಾರ್ಯಕರ್ತರು ಕಪ್ಪು ಮಸಿ ಬಳಿದು ಕನ್ನಡ ಧ್ವಜ ಹಾರಿಸಿದರು. ಮಸಿ ಬಳಿಯಲಾದ ಆ ಬಸ್ಸು ಪುಣೆಯ ಡಿಪೋಕೆ ಸೇರಿದ್ದಾಗಿದೆ.

ಕನ್ನಡ ರಾಜ್ಯೋತ್ಸವ ವಿರೋಧಿಸಿ ಎಂಇಎಸ್ ಸಂಘಟಿಸಿದ್ದ ಕರಾಳ ದಿನಾಚರಣೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಸರಿತಾ ಪಾಟೀಲ, ಉಪಮೇಯರ್ ಸಂಜಯ ಶಿಂಧೆ, ಶಾಸಕರಾದ ಸಂಭಾಜಿ ಪಾಟೀಲ ಹಾಗೂ ಸಂಜಯ ಪಾಟೀಲ ಪಾಲ್ಗೊಂಡಿದ್ದಕ್ಕೆ ತೀವ್ರ ಆಕ್ರೋಶಗೊಂಡಿದ್ದ ಕನ್ನಡ ಸಂಘಟನೆಗಳ ಕಾರ್ಯಕರ್ತರು ಶನಿವಾರ ಪಾಲಿಕೆ ಕಚೇರಿಗೆ ನುಗ್ಗಿದ್ದಾರೆ. ಅಲ್ಲಿ ಇವರೆಲ್ಲ ಕಚೇರಿಯ ಬಾಗಿಲು ಹಾಗೂ ನಾಮಲಕಕ್ಕೆ ಕಪ್ಪು ಮಸಿ ಬಳಿದು, ಪಾಲಿಕೆ ಎದುರು ಪ್ರತಿಭಟಿಸಿದ್ದಾರೆ. ಅಲ್ಲದೆ, ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಕು. ಇವರಿಗೆ ನೀಡಿರುವ ಸರ್ಕಾರಿ ಸೌಲಭ್ಯಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಈ ವೇಳೆ ಮೇಯರ್, ಉಪಮೇಯರ್ ಮೇಲೆ ಮೊಟ್ಟೆ ಎಸೆಯಲೂ ಯತ್ನಿಸಲಾಯಿತು. ಆಗ ಪೊಲೀಸರು ಸ್ಥಳಕ್ಕೆ ಆಗಮಿಸಿ ನಾಲ್ವರು ಕನ್ನಡಪರ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಕನ್ನಡ ಬಸ್‌'ಗಳಿಗೆ ಮಸಿ:
ಬೆಳಗಾವಿಯಲ್ಲಿ ನಡೆದ ಪ್ರತಿಭಟನೆಗೆ ಪ್ರತೀಕಾರವಾಗಿ ನೆರೆಯ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಕೊಲ್ಹಾಪುರ ಹಾಗೂ ಕಾಗಲ್‌ನಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಕನ್ನಡ ನಾಮಫಲಕಗಳಿಗೆ ಕಪ್ಪು ಮಸಿ ಬಳಿದು ವಿರೂಪಗೊಳಿಸಿದ್ದಾರೆ. ಕೆಂಪು ಬಣ್ಣದಿಂದ ಬಸ್‌ಗಳ ಮೇಲೆ ‘‘ಜೈ ಮಹಾರಾಷ್ಟ್ರ, ಬೆಳಗಾವಿ ಎಂದೆಂದಿಗೂ ಮಹಾರಾಷ್ಟ್ರಕ್ಕೆ ಸೇರಿದ್ದು,’’ ಎಂದು ಬರೆದಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಮರಾಠಿಗರ ಮೇಲೆ ಪದೇ ಪದೆ ಅನ್ಯಾಯ ಮಾಡಲಾಗುತ್ತಿದೆ. ನ್ಯಾಯ ಕೋರಿ ಕರಾಳ ದಿನಾಚರಣೆ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಅಮಾಯಕರ ವಿರುದ್ಧ ಪ್ರಕರಣ ದಾಖಲಿಸಿ, ಬಂಸಲಾಗಿದೆ. ಅವರ ಮೇಲಿರುವ ಎಲ್ಲ ಮೊಕದ್ದಮೆಗಳನ್ನು ಹಿಂಪಡೆದು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಶಿವಸೇನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಸಂಚಾರ ಸ್ಥಗಿತ:
ಶಿವಸೇನೆ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲ ಕಾಲ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಕೊಲ್ಹಾಪುರ ಬಸ್ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ನಾಲ್ಕು ಬಸ್‌ಗಳ ಕನ್ನಡ ನಾಮಲಕಗಳಿಗೆ ಕಪ್ಪು ಮಸಿ ಬಳಿದು ವಿರೂಪಗೊಳಿಸಲಾಗಿದೆ. ಅಲ್ಲದೇ, ಕಾಗಲ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇರಿದ್ದ ಕಾರ್ಯಕರ್ತರು ಕರ್ನಾಟಕದ ಬಸ್‌ಗಳು ಮಹಾರಾಷ್ಟ್ರಕ್ಕೆ ತೆರಳದಂತೆಯೂ ತಡೆ ಹಿಡಿದರು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ. ಬೆಳಗಾವಿಯಲ್ಲೂ ಕರ್ನಾಟಕದ ಪೊಲೀಸರು ಮಹಾರಾಷ್ಟ್ರದ ಬಸ್‌ಗಳ ಮೇಲೆ ದಾಳಿ ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ನಾವು ಅಸಹಾಯಕರಾದೆವು:
ಮಧ್ಯಾಹ್ನ 12 ಗಂಟೆ ವೇಳೆಗೆ ಕೆಲವು ಎಂಇಎಸ್ ಕಾರ್ಯಕರ್ತರು ಏಕಾಏಕಿ ಬಂದು ಕರ್ನಾಟಕದ ವಿರುದ್ಧ ಘೋಷಣೆ ಕೂಗುತ್ತಿದ್ದರು. ಬೆಳಗಾವಿ ನಮ್ಮದು ಎಂಬುದು ಸೇರಿ ಅನೇಕ ಘೋಷಣೆ ಕೂಗಿದರು. ನಂತರ ಕರ್ನಾಟಕ ಬಸ್‌ಗಳಿಗೆ ಮಸಿ ಬಳೆಯಲು ಆರಂಭಿಸಿದರು. ಅದನ್ನು ನಾವು ಮೂಕ ಪ್ರೇಕ್ಷಕರಂತೆ ನೋಡಬೇಕಾಯಿತು. ಏಕೆಂದರೆ, ನಮ್ಮ ಸಹಾಯಕ್ಕೆ ಅಲ್ಲಿನ ಪೊಲೀಸ್ ಅಕಾರಿಗಳಾಗಲಿ, ಸಾರಿಗೆ ಅಕಾರಿಗಳಾಗಲಿ ಬರಲಿಲ್ಲ. ನಾವು ವಾದಕ್ಕೆ ಇಳಿದರೆ ನಮ್ಮ ಮೇಲೆ ಹಲ್ಲೆ ಆಗುವ ಸಾಧ್ಯತೆಗಳು ಇತ್ತು. ಕೆಲವು ಕಿಡಿಗೇಡಿಗಳು ವಾಹನಗಳಿಗೆ ಕಲ್ಲುಗಳನ್ನು ಕೂಡ ತೂರಿದರು. ಇದರಿಂದ ಬಸ್ಸಿನ ಗಾಜುಗಳು ಕೂಡ ಒಡೆದಿವೆ. ನಾವು ಮತ್ತು ಪ್ರಯಾಣಿಕರು ಅಲ್ಲಿಂದ ತಪ್ಪಿಸಿಕೊಂಡು ಬರುವುದೇ ದೊಡ್ಡ ಸಾಹಸವಾಗಿತ್ತು ಎಂದು ರಾಜ್ಯದ ಚಾಲಕರು ಹಾಗೂ ನಿರ್ವಾಹಕರು ತಮ್ಮ ಅಸಹಾಯಕತೆಯನ್ನು ಕನ್ನಡಪ್ರಭದೊಂದಿಗೆ ಹಂಚಿಕೊಂಡರು.

ಇಂದೇ ಸೂಪರ್‌ಸೀಡ್ ಮಾಡಿ
ಬೆಳಗಾವಿ ಮಹಾನಗರ ಪಾಲಿಕೆಯನ್ನು ಸರ್ಕಾರ ನಾಳೆ ಏಕೆ, ಇಂದೇ ಸೂಪರ್ ಸೀಡ್ ಮಾಡಲಿ ಎಂದು ಬೆಳಗಾವಿ ದಕ್ಷಿಣ ಶಾಸಕ ಸಂಭಾಜಿ ಪಾಟೀಲ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಶನಿವಾರ ಪಾಲಿಕೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ಮಹಾನಗರ ಪಾಲಿಕೆಯನ್ನು ರಾಜ್ಯ ಸರ್ಕಾರ ಈ ಹಿಂದೆ ಎರಡು ಬಾರಿ ಸೂಪರ ಸೀಡ್ ಮಾಡಿದೆ. ಈಗ ಮತ್ತೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಪಾಲಿಕೆ ಸೂಪರ್ ಸೀಡ್ ಮಾಡಲು ನಮ್ಮದೇನೂ ತಕರಾರಿಲ್ಲ. ಸರ್ಕಾರದ ನಿರ್ಣಯಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ನಾವು ಕರ್ನಾಟಕ ಸರ್ಕಾರದ ಸೌಲಭ್ಯ, ಯೋಜನೆಗಳನ್ನು ನಾವಾಗಿಯೇ ಪಡೆದುಕೊಂಡಿಲ್ಲ. ಸರ್ಕಾರವೇ ನಮಗೆ ನೀಡುತ್ತಿದೆ. ಹಾಗಾಗಿ, ನಾವು ಪಡೆಯುತ್ತಿದ್ದೇವೆಯಷ್ಟೇ ಎಂದು ಹೇಳಿದರು.

ವೈಯಕ್ತಿಕ ನಿರ್ಧಾರ:
ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ನಾಪತ್ತೆಯಾಗಿದ್ದ ಮೇಯರ್ ಶನಿವಾರ ತಮ್ಮ ಕಚೇರಿಯಲ್ಲಿ ಪ್ರತ್ಯಕ್ಷರಾಗಿ, ಪಾಲಿಕೆ ಸಾಮಾನ್ಯ ಸಭೆ ಹಿನ್ನೆಲೆಯಲ್ಲಿ ನಾನು ಕಚೇರಿಗೆ ಆಗಮಿಸಿದ್ದೇನೆ. ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳುವುದು, ಬಿಡುವುದು ನನ್ನ ವೈಯಕ್ತಿಕ ವಿಚಾರವಾಗಿದೆ ಎಂದಷ್ಟೇ ಉತ್ತರಿಸಿದರು. ನನ್ನ ಕಚೇರಿ, ಉಪಮೇಯರ್, ಶಾಸಕರ ಕಚೇರಿಗಳಿಗೆ ಮಸಿ ಬಳಿದಿರುವ ಘಟನೆಗೆ ಪೊಲೀಸರ ವೈಲ್ಯವೇ ಕಾರಣವಾಗಿದೆ. ಪೊಲೀಸ್ ಇಲಾಖೆಯ ಪಕ್ಕದಲ್ಲಿಯೇ ಪಾಲಿಕೆ ಕಚೇರಿ ಇದ್ದರೂ ಇಂತಹ ಘಟನೆ ನಡೆದಿದ್ದು, ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು.

ಮೇಯರ್, ಉಪಮೇಯರ್‌ಗೆ ಶೋಕಾಸ್:
ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್ ಸಂಘಟಿಸಿದ್ದ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಕರ್ನಾಟಕ ಸರ್ಕಾರಕ್ಕೆ, ಕನ್ನಡಿಗರಿಗೆ ಸೆಡ್ಡು ಹೊಡೆದಿದ್ದ ಮೇಯರ್, ಉಪಮೇಯರ್ ಅವರಿಗೆ ರಾಜ್ಯ ಸರ್ಕಾರ ಶನಿವಾರ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಮೇಯರ್ ಸರಿತಾ ಪಾಟೀಲ ಹಾಗೂ ಉಪಮೇಯರ್ ಸಂಜಯ ಶಿಂಧೆ ನೋಟಿಸ್ ಸ್ವೀಕರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಂದ್ಯದ ವೇಳೆ ಕಬಡ್ಡಿ ಪಟು ಹತ್ಯೆ ಪ್ರಕರಣ, ಆರೋಪಿಯನ್ನು ಎನ್‌ಕೌಂಟರ್ ಮಾಡಿ ಮುಗಿಸಿದ ಪೊಲೀಸ್
Oil Scam: 1996ರ ಕ್ರಿಕೆಟ್‌ ವಿಶ್ವಕಪ್‌ ವಿಜೇತ ನಾಯಕ ಅರ್ಜುನ್‌ ರಣತುಂಗಾ ಬಂಧನ?