ಶಿಥಿಲಗೊಂಡಿದೆ ಸ್ವಾತಂತ್ರ್ಯಪೂರ್ವದ ಈ ಶಾಲೆ; ಮೈದಾನದಲ್ಲೇ ಪಾಠ

By Suvarna Web DeskFirst Published Jun 8, 2017, 11:47 AM IST
Highlights

ಅದು ನೂರಾರು ವರ್ಷಗಳ ಕಾಲದ ಸರ್ಕಾರಿ ಶಾಲೆ. ಶಾಸಕರ ಪಕ್ಕದ ಗ್ರಾಮದಲ್ಲೇ ಇರುವ ಶಾಲೆ. ಆದ್ರೆ ಆ ಶಾಲೆಯ ಮಕ್ಕಳು ಭಯಬೀತಿಯಲ್ಲೆ ವಿದ್ಯಾಭ್ಯಾಸ ಮಾಡಬೇಕಾಗಿದೆ. ಮಳೆ ಬಂತಂದ್ರೆ ಸಾಕು ಇಡೀ ಶಾಲಾ ಕಟ್ಟಡ ನೀರಿನಲ್ಲಿ ಆವೃತವಾಗಿರುತ್ತೆ. ಹೀಗಾಗಿ ಮಕ್ಕಳು ಶಾಲೆಯ ಹೊರಗೆ ಕುಳಿತು ಪಾಠ ಕೇಳಬೇಕು. ಅಷ್ಟಕ್ಕೂ ಈ ಶಾಲೆ ಯಾವುದು ಎಲ್ಲಿ ಅಂತೀರಾ ಈ ಸ್ಟೊರಿ ನೋಡಿ.​

ಚಿಕ್ಕಬಳ್ಳಾಪುರ(ಜೂನ್ 08): ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಸೌಲಭ್ಯಗಳನ್ನು ಕೊಡ್ತಿವಿ ಅಂತಾ ಸರ್ಕಾರ ಹೇಳುತ್ತಿದೆ. ಆದ್ರೆ ಈ ತಾಲೂಕಿನ ಮಂಡಿಕಲ್ಲು ಗ್ರಾಮದಲ್ಲಿರುವ ಸರಕಾರೀ ಶಾಲೆಯ ದುರವಸ್ಥೆ ಎಂಥವರನ್ನೂ ಕೆರಳಿಸುತ್ತದೆ. ಮಳೆ ಬಂದರೆ ಸಾಕು ಶಾಲೆಯ ಕೊಠಡಿಯೊಳಗೆಲ್ಲಾ ನೀರು ತುಂಬಿಕೊಳ್ಳುತ್ತದೆ. ಇಲ್ಲಿ ಮಕ್ಕಳು ಪಾಠ ಕಲಿಯುವುದಾದರೂ ಹೇಗೆ? ಮಳೆ ನಿಂತ ನಂತರ ಶಾಲೆಯಿಂದ ಹೊರಗೆ ಬಂದು ಮಕ್ಕಳು ಪಾಠ ಕೇಳಬೇಕಾದ ಕರ್ಮವಿದೆ.

ಗಮನಾರ್ಹವೆಂದರೆ, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ. ಕೆ.ಸುಧಾಕರ್ ಅವರ ಗ್ರಾಮದ ಪಕ್ಕದ ಊರಿನಲ್ಲೇ ಈ ಶಾಲೆ ಇದೆ. ಸುಮಾರು 3 ಸಾವಿರ ಮನೆಗಳಿರುವ ಈ ಗ್ರಾಮಕ್ಕೆ ಇರುವುದು ಇದೊಂದೇ ಸರ್ಕಾರಿ ಶಾಲೆ. ಪ್ರಾಥಮಿಕ ಶಾಲೆಯಾಗಿರುವ ಇಲ್ಲಿ 1 ರಿಂದ 5ನೇ ತರಗತಿ ವೆರೆಗೆ 60 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 3 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಅಂದರೆ 1935ರಲ್ಲಿ ನಿರ್ಮಾಣವಾದ ಈ ಶಾಲಾ ಕಟ್ಟಡ ಪ್ರಸ್ತುತ ಶಿಥಿಲಾವಸ್ಥೆ ತಲುಪಿದೆ. ಯಾವುದೇ ಕ್ಷಣದಲ್ಲಿ ಕುಸಿಯುವ ಹಂತದಲ್ಲಿರುವುದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜೀವ ಕೈಯಲ್ಲಿ ಹಿಡಿದು ಪಾಠ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇನ್ನು, ಈ ಸಮಸ್ಯೆ ಬಗ್ಗೆ ಸುವರ್ಣ ನ್ಯೂಸ್ ವಾಹಿನಿಯು ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಿಇಓ ಶ್ರೀಕಂಠಯ್ಯ ಅವರು ಪರಿಶೀಲನೆ ನಡೆಸಿದ್ದಾರೆ. ಕಳೆದ ವರ್ಷವೇ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ, ಏನೂ ಪ್ರಯೋಜನವಾಗಿಲ್ಲ. ಮತ್ತೊಮ್ಮೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದ್ದಾರೆ.

ಈಗಾಗಲೇ ಖಾಸಗಿ ಶಾಲೆಗಳ  ಅಬ್ಬರಕ್ಕೆ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆ ಆಗಿದೆ. ಆದ್ರೆ ಇಲ್ಲಿ ಸಾಕಷ್ಟು ವಿದ್ಯಾರ್ಥಿಗಳು ದಾಖಲಾಗಿದ್ದರೂ ಸಮಸ್ಯೆಗಳ ಸರಮಾಲೆಯೇ ಇದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡ ಸಮಸ್ಯೆ ಬಗೆಹರಿಸಿಬೇಕಿದೆ. ಇಲ್ಲದಿದ್ದರೆ ಗ್ರಾಮಸ್ಥರು ಈ ಶಾಲೆಗೆ ಮಕ್ಕಳನ್ನು ಕಳುಹಿಸಲು ಧೈರ್ಯ ತೋರಲಾರರು. ಮುಂದೊಂದು ದಿನ ಶಾಲೆಯನ್ನೇ ಮುಚ್ಚಬೇಕಾದ ಸ್ಥಿತಿ ನಿರ್ಮಾಣವಾಗಬಹುದು.

- ರವಿಕುಮಾರ್ ವಿ., ಸುವರ್ಣ ನ್ಯೂಸ್

click me!