ಪ್ರಿಯಾಂಕಾಗೆ ಪೂರ್ವ ಉತ್ತರ ಪ್ರದೇಶದ ಜವಾಬ್ದಾರಿ ಏಕೆ?

By Web DeskFirst Published Jan 24, 2019, 8:14 AM IST
Highlights

ಕೊನೆಗೂ ಗಾಂಧಿ ಕುಟುಂಬದ ಪುತ್ರಿ ಪ್ರಿಯಾಂಕ ಗಾಮಧಿ ಸಕ್ರೀಯ ರಾಜಕಾರಣವನ್ನು  ಪ್ರವೇಶ ಮಾಡಿದ್ದಾರೆ. ಅವರಿಗೆ  ಉತ್ತರ ಪ್ರದೇಶ ಜವಾಬ್ದಾರಿಯನ್ನು ನೀಡಲಾಗಿದ್ದು, ಅದರ ಹಿಂದೆ ಪ್ರಮುಖ ಕಾರಣವೊಂದಿದೆ. 

ನವದೆಹಲಿ: ಮುಂದಿನ 3 ತಿಂಗಳಲ್ಲಿ ಲೋಕಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಶತಾಯಗತಾಯ ಮಣಿಸಲೇಬೇಕೆಂಬ ಹಟಕ್ಕೆ ಬಿದ್ದಿರುವ ಕಾಂಗ್ರೆಸ್‌, ತನ್ನ ಬತ್ತಳಿಕೆಯಲ್ಲಿದ್ದ ‘ಬ್ರಹ್ಮಾಸ್ತ್ರ’ವನ್ನು ಕೊನೆಗೂ ಪ್ರಯೋಗ ಮಾಡಿದೆ. 

ರಾಜಕಾರಣದ ಪಡಸಾಲೆಯಲ್ಲೇ ಇದ್ದರೂ, ಮಹತ್ವದ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದ್ದರೂ ಸಕ್ರಿಯ ರಾಜಕಾರಣದಿಂದ ಅಧಿಕೃತವಾಗಿ ಅಂತರ ಕಾಯ್ದುಕೊಂಡಿದ್ದ ತಮ್ಮ ಸೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಬುಧವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ದಿಢೀರ್‌ ನೇಮಕ ಮಾಡಿ ಸಂಚಲನ ಮೂಡಿಸಿದ್ದಾರೆ.

ಬಿಹಾರ ಗಡಿಗೆ ಹೊಂದಿಕೊಂಡಂತಿರುವ ಉತ್ತರಪ್ರದೇಶದ ಪೂರ್ವ ಭಾಗ ಹಿಂದುಳಿದ ಪ್ರದೇಶ. ಬಿಜೆಪಿಯನ್ನು ಅಧಿಕಾರದ ಗದ್ದುಗೆ ಬಳಿಗೆ ತಂದು ನಿಲ್ಲಿಸಿದ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆ, ಪುಣ್ಯ ಕ್ಷೇತ್ರಗಳಾದ ವಾರಾಣಸಿ ಹಾಗೂ ಗೋರಕ್‌ಪುರಗಳು ಪೂರ್ವ ಭಾಗದಲ್ಲೇ ಬರುತ್ತವೆ. 

ಒಟ್ಟು 40 ಲೋಕಸಭಾ ಕ್ಷೇತ್ರಗಳು ಈ ಸೀಮೆಯಲ್ಲಿವೆ. ಕಾಂಗ್ರೆಸ್‌ ಇಲ್ಲಿ ಬಲಿಷ್ಠವಾದರೆ, ನೆರೆಯ ಬಿಹಾರದ ಪಶ್ಚಿಮ ಭಾಗದಲ್ಲೂ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರವಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಸ್ವಕ್ಷೇತ್ರ ವಾರಾಣಸಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು 5 ಬಾರಿ ಪ್ರತಿನಿಧಿಸಿದ್ದ ಗೋರಖ್‌ಪುರ ಲೋಕಸಭಾ ಕ್ಷೇತ್ರಗಳು ಪೂರ್ವ ಉತ್ತರಪ್ರದೇಶದ ವ್ಯಾಪ್ತಿಯಲ್ಲಿವೆ. 

ಈ ಭಾಗದಲ್ಲಿ ಬಿಜೆಪಿ ಮಣಿಸಿದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಬಹುದು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ.

click me!