ಪೆರೋಲ್ ಮೇಲೆ ಹೋದ ಕೈದಿ 8 ವರ್ಷದ ಬಳಿಕ ಅರೆಸ್ಟ್

By Suvarna Web DeskFirst Published Jan 27, 2018, 8:30 AM IST
Highlights

ಎಂಟು ವರ್ಷದ ಹಿಂದೆ ಪೆರೋಲ್ ಪಡೆದು ಜೈಲಿ ನಿಂದ ಹೊರಬಂದ ಕೈದಿಯೊಬ್ಬ, ನಂತರ ಪತ್ನಿಯ ತಂಗಿಯನ್ನೇ ವಿವಾಹವಾಗಿದಲ್ಲದೆ ಜೈಲಿಗೆ ಮರಳದೆ ನಾಪತ್ತೆಯಾಗಿದ್ದು ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬೆಂಗಳೂರು (ಜ.27): ಎಂಟು ವರ್ಷದ ಹಿಂದೆ ಪೆರೋಲ್ ಪಡೆದು ಜೈಲಿ ನಿಂದ ಹೊರಬಂದ ಕೈದಿಯೊಬ್ಬ, ನಂತರ ಪತ್ನಿಯ ತಂಗಿಯನ್ನೇ ವಿವಾಹವಾಗಿದಲ್ಲದೆ ಜೈಲಿಗೆ ಮರಳದೆ ನಾಪತ್ತೆಯಾಗಿದ್ದು ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತಮಿಳುನಾಡಿನ ಕೃಷ್ಣಗಿರಿ ಮೂಲದ ವೆಂಕಟೇಶ್ ಎಂಬಾತನೇ ಚಾಲಾಕಿ ಕೈದಿಯಾಗಿದ್ದು, ಅಣ್ಣನಿಗೆ ಪೆರೋಲ್‌ಗೆ ಸಹಕರಿಸಿದ ಆರೋಪದ ಮೇರೆಗೆ ವೆಂಕಟೇಶ್‌ನ ಸೋದರ ಮುರಳಿ ಸಹ ಜೈಲು ಪಾಲಾಗಿದ್ದಾನೆ.

ಏನೀದು ಘಟನೆ?: ಕೃಷ್ಣಗಿರಿಯ ವೆಂಕಟೇಶ್, ಯಶವಂತಪುರದ ಆರ್‌ಎಂಸಿ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ. ಆತ, 2005ರಲ್ಲಿ ಪತ್ನಿ ಯನ್ನು ಕೊಲೆ ಮಾಡಿದ್ದ. ಈ ಹತ್ಯೆ ಪ್ರಕರಣದಲ್ಲಿ ಆತನನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಂತರ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, 2009ರಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ವೆಂಕಟೇಶ್,ಎರಡು ಬಾರಿ ಪೆರೋಲ್ ಪಡೆದು ಜೈಲಿನಿಂದ ಹೊರ ಬಂದಿದ್ದ. ಆದರೆ ಮೂರನೇ ಬಾರಿಗೆ ಆತ ಕಾರಾಗೃಹ ಅಧಿಕಾರಿಗಳಿಗೆ ದ್ರೋಹ ಬಗೆದ. 2010ರಲ್ಲಿ ಪೆರೋಲ್ ಪಡೆದು ಮತ್ತೆ ಜೈಲಿಗೆ ಮರಳದೆ ತಪ್ಪಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

ನಾದಿನಿ ಜತೆ ಮದುವೆ : ಪೆರೋಲ್ ಪಡೆದು ಊರಿಗೆ ಹೋದ ವೆಂಕಟೇಶ್, ಅಲ್ಲಿ ತನ್ನ ನಾದಿನಿಯನ್ನು ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದನು. ತನ್ನ ಅಣ್ಣನಿಗೆ ಪೆರೋಲ್ ಕೊಡಿಸುವಾಗ ಶ್ಯೂರಿಟಿ ಕೊಟ್ಟಿದ್ದ ವೆಂಕಟೇಶ್ ಸೋದರ ಮುರಳಿ, ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದ. ಅದರಂತೆ ಆತನ ವಿಳಾಸಕ್ಕೆ ತೆರಳಿದ ಪೊಲೀಸರಿಗೆ, ಮುರಳಿ ಸುಳ್ಳು ದಾಖಲಿಸಿರುವ ಸಂಗತಿ ಗೊತ್ತಾಯಿತು. ಬಳಿಕ ಎರಡು ದಿನಗಳ ಹಿಂದೆ ಮತ್ತೆ ವೆಂಕಟೇಶ್‌ನ ಊರಿಗೆ ಪೊಲೀಸರು ಹೋಗಿದ್ದರು. ಆಗ ಪೊಲೀಸರಿಗೆ ಮುರಳಿ ಸಿಕ್ಕಿಬಿದ್ದಿದ್ದಾನೆ. ಆತನ ವಿಚಾರಣೆ ನಡೆಸಿದಾಗ ವೆಂಕಟೇಶ್ ಸಹ ಪತ್ತೆಯಾಗಿದ್ದಾನೆ.

click me!