ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಮೇಲೆ ಒತ್ತಡ

By Suvarna Web DeskFirst Published Apr 11, 2017, 6:05 AM IST
Highlights

ಸಹಕಾರ ಸಚಿವ ಮಹದೇವ ಪ್ರಸಾದ್‌ ಅವರ ಅಕಾಲಿಕ ನಿಧನ ಹಾಗೂ ಎಚ್‌.ವೈ. ಮೇಟಿ ರಾಜಿನಾಮೆ ಹಿನ್ನೆಲೆಯಲ್ಲಿ ತೆರವಾಗಿರುವ ಸಚಿವ ಸಂಪುಟದ ಎರಡು ಸ್ಥಾನಗಳ ಭರ್ತಿಗೆ ತೀವ್ರ ಒತ್ತಡ ಬರುತ್ತಿದೆ. ಸರ್ಕಾರದ ಅವಧಿ ಒಂದು ವರ್ಷದಲ್ಲಿ ಮುಗಿಯಲಿದ್ದು, ಆದಷ್ಟುಬೇಗ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳ ಆಪ್ತರು ಹಾಗೂ ಸಚಿವ ಸ್ಥಾನದ ಆಕಾಂಕ್ಷಿಗಳು ಒತ್ತಾಯಿಸುತ್ತಿದ್ದಾರೆ.

ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ತೀವ್ರಗೊಂಡಿದ್ದು, ಗುಂಡ್ಲುಪೇಟೆ- ನಂಜನ ಗೂಡು ಉಪಚುನಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ವಿಧಾನಪರಿಷತ್‌ ಸದಸ್ಯರ ನೇಮಕದ ಆಧಾರದ ಮೇಲೆ ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬುದು ನಿರ್ಧಾರವಾಗಲಿದೆ.

ಸಹಕಾರ ಸಚಿವ ಮಹದೇವ ಪ್ರಸಾದ್‌ ಅವರ ಅಕಾಲಿಕ ನಿಧನ ಹಾಗೂ ಎಚ್‌.ವೈ. ಮೇಟಿ ರಾಜಿನಾಮೆ ಹಿನ್ನೆಲೆಯಲ್ಲಿ ತೆರವಾಗಿರುವ ಸಚಿವ ಸಂಪುಟದ ಎರಡು ಸ್ಥಾನಗಳ ಭರ್ತಿಗೆ ತೀವ್ರ ಒತ್ತಡ ಬರುತ್ತಿದೆ. ಸರ್ಕಾರದ ಅವಧಿ ಒಂದು ವರ್ಷದಲ್ಲಿ ಮುಗಿಯಲಿದ್ದು, ಆದಷ್ಟುಬೇಗ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳ ಆಪ್ತರು ಹಾಗೂ ಸಚಿವ ಸ್ಥಾನದ ಆಕಾಂಕ್ಷಿಗಳು ಒತ್ತಾಯಿಸುತ್ತಿದ್ದಾರೆ.

ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ವಿಸ್ತರಣೆಯನ್ನು ತ್ವರಿತವಾಗಿ ಮಾಡುತ್ತಾರೆಯೇ ಅಥವಾ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಾರೆಯೇ ಎಂಬುದು ಗುಂಡ್ಲುಪೇಟೆ-ನಂಜನಗೂಡು ಉಪ ಚುನಾವಣೆ ಫಲಿತಾಂಶ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಿಂದ ನಿರ್ಧಾರವಾ ಗಲಿದೆ ಎಂದು ಮೂಲಗಳು ತಿಳಿಸಿವೆ.

ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಎರಡೂ ಕ್ಷೇತ್ರದಲ್ಲಿ ಜಯ ಸಾಧಿಸಿದರೆ ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸ್ವಂತ ನಿರ್ಧಾರ ತೆಗೆದುಕೊಳ್ಳಬಹುದು. ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದರೆ ಅಥವಾ ಎರಡೂ ಕ್ಷೇತ್ರದಲ್ಲಿ ಸೋತರೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ತಮ್ಮ ನಿರ್ಧಾರ ಬದಲಿಸಬಹುದು. ಒಂದು ವೇಳೆ ಮಹದೇವ ಪ್ರಸಾದ್‌ ಪತ್ನಿ ಗೀತಾ ಜಯ ಸಾಧಿಸಿದರೆ ಸಹಜವಾಗಿಯೇ ತಮ್ಮ ಪತಿಯಿಂದ ತೆರವಾದ ಸಚಿವ ಸ್ಥಾನ ಅವರಿಗೆ ದೊರೆಯುವ ಸಾಧ್ಯತೆ ಇದೆ. ಹೀಗಾಗಿ ಉಪ ಚುನಾವಣೆ ಬಳಿಕವೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳು ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಈಗಾಗಲೇ ಕೂಗು ಕೇಳಿ ಬರುತ್ತಿದ್ದು, ಹಲವು ಹಿರಿಯ ನಾಯಕರು ಸ್ಪರ್ಧೆಗೆ ಇಳಿದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದಾಗಲೇ ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಹೈಕಮಾಂಡ್‌ ಜತೆ ಚರ್ಚಿಸುವ ಸಾಧ್ಯತೆ ಇದೆ. ಡಿ.ಕೆ. ಶಿವಕುಮಾರ್‌, ಎಸ್‌.ಆರ್‌. ಪಾಟೀಲ್‌ ಸೇರಿದಂತೆ ಹಲವರು ಆಕಾಂಕ್ಷಿಗಳ ಸ್ಥಾನದಲ್ಲಿದ್ದು, ಯಾವುದೇ ಸಚಿವರು ಕೆಪಿಸಿಸಿ ಅಧ್ಯಕ್ಷರಾದರೆ ಸಚಿವ ಸ್ಥಾನ ತ್ಯಾಗ ಮಾಡಬೇಕಾಗಬಹುದು. ಆಗ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ಮಾಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಉಪ ಚುನಾವಣೆ ಫಲಿತಾಂಶ ಹಾಗೂ ಕೆಪಿಸಿಸಿ ಅಧ್ಯಕ್ಷರ ನೇಮಕದ ಆಧಾರದ ಮೇಲೆ ಸಚಿವ ಸಂಪುಟ ವಿಸ್ತರಣೆ ತ್ವರಿತವಾಗಿ ನಡೆಯು ತ್ತದೆಯೇ ಅಥವಾ ತಡವಾಗುತ್ತದೆಯೇ ಎಂಬುದು ನಿರ್ಧಾರವಾಗಲಿದೆ.

ಇನ್ನು ಸಚಿವ ಸಂಪುಟ ವಿಸ್ತರಣೆಗೆ ಮೊದಲು ಖಾಲಿ ಇರುವ ವಿಧಾನಪರಿಷತ್‌ ಸದಸ್ಯ ಸ್ಥಾನಗಳನ್ನು ತುಂಬಲೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!