ರಾಷ್ಟ್ರಪತಿ ಚುನಾವಣೆ:ರಾಜ್ಯದಲ್ಲಿ 222 ಶಾಸಕರು,ಕೇಂದ್ರದಲ್ಲಿ 768 ಸಂಸದರಿಂದ ಮತ

By Suvarna Web DeskFirst Published Jul 17, 2017, 11:24 PM IST
Highlights

ಜೆಡಿಎಸ್​ನಿಂದ ಅಮಾನತುಗೊಂಡಿರುವ ಶಾಸಕ ಚೆಲುವರಾಯಸ್ವಾಮಿ ಹಾಗೂ ಜೆಡಿಎಸ್ ಶಾಸಕ ವೈಎಸ್​ವಿ ದತ್ತ ಮತದಾನಕ್ಕೆ ಗೈರುಹಾಜರಾಗಿದ್ರು. ಸಂಸದ ಪ್ರಕಾಶ್​ ಹುಕ್ಕೇರಿ ಕೂಡ ಲೋಕಸಭೆಯ ಕಾರ್ಯದರ್ಶಿಗಳಿಂದ ಅನುಮತಿ ಪಡೆದಿದ್ದ ಹಿನ್ನಲೆಯಲ್ಲಿ ರಾಜ್ಯದಲ್ಲೇ ಮತ ಚಲಾಯಿಸಿದರು.

ಬೆಂಗಳೂರು(ಜು.17): ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿ ಚುನಾವಣೆ ರಾಜ್ಯದಲ್ಲೂ ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆದಿದೆ. 224 ಶಾಸಕರ ಪೈಕಿ 222 ಶಾಸಕರು ತಮ್ಮ ಮತವನ್ನ ದಾಖಲಿಸಿದರು.

ಜೆಡಿಎಸ್​ನಿಂದ ಅಮಾನತುಗೊಂಡಿರುವ ಶಾಸಕ ಚೆಲುವರಾಯಸ್ವಾಮಿ ಹಾಗೂ ಜೆಡಿಎಸ್ ಶಾಸಕ ವೈಎಸ್​ವಿ ದತ್ತ ಮತದಾನಕ್ಕೆ ಗೈರುಹಾಜರಾಗಿದ್ರು. ಸಂಸದ ಪ್ರಕಾಶ್​ ಹುಕ್ಕೇರಿ ಕೂಡ ಲೋಕಸಭೆಯ ಕಾರ್ಯದರ್ಶಿಗಳಿಂದ ಅನುಮತಿ ಪಡೆದಿದ್ದ ಹಿನ್ನಲೆಯಲ್ಲಿ ರಾಜ್ಯದಲ್ಲೇ ಮತ ಚಲಾಯಿಸಿದರು.

ಹೀಗೆ ಒಟ್ಟು 223 ಮತಗಳು ಇಂದು ರಾಜ್ಯದಲ್ಲಿ ದಾಖಲಾದವು. ಬಿಜೆಪಿ ಶಾಸಕ ಸಿ.ಟಿ. ರವಿ ಮೊದಲ ಮತ ಚಲಾಯಿಸಿದರೆ, ಕಾಂಗ್ರೆಸ್ ಶಾಸಕ ಸತೀಶ್​ ಜಾರಕಿಹೊಳಿ ಕೊನೆಯ ಮತ ಚಲಾಯಿಸಿದರು. ರಾಷ್ಟ್ರಪತಿ ಚುನಾವಣೆಯಲ್ಲೂ ಅಡ್ಡ ಮತದಾನ ನಡೆದಿರುವ ಸಾಧ್ಯತೆ ನಿಚ್ಚಳವಾಗಿದೆ. ಜೆಡಿಎಸ್​ನಿಂದ ಅಮಾನತುಗೊಂಡಿರುವ ಶಾಸಕರ ಪೈಕಿ ಚೆಲುವರಾಯಸ್ವಾಮಿ ಹೊರತುಪಡಿಸಿ ಉಳಿದವರೆಲ್ಲ ಸಿಎಂ ಸಿದ್ದರಾಮಯ್ಯ ಜತೆ ಆಗಮಿಸಿ ಕಾಂಗ್ರೆಸ್ ಪರ ಮತ ಚಲಾಯಿಸಿದ್ರು. ಬಿಎಸ್​ಆರ್​ ಕಾಂಗ್ರೆಸ್​ನ ಮೂವರು ಶಾಸಕರು ಹಾಗೂ ಸುಮಾರು 7 ಪಕ್ಷೇತರರು ಬಿಜೆಪಿ ಪರ ಮತ ಚಲಾಯಸಿದ್ದಾರೆ ಎನ್ನಲಾಗಿದೆ. ಚುನಾವಣೆಯ ನಂತರ ಸುದ್ದಿಗೊಷ್ಟಿ ನಡೆಸಿದ ಚುನಾವಣಾಧಿಕಾರಿ ಎಸ್​. ಮೂರ್ತಿ, ಮತಪೆಟ್ಟಿಗೆಗಳ ಇಂದೇ ವಿಮಾನದಲ್ಲಿ ಕೊಂಡೊಯ್ದು ಕೇಂದ್ರ ಚುನಾವಣಾ ಆಯೋಗಕ್ಕೆ ತಲುಪಿಸುವುದಾಗಿ ತಿಳಿಸಿದರು.

ದೇಶದ ಮೊದಲ ಪ್ರಜೆ ಆಯ್ಕೆಗೆ ಶೇ.99 ಪ್ರತಿನಿಧಿಗಳಿಂದ ಮತದಾನ

ನವದೆಹಲಿ(ಜು.17): ಅರ್ಹ 771 ಸಂಸದರಲ್ಲಿ 768 ಸಂಸದರು ಮತ ಹಾಕಿದ್ದಾರೆ. 4 ಖಾಲಿ ಸ್ಥಾನಗಳಿದ್ದು, ಓರ್ವ ಸಂಸದ ಅನರ್ಹರಾಗಿದ್ದಾರೆ.  ಮತ ಹಾಕದ ಮೂವರಲ್ಲಿ ಮಾಜಿ ಕೇಂದ್ರ ಸಚಿವ ಡಾ| ಅನ್ಬುಮಣಿ ರಾಮದಾಸ್ ಪ್ರಮುಖರು. ಇನ್ನು 54 ಸಂಸದರು ತಮ್ಮ ರಾಜ್ಯಗಳಲ್ಲಿ ಮತ ಹಾಕಲು ಅನುಮತಿ ಪಡೆದಿದ್ದರು. ಒಟ್ಟು 4896 ಮತದಾರರು ಇದ್ದರು. ಇವರಲ್ಲಿ 4120 ಶಾಸಕರು ಹಾಗೂ 776 ಸಂಸದರು.

ಎಷ್ಟು ಶಾಸಕರು, ಸಂಸದರ ಮತ ಚಲಾವಣೆ?

ಇನ್ನು ಅರ್ಹ 4109 ಶಾಸಕರಲ್ಲಿ 4083 ಶಾಸಕರು ಮತ ಹಾಕಿದ್ದಾರೆ. ಓರ್ವ ಶಾಸಕ ಅನರ್ಹನಾಗಿದ್ದರೆ, 10 ಖಾಲಿ ಇವೆ. ಬೇರೆಡ ಮತದಾನ: ಈ ಬಾರಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಗೋವಾ ಸಿಎಂ ಮನೋಹರ್ ಪರ‌್ರಿಕರ್ ಸೇರಿದಂತೆ 55 ಸಂಸದರಿಗೆ ರಾಜ್ಯ ವಿಧಾನಸಭೆಗಳಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಬಹುನಿರೀಕ್ಷಿತ 14ನೇ ರಾಷ್ಟ್ರಪತಿ ಚುನಾವಣೆಗೆ ಸಂಸತ್ ಮತ್ತು ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿ ಸೋಮವಾರ ಮತದಾನ ನಡೆದಿದ್ದು, ಶೇ.99ರಷ್ಟು ಮತದಾನವಾಗಿದೆ. ಜುಲೈ 20ರ ಬೆಳಗ್ಗೆ 11ಕ್ಕೆ ಆರಂಭವಾಗುವ ಮತ ಎಣಿಕೆಯತ್ತ ದೃಷ್ಟಿ ನೆಟ್ಟಿದೆ. ಅದೇ ದಿನ ಸಂಜೆ ಫಲಿತಾಂಶ ಪ್ರಕಟವಾಗಲಿದೆ. ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅವಧಿ ಜುಲೈ ೨೫ಕ್ಕೆ ಮುಗಿಯಲಿದೆ.

11 ರಾಜ್ಯಗಳಲ್ಲಿ ಶೇ.100 ಮತದಾನ

ಅರುಣಾಚಲ ಪ್ರದೇಶ, ಛತ್ತೀಸ್‌ಗಢ, ಅಸ್ಸಾಂ, ಗುಜರಾತ್, ಬಿಹಾರ, ಹರ್ಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ, ಉತ್ತರಾಖಂಡ, ನಾಗಾಲ್ಯಾಂಡ್ ಹಾಗೂ ಪುದುಚೇರಿಯಲ್ಲಿ ಶೇ.100ರಷ್ಟು ಮತದಾನವಾಯಿತು

click me!