ಬ್ರ್ಯಾಂಡ್ ಬೆಂಗಳೂರಿಗೆ ಭಾರಿ ಸಿದ್ಧತೆ

Published : Dec 22, 2017, 07:37 AM ISTUpdated : Apr 11, 2018, 12:50 PM IST
ಬ್ರ್ಯಾಂಡ್ ಬೆಂಗಳೂರಿಗೆ ಭಾರಿ ಸಿದ್ಧತೆ

ಸಾರಾಂಶ

ಉದ್ಯಾನನಗರಿಗೆ ‘ಬ್ರ್ಯಾಂಡ್ ಬೆಂಗಳೂರು’ ಅಡಿ ಜಾಗತಿಕ ಮಟ್ಟದಲ್ಲಿ ಪ್ರತ್ಯೇಕ ಗುರುತು ತಂದುಕೊಡುವ ಸಲುವಾಗಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಮೊದಲ ಭಾಗವಾಗಿ ಡಿ.24 ರಂದು ಭಾನುವಾರ ವಿಧಾನಸೌಧದ ಮುಂಭಾಗ ನಡೆಯಲಿರುವ ಕಾರ್ಯಕ್ರಮದಲ್ಲಿ ‘ಬ್ರ್ಯಾಂಡ್ ಬೆಂಗಳೂರು’ ಪ್ರತ್ಯೇಕ ಲಾಂಛನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಬೆಂಗಳೂರು (ಡಿ.22):  ಉದ್ಯಾನನಗರಿಗೆ ‘ಬ್ರ್ಯಾಂಡ್ ಬೆಂಗಳೂರು’ ಅಡಿ ಜಾಗತಿಕ ಮಟ್ಟದಲ್ಲಿ ಪ್ರತ್ಯೇಕ ಗುರುತು ತಂದುಕೊಡುವ ಸಲುವಾಗಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಮೊದಲ ಭಾಗವಾಗಿ ಡಿ.24 ರಂದು ಭಾನುವಾರ ವಿಧಾನಸೌಧದ ಮುಂಭಾಗ ನಡೆಯಲಿರುವ ಕಾರ್ಯಕ್ರಮದಲ್ಲಿ ‘ಬ್ರ್ಯಾಂಡ್ ಬೆಂಗಳೂರು’ ಪ್ರತ್ಯೇಕ ಲಾಂಛನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ದೇಶದಲ್ಲೇ ಮೊದಲ ಬಾರಿಗೆ ನಗರವೊಂದರ ಬ್ರ್ಯಾಂಡಿಂಗ್ ಗಾಗಿ ಲಾಂಛನ ಬಿಡುಗಡೆಗೊಳಿಸಿದ ಖ್ಯಾತಿಗೆ ಸಿಲಿಕಾನ್ ಸಿಟಿ ಪಾತ್ರವಾಗಲಿದೆ. ಜತೆಗೆ ಬೆಂಗಳೂರಿಗೆ ಆಗಮಿಸುವ ಪ್ರವಾಸಿಗರಿಗೆ ಎಲ್ಲಾ ರೀತಿಯಲ್ಲೂ ನೆರವಾಗಬಲ್ಲ ‘ಮೊಬೈಲ್ ಆ್ಯಪ್’ ಕೂಡ ಬಿಡುಗಡೆಗೊಳ್ಳಲಿದೆ. ಅಲ್ಲದೇ ವಿಧಾನಸೌಧದ ಮುಂಭಾಗ ‘ನಮ್ಮ ಬೆಂಗಳೂರು ಹಬ್ಬ’ ಆಚರಣೆಗೆ ಪ್ರವಾಸೋದ್ಯಮ ಇಲಾಖೆ ಸಿದ್ಧತೆ ನಡೆಸಿದೆ ಎಂದು ಐಟಿ-ಬಿಟಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಇದೆಲ್ಲದಕ್ಕೂ ಮುಖ್ಯವಾಗಿ ಡಿ.24 ರಂದು ಭಾನುವಾರ ವಿಧಾನಸೌಧದ ಮುಂಭಾಗ ‘ಓಪನ್ ಸ್ಟ್ರೀಟ್’ ಮಾಡಲಾಗುವುದು. ಈ ಹಿಂದೆ ಎಂ.ಜಿ. ರಸ್ತೆ, ಕೋರಮಂಗಲದಲ್ಲಿ ಆಯೋಜಿಸಿದ್ದ ಮಾದರಿಯಲ್ಲಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಸಾರ್ವಜನಿಕರ ಮನರಂಜನೆಗೆ ವೇದಿಕೆ ಕಲ್ಪಿಸಿಕೊಡಲಾಗುವುದು. ವಿಧಾನಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ವೀದಿಯಲ್ಲಿ ಸ್ಥಳೀಯ ಕಲೆಗಳ ಪ್ರದರ್ಶನ, ಫುಡ್‌ಕೋರ್ಟ್, ಫ್ಯಾಬ್ ಡ್ಯಾನ್ಸ್ ಸೇರಿದಂತೆ ನಗರ ನಾಗರೀಕರು ಖುಷಿಯಿಂದ ಭಾಗವಹಿಸಲು ಅಗತ್ಯವಾದ ಎಲ್ಲಾ ಅವಕಾಶಗಳನ್ನು ಸೃಷ್ಟಿಸಲಾಗುವುದು ಎಂದು ಅವರು ತಿಳಿಸಿದರು.

ವಿಧಾನಸೌಧಕ್ಕೆ ಅವಕಾಶ: ವಜ್ರಮಹೋತ್ಸವ ಸೇರಿದಂತೆ ಪ್ರತಿ ಕಾರ್ಯಕ್ರಮದಲ್ಲೂ ವಿಧಾನಸೌಧ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗುತ್ತದೆ. ಈ ಮೊದಲು ಸಾರ್ವಜನಿಕರು ವಿಧಾನಸೌಧದ ಮುಂಬಾಗಿಲ್ಲಿರುವ ಮೆಟ್ಟಿಲವರೆಗೂ ಹೋಗಬಹುದಿತ್ತು. ಆದರೆ ಪ್ರಸ್ತುತ ಭದ್ರತಾ ಕಾರಣಗಳಿಗಾಗಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ. ಭಾನುವಾರ ಒಂದು ದಿನವಾದರೂ ಸಾರ್ವಜನಿಕರಿಗೆ ವಿಧಾನಸೌಧದ ಮೆಟ್ಟಿಲುವರೆಗೆ ಮುಕ್ತ ಪ್ರವೇಶ ಕಲ್ಪಿಸಲು ನಿರ್ಧರಿಸಲಾಗಿದೆ.

ಸಾರ್ವಜನಿಕರು ಮುಕ್ತವಾಗಿ ಆಗಮಿಸಿ ಬ್ರ್ಯಾಂಡ್ ಬೆಂಗಳೂರು ಹಬ್ಬದಲ್ಲಿ ಭಾಗವಹಿಸಬಹುದು ಎಂದು ಕರೆ ನೀಡಿದರು. ಬ್ರ್ಯಾಂಡ್ ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲು ಪ್ರವಾಸೋದ್ಯಮ ಇಲಾಖೆ ಮಂದಾಗಿದೆ. ಬೆಂಗಳೂರು ಸಿಲಿಕಾನ್ ವ್ಯಾಲಿ ಎಂದು ಪ್ರಸಿದ್ಧಿಯಾಗಿದೆಯೇ ಹೊರತು ಉದ್ಯಾನನಗರಿ, ಕೆರೆಗಳ ನಗರಿ, ಹಿರಿಯ ನಾಗರೀಕರ ಸ್ವರ್ಗ ಇಂತಹ ಯಾವುದೇ ಖ್ಯಾತಿ ಹೊರದೇಶಗಳಿಗೆ ಪರಿಚಯವಾಗಿಲ್ಲ.

ಬೆಂಗಳೂರಿನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳು, ಅವುಗಳ ಇತಿಹಾಸವನ್ನು ಸ್ಥಳೀಯರು ಹಾಗೂ ವಿದೇಶಿಯರಿಗೆ ತಿಳಿಸುವುದು. ನಗರದಲ್ಲಿರುವ ಉದ್ಯಾನ, ಮ್ಯೂಸಿಯಂ, ಹೋಟೆಲ್ಸ್ ಸೇರಿದಂತೆ ಪ್ರತಿಯೊಂದಕ್ಕೂ ಬ್ರ್ಯಾಂಡ್‌ಬೆಂಗಳೂರು ಲಾಂಛನ ನೀಡಿ ಉತ್ತೇಜಿಸುವುದು. ಈ ಮೂಲಕ ಪ್ರವಾಸೋದ್ಯಮ ಆದಾಯವನ್ನೂ ಹೆಚ್ಚಳ ಮಾಡುವುದು ಬ್ರ್ಯಾಂಡ್‌ಬೆಂಗಳೂರು ಉದ್ದೇಶ ಎಂದು ಮಾಹಿತಿ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!