
ಚೆನ್ನೈ (ಡಿ. 27): ಅನೀಮಿಯಾದಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರಿಗೆ ಆಸ್ಪತ್ರೆಯೊಂದರಲ್ಲಿ ಎಚ್‌ಐವಿ ಸೋಂಕು ಇರುವ ರಕ್ತ ನೀಡಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸದೇ ರಕ್ತಪೂರೈಕೆ ಮಾಡಿದ ಖಾಸಗಿ ಲ್ಯಾಬ್‌ನ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಜೊತೆಗೆ ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, ಪ್ರಕರಣ ಕುರಿತು ತನಿಖೆಗೆ ಆದೇಶಿಸಿದೆ. ಅಲ್ಲದೆ ರಾಜ್ಯದಲ್ಲಿನ ಎಲ್ಲಾ ರಕ್ತ ಬ್ಯಾಂಕ್‌ಗಳಲ್ಲಿ ಸಂಗ್ರಹಿಸಿರುವ ರಕ್ತವನ್ನು ಮತ್ತೊಮ್ಮೆ ತಪಾಸಣೆಗೆ ಗುರಿಪಡಿಸಲು ಆದೇಶಿಸಿದೆ.
ಈ ನಡುವೆ ತಮಗೆ ಎಚ್‌ಐವಿ ಸೋಂಕು ಹೊಂದಿರುವ ರಕ್ತ ಪೂರೈಸಿದ ವೈದ್ಯರು, ನರ್ಸ್ ಮತ್ತು ರಕ್ತ ಬ್ಯಾಂಕ್‌ನ ಸಿಬ್ಬಂದಿ ವಿರುದ್ಧ ಸಂತ್ರಸ್ತ ಮಹಿಳೆ ಮತ್ತು ಆಕೆಯ ಪತಿ ದೂರು ನೀಡಿದ್ದಾರೆ.
ಏನಾಗಿತ್ತು?: ರಕ್ತಹೀನತೆಯಿಂದ ಬಳಲುತ್ತಿದ್ದ 24 ವರ್ಷದ ಗರ್ಭಿಣಿಯೊಬ್ಬರು ಡಿ.3ರಂದು ಸತ್ತೂರ್‌ನ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಆಕೆಗೆ ರಕ್ತ ಪಡೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಕದಲ್ಲೇ ಇದ್ದ ರಕ್ತ ಬ್ಯಾಂಕ್‌ನಿಂದ ರಕ್ತ ಪಡೆದು, ಆಕೆಗೆ ನೀಡಲಾಗಿತ್ತು.
ಈ ನಡುವೆ ವ್ಯಕ್ತಿಯೊಬ್ಬ ವಿದೇಶಕ್ಕೆ ತೆರಳುವ ನಿಟ್ಟಿನಲ್ಲಿ ರಕ್ತ ಪರೀಕ್ಷೆ ಮಾಡಿಸಿದ ವೇಲೆ ಎಚ್‌ಐವಿ ಸೋಂಕು ತಗುಲಿದ್ದು ಖಚಿತಪಟ್ಟಿತ್ತು. ಈ ವೇಳೆ ತಾನು ಕೆಲ ದಿನಗಳ ಹಿಂದೆ ರಕ್ತದಾನ ಶಿಬಿರವೊಂದರಲ್ಲಿ ರಕ್ತದಾನ ಮಾಡಿದ್ದು ನೆನಪಾಯ್ತು. ಹೀಗಾಗಿ ಕೂಡಲೇ ರಕ್ತಬ್ಯಾಂಕ್‌ಗೆ ತೆರಳಿ, ರಕ್ತವನ್ನು ಯಾರಿಗೂ ನೀಡದಂತೆ ಕೋರಿದ್ದ. ಆದರೆ ಅಷ್ಟರಲ್ಲಾಗಲೇ ಆ ರಕ್ತವನ್ನು ಗರ್ಭಿಣಿಯೊಬ್ಬರಿಗೆ ನೀಡಿದ್ದು ಬೆಳಕಿಗೆ ಬಂತು.
ಲ್ಯಾಬ್ ಲೋಪ: ಯಾವುದೇ ವ್ಯಕ್ತಿಯಿಂದ ರಕ್ತ ಸಂಗ್ರಹಿಸಿದ ಮೇಲೆ ಅದನ್ನು ಸೂಕ್ತ ಪರೀಕ್ಷೆಗೆ ಒಳಪಡಿಸಿದ ಬಳಿಕವಷ್ಟೇ ಬೇರೆಯವರಿಗೆ ನೀಡಬೇಕು. ಆದರೆ ಲ್ಯಾಬ್‌ನ ಸಿಬ್ಬಂದಿ ಸೂಕ್ತ ಪರೀಕ್ಷೆ ನಡೆಸದೇ ಇರುವುದೇ ಈ ಎಲ್ಲಾ ಎಡವಟ್ಟಿಗೆ ಕಾರಣ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಇದೀಗ ಮಹಿಳೆಗೆ ಎಚ್‌ಐವಿಯಿಂದ ರಕ್ಷಣೆ ನೀಡುವ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸೋಂಕು ತಗುಲಿದ ತಕ್ಷಣವೇ ಚಿಕಿತ್ಸೆ ನೀಡಿದರೆ ವ್ಯಕ್ತಿ ದೀರ್ಘ ಕಾಲ ಜೀವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಜೊತೆಗೆ ಮಗುವಿಗೆ ಸೋಂಕು ತಗಲದಂತೆಯೂ ವೈದ್ಯರು ಚಿಕಿತ್ಸೆ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.