
ಬೆಂಗಳೂರು(ಜುಲೈ 24): ಬಿಗ್ ಬಾಸ್ ವಿಜೇತ ಹಾಗು ನಟ-ನಿರ್ದೇಶಕ 'ಒಳ್ಳೆ ಹುಡುಗ' ಪ್ರಥಮ್ ಕೋರ್ಟ್'ನಲ್ಲೂ ತಮ್ಮ ಹುಚ್ಚಾಟ ಮುಂದುವರಿಸಿದ ಘಟನೆ ವರದಿಯಾಗಿದೆ. ಭುವನ್ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ 2ನೇ ಜೆಎಂಎಫ್'ಸಿ ನ್ಯಾಯಾಲಯವು ಪ್ರಥಮ್'ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆದರೆ, ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶರಿಗೆ ಪ್ರಥಮ್ ತಲೆತಿಂದ ಘಟನೆ ನಡೆಯಿತು. ಜಾಮೀನು ಕೊಡುವ ಮುಂಚೆ ನ್ಯಾಯಾಧೀಶರು ಪ್ರಥಮ್'ಗೆ ಸರಿಯಾಗಿ ಬುದ್ಧಿ ಹೇಳಿದ್ದೂ ಆಯಿತು.
ಪ್ರಥಮ್ ವರ್ತನೆ ಹೇಗಿತ್ತು..?
ಅರ್ಜಿ ವಿಚಾರಣೆ ವೇಳೆ ವಕೀಲರ ಬದಲು ತಾನೇ ಮಾತನಾಡತೊಡಗಿದ ಪ್ರಥಮ್, ತನ್ನ ವೈಯಕ್ತಿಕ ವಿಚಾರವನ್ನೆಲ್ಲಾ ಬಡಬಡಿಸತೊಡಗಿದ್ದಾರೆ. ತಾನು ಬಿಗ್ ಬಾಸ್ ಸೀಸನ್ ಫೋರ್'ನ ವಿನ್ನರ್. ನನಗೆ ಬಂದ 50 ಲಕ್ಷ ರೂಪಾಯಿ ಬಹುಮಾನದ ಹಣವನ್ನು ಯೋಧರಿಗೆ ನೀಡಿದ್ದೇನೆ ಎಂದು ತನ್ನ ಪರಿಚಯ ಮಾಡಿಕೊಂಡ ಪ್ರಥಮ್, ಈ ಪ್ರಕರಣದಲ್ಲಿ ಶೇ.80ರಷ್ಟು ಸುಳ್ಳು ಮಾಹಿತಿ ಇದೆ. ಕುತ್ತಿಗೆ ನೋವಿಗೆ ಚಿಕಿತ್ಸೆ ಪಡೆಯಲು ತಾನು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಸುಳ್ಳು ದೂರು ದಾಖಲಿಸಲಾಗಿದೆ ಎಂದೆಲ್ಲಾ ಜಡ್ಜ್ ಮುಂದೆ ಅವಲತ್ತುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಥಮ್'ರ ವಕೀಲರಿಗೂ ತಲೆಕೆಟ್ಟು, ಜಡ್ಜ್ ಕೇಳಿದ ಪ್ರಶ್ನೆಗಷ್ಟೇ ಉತ್ತರಿಸಬೇಕು ಎಂದು ಪ್ರಥಮ್'ರನ್ನು ತಿದ್ದಲು ವಿಫಲಯತ್ನ ಕೂಡ ಮಾಡಿದರು. ಅಲ್ಲದೇ, ಮಾಧ್ಯಮದವರನ್ನು ಕೋರ್ಟ್'ನಿಂದ ಹೊರಗೆ ಕಳುಹಿಸುವಂತೆ ಪ್ರಥಮ್ ಮಾಡಿಕೊಂಡ ಮನವಿಯನ್ನು ಕೋರ್ಟ್ ಪುರಸ್ಕರಿಸಿ, ಮೀಡಿಯಾದವರನ್ನು ಆಚೆ ಕಳುಹಿಸಿತು.
ಇದೇ ವೇಳೆ, ಪ್ರಥಮ್'ರ ವಿಚಿತ್ರ ವರ್ತನೆಯಿಂದ ಅಚ್ಚರಿಗೊಂಡ ನ್ಯಾ| ಪೃಥ್ವಿರಾಜ್ ವರ್ಣೀಕರ್ ಅವರು, ಪ್ರಥಮ್'ಗೆ ಒಂದಷ್ಟು ಬುದ್ಧಿವಾದ ಹೇಳಿದ್ದಾರೆ. ಕೋರ್ಟ್'ನಲ್ಲಿ ಕೇಳಿದ ಪ್ರಶ್ನೆಗಷ್ಟೇ ಉತ್ತರ ಕೊಡಬೇಕು. ತಾವು ಸೆಲಬ್ರಿಟಿಯಾಗಿದ್ದು, ಜನರಿಗೆ ತಾವು ಒಳ್ಳೆಯ ನಡತೆಯಿಂದ ದಾರಿತೋರಿಸಬೇಕು. ಈ ರೀತಿ ಹುಚ್ಚುಚ್ಚಾಗಿ ವರ್ತಿಸುವುದು ಎಷ್ಟು ಸರಿ? ಸಾರ್ವಜನಿಕ ಸ್ಥಳದಲ್ಲಿ ಸಭ್ಯವಾಗಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಜಾಮೀನು ಹೇಗೆ?
ಇದೇ ವೇಳೆ, ಭುವನ್ ಅವರ ಆರೋಗ್ಯ ಸ್ಥಿತಿ ವಿಚಾರಿಸಿದ ನ್ಯಾಯಾಧೀಶರಿಗೆ, ಭುವನ್'ಗೆ ಆದ ಗಾಯ ಗಂಭೀರವಲ್ಲವೆಂಬ ಮಾಹಿತಿ ಸಿಗುತ್ತದೆ. ಇದರಿಂದಾಗಿ, ಪ್ರಥಮ್'ಗೆ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರಥಮ್'ರಿಂದ 5 ಸಾವಿರ ರೂ ಕ್ಯಾಷ್ ಶೂರಿಟಿಯನ್ನು ಪಡೆದ ಕೋರ್ಟ್, ಜುಲೈ 31ರಂದು ವಿಚಾರಣೆಗೆ ಹಾಜರಾಗುವಂತೆ ಪ್ರಥಮ್'ಗೆ ಸೂಚನೆ ನೀಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.