ಕೇಂದ್ರ ಸರ್ಕಾರದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ, ಉದ್ಘಾಟಿಸಿಕೊಂಡು ತಿರುಗಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂವಿಧಾನಾತ್ಮಕ ಹುದ್ದೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ತಮ್ಮ ಪುತ್ರನಿಗೆ ಪ್ರಬುದ್ಧತೆಯ ಪಾಠ ಹೇಳಿಕೊಡಲಿ ಎಂದು ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪಸಿಂಹ ತಿರುಗೇಟು ನೀಡಿದರು.
ಮೈಸೂರು (ಜು.14): ಕೇಂದ್ರ ಸರ್ಕಾರದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ, ಉದ್ಘಾಟಿಸಿಕೊಂಡು ತಿರುಗಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂವಿಧಾನಾತ್ಮಕ ಹುದ್ದೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ತಮ್ಮ ಪುತ್ರನಿಗೆ ಪ್ರಬುದ್ಧತೆಯ ಪಾಠ ಹೇಳಿಕೊಡಲಿ ಎಂದು ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪಸಿಂಹ ತಿರುಗೇಟು ನೀಡಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ, ಕೇಂದ್ರದ ಅನುದಾನಕ್ಕೆ ರಾಜ್ಯದ ಹೆಸರು ಇಟ್ಟುಕೊಂಡು ಉದ್ಘಾಟಿಸುವ ನಿಮ್ಮಿಂದ ಪ್ರಬುದ್ಧತೆಯ ಪಾಠ ಕಲಿಯಬೇಕಿಲ್ಲ. ಕೇಂದ್ರದ ದುಡ್ಡಿನಲ್ಲಿ ಸಿದ್ದರಾಮಯ್ಯ ಜಾತ್ರೆ ಮಾಡುವಂತಾಗಿದೆ. ಕೇಂದ್ರದ ಅನುದಾನ ಪಡೆದ ಯೋಜನೆಗೆ ಕೇಂದ್ರ ಸಚಿವರು, ಸಂಸದರನ್ನು ಆಹ್ವಾನಿಸಬೇಕು ಎನ್ನುವ ಪ್ರಬುದ್ಧತೆ ಕೂಡ ನಿಮಗೆ ಇಲ್ಲವೇ ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರದ ಯೋಜನೆಗಳನ್ನು ಹೈಜಾಕ್ ಮಾಡಿಕೊಂಡಿರುವ ನೀವು ಮಾಡುತ್ತಿರುವುದು ಏನು? ತಮ್ಮ ಸ್ಥಾನಕ್ಕೆ ಮಗನನ್ನು ಕೂರಿಸಿ ಸಂವಿಧಾನಾತ್ಮಕವಾಗಿ ತಿರುಗಾಡುವ ನಿಮ್ಮ ಪುತ್ರನಿಗೆ ಪ್ರಬುದ್ಧತೆಯ ಪಾಠ ಹೇಳಿಕೊಡಿ ಸಿದ್ದರಾಮಯ್ಯನವರೇ? 30 ವರ್ಷ ರಾಜಕೀಯ ಅನುಭವ ಇರುವ ನಿಮ್ಮಿಂದ, ೩ ವರ್ಷದ ರಾಜಕೀಯ ಅನುಭವ ಇರುವ ನಾನು ರಾಜಕೀಯ ಪಾಠ ಕಲಿಯಬೇಕೆ ಹೊರತು ಪ್ರಬುದ್ಧತೆಯ ಪಾಠ ಕಲಿಯಬೇಕಿಲ್ಲ. ಕುಟ್ಟಪ್ಪ, ಡಿ.ಕೆ. ರವಿ ಪ್ರಕರಣದಲ್ಲಿ ನೀವು ಏನು ಮಾಡಿದ್ದೀರಿ ಎಂಬುದು ಗೊತ್ತಿದೆ. ತಾವು ಇಡೀ ರಾಜ್ಯದ ಸಮಸ್ಯೆ ಬಿಟ್ಟು ಮಗನ ಬಗ್ಗೆ ಯೋಚನೆ ಮಾಡ್ತೀರಾ? ಈಗ ಇಲ್ಲಿ ಬಹುದ್ದಾರಿಕೆಯ ಮಾತುಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಕ್ಕುಚ್ಯುತಿ ಮಂಡಿಸುತ್ತೇನೆ:
ಈ ಹಿಂದೆ ಕೇಂದ್ರ ಪುರಸ್ಕೃತ ಯೋಜನೆ ಶಂಕುಸ್ಥಾಪನೆಗೆ ಕೇಂದ್ರ ನಗರಾಭಿವೃದ್ಧಿ ಸಚಿವರನ್ನು ಆಹ್ವಾನಿಸಿರಲಿಲ್ಲ. ಈ ವಿಷಯದಲ್ಲಿ ಲೋಪವಾಗಿದೆ. ಮುಂದೆ ಸರಿಪಡಿಸಿಕೊಳ್ಳುವುದಾಗಿ ಜಿಲ್ಲಾಧಿಕಾರಿ ಹೇಳಿದ್ದರಿಂದ ದೂರನ್ನು ಹಿಂದಕ್ಕೆ ಪಡೆದೆ. ಈಗ ಏಕಲವ್ಯ ನಗರದಲ್ಲಿ 1040, ಕೃಷ್ಣರಾಜ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಆವಾಜ್ ಯೋಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಎರಡೂ ಯೋಜನೆಗೆ ಕೇದ್ರ ಸರ್ಕಾರ ಶೇ.80 ರಷ್ಟು ಅನುದಾನ ನೀಡಿದೆ. ಕೊನೆಗಳಿಕೆಯಲ್ಲಿ ಆಹ್ವಾನ ನೀಡಲಾಗಿದೆ. ಆದರೆ ಕೇಂದ್ರ ಸಚಿವರನ್ನು ಆಹ್ವಾನಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳ ಪ್ರವಾಸ ಬೆಂಗಳೂರಿನಲ್ಲೇ ನಿಗದಿಯಾಗಿದೆ ಎನ್ನುತ್ತಾರೆ. ಕೂಡಲೇ ಈ ಕಾರ್ಯಕ್ರಮ ಮುಂದೂಡಬೇಕು ಎಂದು ಆಗ್ರಹಿಸಿದರು.
ಹಣಕಾಸು ಸಚಿವರಾದ ಇವರು ಈ ಯೋಜನೆಗೆ ಎಷ್ಟು ಅನುದಾನ ನೀಡಿದ್ದಾರೆ ಎಂಬುದನ್ನು ಹೇಳಲಿ. ಕೇಂದ್ರ ಸರ್ಕಾರ ೧.೫೦ ಲಕ್ಷ ಕೊಟ್ಟರೂ ನೀವೆ ಶಂಕುಸ್ಥಾಪನೆ ಮಾಡುತ್ತೀರಿ. ನಗರ ಪಾಲಿಕೆಯಲ್ಲಿ ಬಿಜೆಪಿ, ಜೆಡಿಎಸ್ ಆಡಳಿತ ಇದ್ದರೂ ನೀವು ಹೈಜಾಕ್ ಮಾಡುತ್ತಿರುವುದು ಸರಿಯೇ? ಕೇಂದ್ರ ಪುರಸ್ಕೃತ ಯೋಜನೆಗಳ ಉದ್ಘಾಟನೆಯಲ್ಲಿನ ಹಕ್ಕುಚ್ಯುತಿಯ ಬಗ್ಗೆ ಮುಂದಿನ ಅಧಿವೇಶನದಲ್ಲಿ ನೊಟೀಸ್ ಕೊಟ್ಟು ವಿಷಯ ಮಂಡಿಸುತ್ತೇನೆ ಎಂದು ಅವರು ಹೇಳಿದರು.
ಅನ್ನಭಾಗ್ಯಕ್ಕೆ ನಿಮ್ಮ ಫೋಟೋ ಏಕೆ?
ಕೇಂದ್ರ ಸರ್ಕಾರ ₹ 32 ಅಕ್ಕಿ ಖರೀದಿಸಿ, ₹ 29 ಗೆ ಕೊಟ್ಟರೆ ನಮ್ಮ ದೆಂದು ಫೋಟೋ ಹಾಕಿಕೊಳ್ಳುತ್ತಾರೆ. ಸಕ್ಕರೆ, ಗೋಧಿ, ಉಪ್ಪಿನ ಪೊಟ್ಟಣಕ್ಕೂ ಇವರ ಫೋಟೋ ಹಾಕಿಕೊಳ್ಳುತ್ತಾರೆ. ಕೇಂದ್ರ ಸರ್ಕಾರದ ಪ್ರಕಾಶಪಥ ಯೋಜನೆಗೆ ಹೊಸ ಬೆಳಕು, ಉಜ್ವಲ ಯೋಜನೆಗೆ ಅನಿಲ ಭಾಗ್ಯ ಎಂದು ಹೈಜಾಕ್ ಮಾಡಿದ್ದಾರೆ. ಕೇಂದ್ರ ಸರ್ಕಾರ ಶೇ.80 ರಷ್ಟು ಅನುದಾನ ನೀಡಿದ್ದರೂ ಕೇಂದ್ರ ಸಚಿವರನ್ನು ಆಹ್ವಾನಿಸಬೇಕು. ಇಲ್ಲದಿದ್ದರೆ ಕಾರ್ಯಕ್ರಮ ಮುಂದೂಡಲಿ. ಉಳಿದ ಹತ್ತು ತಿಂಗಳಾದರೂ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಿ ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.