ಕಾರ್ಯಕರ್ತನಿಗೆ ’ನಾನೇ ನಿಮ್ಮ ಕಾಲಿಗೆ ನಮಸ್ಕಾರ ಮಾಡ್ತೀನಿ’ ಅಂದ್ರು ಅನಂತ್

First Published Jun 26, 2018, 10:36 AM IST
Highlights
  • ಕಾಲು ಮುಟ್ಟಲು ಬಂದ ಕಾರ್ಯಕರ್ತನನ್ನು ತಡೆದ ಕೇಂದ್ರ ಸಚಿವ ಅನಂತ್ ಕುಮಾರ್ 
  • ಇದೇ ಸಂದರ್ಭದಲ್ಲಿ ತಮ್ಮ ತಂದೆಯನ್ನು ನೆನಪಿಸಿಕೊಂಡ ಸಚಿವರು 

ಶಾಸ್ತ್ರಿ ಭವನದ ತನ್ನ ಕಚೇರಿಗೆ ಕೆಲಸದ ನಿಮಿತ್ತ ಬರುವ ಬಿಜೆಪಿ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಕಾಲು ಮುಟ್ಟಿ ನಮಸ್ಕಾರ ಮಾಡುವುದು ಬೇಡ, ಇದು ನನಗೆ ಇಷ್ಟ ಆಗೋದಿಲ್ಲ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಪದೇಪದೇ ಬಂದವರಿಗೆಲ್ಲ ಹೇಳುತ್ತಲೇ ಇರುತ್ತಾರಂತೆ.

ಕಳೆದ ವಾರ ತನ್ನನ್ನು ಭೇಟಿಯಾಗಲು ಬಂದಿದ್ದ ಟ್ರೇಡ್ ಯೂನಿಯನ್ ನಿಯೋಗದ ಒಬ್ಬ ಬೆಂಗಳೂರಿನ ಮುಖಂಡ ಕಾಲು ಮುಟ್ಟಿ ನಮಸ್ಕಾರ ಮಾಡಲು ಬಂದಾಗ ಚೆನ್ನಾಗಿ ಕ್ಲಾಸ್ ತೆಗೆದುಕೊಂಡ ಅನಂತ್, ‘ಕಾಲು ಮುಟ್ಟುವುದಿದ್ದರೆ ದೇವರಿಗೆ, ತಂದೆ ತಾಯಿಗೆ ಮುಟ್ಟಿ ನಮಸ್ಕಾರ ಮಾಡಿ. ಅದು ಬಿಟ್ಟು ಜನಪ್ರತಿನಿಧಿಗಳಿಗೆ ಹೀಗೆ ಮಾಡುವುದು ನನಗಿಷ್ಟವಿಲ್ಲ. ಇನ್ನೊಮ್ಮೆ ಹೀಗೆ ಮಾಡಿದರೆ ನಾನು ನಿಮಗೆ ನಮಸ್ಕಾರ ಮಾಡಬೇಕಾಗುತ್ತದೆ’ ಎಂದು ಹೇಳಿದರು.

ಅನಂತ ಕುಮಾರ್ ತಂದೆ ನಾರಾಯಣ ಶಾಸ್ತ್ರಿಗಳು ಕೂಡ ಹುಬ್ಬಳ್ಳಿಯಲ್ಲಿ ರೈಲ್ವೆ ಟ್ರೇಡ್ ಯೂನಿಯನ್‌ನಲ್ಲಿ ಇದ್ದರಂತೆ. ಮಗ ಕೇಂದ್ರ ಮಂತ್ರಿಯಾದ ಮೇಲೆ ದೆಹಲಿಗೆ ಬಂದಿದ್ದ ನಾರಾಯಣ ಶಾಸ್ತ್ರಿಗಳು ಒಮ್ಮೆ ನಮ್ಮ ರೈಲ್ವೆ ಮುಖಂಡ ಜಾರ್ಜ್ ಫರ್ನಾಂಡಿಸ್‌ರನ್ನು ಭೇಟಿ ಮಾಡಿಸು ಎಂದು ಹೇಳಿದರಂತೆ. ಸಂಪುಟ ಸಭೆಯಲ್ಲಿ ಸಿಕ್ಕಾಗ ಜಾರ್ಜ್ ಬಳಿ ಅನಂತ್ ತಂದೆಯ ಬಯಕೆ ಹೇಳಿಕೊಂಡರು. ಮರುದಿನ ಬೆಳಿಗ್ಗೆ ಜಾರ್ಜ್ ತಾನೇ ಬಂದು ಶಾಸ್ತ್ರಿಗಳನ್ನು ಭೇಟಿಯಾಗಿ ಹೋದರಂತೆ. 

(ಪ್ರಶಾಂತ್ ನಾತು ಅವರ ಅಂಕಣದ ಆಯ್ದ ಭಾಗ)

click me!