ಮೋದಿ ಮಾಡಿಲ್ಲ, ಟ್ರಂಪ್ ಮಾಡಿಲ್ಲ; ಪೇಜಾವರಶ್ರೀಗಳಿಗೆ ಯಾಕೆ ಬೇಕಿತ್ತು? ಮುತಾಲಿಕ್ ಕಿಡಿ

By Suvarna Web DeskFirst Published Jun 29, 2017, 8:01 PM IST
Highlights

ವಿಶ್ವೇಶತೀರ್ಥ ಸ್ವಾಮೀಜಿಯವರ ಈ ಕ್ರಮವನ್ನು ಖಂಡಿಸುವ ರಾಜಕೀಯ ಇಚ್ಛಾ ಶಕ್ತಿ ಯಾರಿಗೂ ಇಲ್ಲ. ಹಿಂದುತ್ವದ ಹೆಸರು ಹೇಳಿಕೊಂಡು ಬಂದಿರುವ ಬಿಜೆಪಿಯವರು ಕೃಷ್ಣ ಮಠದಲ್ಲಿ ಇಫ್ತಾರ್ ಆಯೋಜಿಸಿದ್ದನ್ನು ಸಮರ್ಥಿಸಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಶೋಭ ಕರಂದ್ಲಾಜೆ ಒಬ್ಬರೇ ಇದನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರಾಗಿದ್ದಾರೆ ಎಂದು ಮುತಾಲಿಕ್ ವಿಷಾದಿಸಿದ್ದಾರೆ.

ಹುಬ್ಬಳ್ಳಿ(ಜೂನ್ 29): ಉಡುಪಿಯ ಕೃಷ್ಣ ಮಠದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಇಫ್ತಾರ್ ಔತಣಕೂಟ ಏರ್ಪಡಿಸಿ, ನಮಾಜ್ ಮಾಡಲು ಅನುವು ಮಾಡಿಕೊಟ್ಟ ವಿಶ್ವೇಶತೀರ್ಥ ಸ್ವಾಮೀಜಿಯವರ ಕ್ರಮಕ್ಕೆ ಪ್ರಮೋದ್ ಮುತಾಲಿಕ್ ಮತ್ತೊಮ್ಮೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ತಾವು ಪೇಜಾವರಶ್ರೀಗಳಿಂದ ಕ್ಷಮೆಗೆ ಆಗ್ರಹಿಸಿಲ್ಲ. ತನ್ನದು ಎಚ್ಚರಿಕೆ ಕೊಡುವ ಉದ್ದೇಶವಷ್ಟೇ ಎಂದು ಶ್ರೀರಾಮಸೇನೆ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಇದೂವರೆಗೆ ಯಾವುದೇ ಇಫ್ತಾರ್ ಕೂಟಕ್ಕೆ ಹೋಗಿಲ್ಲ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಸಂಸತ್'ನಲ್ಲಿ ಇಫ್ತಾರ್ ಆಯೋಜನೆಯ ಕ್ರಮವನ್ನು ರದ್ದು ಮಾಡಿದ್ದಾರೆ. ಹೀಗಿರುವಾಗ ಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಆಯೋಜಿಸುವ ಔಚಿತ್ಯವೇನಿತ್ತು ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ.

ವಿಶ್ವೇಶತೀರ್ಥ ಸ್ವಾಮೀಜಿಯವರ ಈ ಕ್ರಮವನ್ನು ಖಂಡಿಸುವ ರಾಜಕೀಯ ಇಚ್ಛಾ ಶಕ್ತಿ ಯಾರಿಗೂ ಇಲ್ಲ. ಹಿಂದುತ್ವದ ಹೆಸರು ಹೇಳಿಕೊಂಡು ಬಂದಿರುವ ಬಿಜೆಪಿಯವರು ಕೃಷ್ಣ ಮಠದಲ್ಲಿ ಇಫ್ತಾರ್ ಆಯೋಜಿಸಿದ್ದನ್ನು ಸಮರ್ಥಿಸಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಶೋಭ ಕರಂದ್ಲಾಜೆ ಒಬ್ಬರೇ ಇದನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರಾಗಿದ್ದಾರೆ ಎಂದು ಮುತಾಲಿಕ್ ವಿಷಾದಿಸಿದ್ದಾರೆ.

ತಾನು ಪೇಜಾವರಶ್ರೀಗಳನ್ನು ವೈಯಕ್ತಿಕವಾಗಿ ಟೀಕಿಸುತ್ತಿಲ್ಲ ಎಂದು ಪುನರುಚ್ಚರಿಸಿದ ಮುತಾಲಿಕ್, ಪವಿತ್ರ ಹಿಂದೂ ಕ್ಷೇತ್ರವನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿ. ಮುಂದಿನ ದಿನಗಳಲ್ಲಿ ಯಾವುದೇ ಮಠ ಮಂದಿರಗಳಲ್ಲಿ ಇಫ್ತಾರ್ ಅಥವಾ ನಮಾಜು ನಡೆಯಬಾರದು ಎಂದು ಆಗ್ರಹಿಸಿದ್ದಾರೆ.

ಆಕ್ರಮಣಕಾರರಾದ ಮುಸ್ಲಿಮರು ಶ್ರೀ ಕೃಷ್ಣ ಮಠಕ್ಕೆ ಯಾವುದೇ ಭೂಮಿ ಕೊಟ್ಟಿಲ್ಲ. ಮಸೀದಿಗಳಲ್ಲಿ ಹಿಂದೂ ಸಂಪ್ರದಾಯದ ಹಬ್ಬಗಳನ್ನು ಮಾಡಲು ಬಿಡುವುದಿಲ್ಲ. ಹೀಗಿರುವಾಗ ಮಠದಲ್ಲಿ ನಮಾಜು ಮಾಡಲು ಅವಕಾಶ ಕೊಡಬಾರದಿತ್ತು ಎಂದು ಶ್ರೀರಾಮಸೇನೆ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದನ್ನು ವಿರೋಧಿಸಿ ಶ್ರೀರಾಮಸೇನೆ ಸಂಘಟನೆಯು ಜುಲೈ 2ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

click me!