ರಾಜಸ್ಥಾನ ರಾಜಕಾರಣದಲ್ಲಿ ರಾತ್ರೋ ರಾತ್ರಿ ಮಹತ್ವದ ಬೆಳವಣಿಗೆ : ಏನಾಯ್ತು..?

By Web DeskFirst Published Dec 27, 2018, 12:49 PM IST
Highlights

ರಾಜಸ್ಥಾನ ರಾಜಕೀಯದಲ್ಲಿ ರಾತ್ರೋ ರಾತ್ರಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯ ಪ್ರವೇಶದ ಮೂಲಕ ಖಾತೆ ಹಂಚಿಕೆ ಕಗ್ಗಂಟನ್ನು ನಿವಾರಿಸಿದ್ದಾರೆ.

ಜೈಪುರ  : ರಾಜಸ್ಥಾನದಲ್ಲಿ ಸರ್ಕಾರ ರಚನೆಯಾಗಿ 8 ದಿನಗಳು ಕಳೆದಿದ್ದರೂ ಖಾತೆ ಹಂಚಿಕೆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿರಲಿಲ್ಲ. ಆದರೆ ಬುಧವಾರ ಮಧ್ಯರಾತ್ರಿ ರಾಜಸ್ಥಾನ ರಾಜಕೀಯದಲ್ಲಿ ಮಹತ್ವದ  ಬದಲಾವಣೆಗಳಾಗಿದೆ. 

ರಾತ್ರಿ 2.30ರ ಸುಮಾರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಖಾತೆ ಹಂಚಿಕೆಯ ವಿಚಾರವಾಗಿ ಮಧ್ಯ ಪ್ರವೇಶಿಸಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಉಪ ಮುಖ್ಯಮಂತ್ರಿ  ಸಚಿನ್ ಪೈಲಟ್ ನಡುವೆ ಇದ್ದ ಗೊಂದಲವನ್ನು ನಿವಾರಿಸಿದ್ದಾರೆ. 

ಅಶೋಕ್ ಗೆಹ್ಲೋಟ್ ತಮ್ಮ ಬಳಿ  ಹಣಕಾಸು ಹಾಗೂ ಗೃಹ ಖಾತೆ ಉಳಿಸಿಕೊಂಡಿದ್ದಾರೆ. ಅಲ್ಲದೇ ಅಬಕಾರಿ, ಯೋಜನಾ, ಮಾಹಿತಿ ತಂತ್ರಜ್ಞಾನ ಖಾತೆಯೂ ಕೂಡ ಗೆಹ್ಲೋಟ್ ಇರಿಸಿಕೊಂಡಿದ್ದಾರೆ. 

ಆಸ್ಟ್ರೇಲಿಯಾದ ಶಿಕ್ಷಣ ತಜ್ಞ ಈಗ ಈ ರಾಜ್ಯದ ಶಾಸಕ!

 

ಇನ್ನು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್  ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ವಿಜ್ಞಾನ ತಂತ್ರಜ್ಞಾನ ಖಾತೆಗಳ ನಿರ್ವಹಣಾ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.  

ಡಿಸೆಂಬರ್ 24ರಂದು 23 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. 22 ಮಂದಿ ಕಾಂಗ್ರೆಸಿಗರಾಗಿದ್ದು, ಇನ್ನೋರ್ವ ಮೈತ್ರಿ ಪಕ್ಷದ ಶಾಸಕಗೂ ಸಚಿವ ಸ್ಥಾನ  ನೀಡಲಾಗಿತ್ತು. RLD ಶಾಸಕ ಸುಭಾಷ್ ಗರ್ಗ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಮಿತ್ರಪಕ್ಷದ ಶಾಸಕಗೆ ಸ್ಥಾನ : ನೂತನ ಸಚಿವರಾಗಿ 23 ಮಂದಿ ಪ್ರಮಾಣ 

ರಾಜಸ್ಥಾನದಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಜಯಗಳಿಸಿ ಸರ್ಕಾರ ರಚನೆ ಸಿದ್ಧತೆ ನಡೆಸಿದ್ದಾಗ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆಯೂ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಬಳಿಕ ಹಿರಿಯ ಕಾಂಗ್ರೆಸ್ ಮುಖಂಡರಾದ ಗೆಹ್ಲೋಟ್ ಅವರನ್ನು ಆಯ್ಕೆ ಮಾಡಲಾಗಿತ್ತು.  ಯುವ ನಾಯಕ ಸಚಿನ್ ಪೈಲಟ್ ಗೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ನೀಡಲಾಗಿದೆ. ಇದೀಗ ಖಾತೆ ಹಂಚಿಕೆ ಬಗ್ಗೆ ಇದ್ದ ಕಗ್ಗಂಟನ್ನೂ  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯ ಪ್ರವೇಶಿಸಿ ತಣ್ಣಗಾಗಿಸಿದ್ದಾರೆ. 

click me!