
ನವದೆಹಲಿ(ಏ.25): ಮತದಾರರಿಗೆ ಲಂಚ ನೀಡುವ ಅಥವಾ ಚುನಾವಣೆಗಳಲ್ಲಿ ಪ್ರಭಾವ ಬೀರುವ ಪ್ರಕರಣ ಸಂಬಂಧ ಸಂಸದರು, ಶಾಸಕರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದರೆ ಅಂತಹ ಜನಪ್ರತಿನಿಧಿಗಳನ್ನು ಅನರ್ಹಗೊಳಿಸಬೇಕು ಎಂದು ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಈ ಸಂಬಂಧ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾರ್ಯದರ್ಶಿಗಳಿಗೆ ಜ.2ರಂದೇ ಪತ್ರ ಬರೆದಿದೆ. ಮತದಾರರಿಗೆ ಲಂಚ ನೀಡಿದ ಪ್ರಕರಣಗಳಲ್ಲಿ ನ್ಯಾಯಾಲಯ ಆರೋಪ ಹೊರಿಸಿದ ತಕ್ಷಣ ಹಾಲಿ ಸಂಸದರು, ಶಾಸಕರನ್ನು ಅನರ್ಹಗೊಳಿಸುವ ಸಲುವಾಗಿ 1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8ಕ್ಕೆ ತಿದ್ದುಪಡಿ ತರಬೇಕು ಎಂದು ಸಲಹೆ ಮಾಡಿದೆ.
ಈಗ ಇರುವ ಸೆಕ್ಷನ್ 8ರ ಪ್ರಕಾರ, ಮತದಾರರಿಗೆ ನೀಡುವ ಲಂಚ ಸೇರಿ ಹಲವಾರು ಅಪರಾಧಗಳನ್ನು ಆಧರಿಸಿ ಜನಪ್ರತಿನಿಧಯನ್ನು ಅನರ್ಹಗೊಳಿಸಿ, ಆತ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ತಡೆಯಬಹುದಾದ ಅಂಶವಿದೆ. ಆದರೆ, ಆ ಅಪರಾಧ ನ್ಯಾಯಾಲಯದಲ್ಲಿ ಸಾಬೀತಾಗಿರಬೇಕು.
ವಿಚಾರಣೆಯಲ್ಲಿ ಆಗುವ ವಿಳಂಬ ಹಾಗೂ ಅಪರಾಧ ಸಾಬೀತಾಗುವುದು ಪ್ರಮಾಣ ತೀರಾ ಕಡಿಮೆ ಇರುವುದರಿಂದ ರಾಜಕಾರಣವನ್ನು ಕ್ರಿಮಿನಲ್ ಮುಕ್ತಗೊಳಿಸುವ ಆಶಯ ಈಡೇರಿಸಲು ಸೆಕ್ಷನ್ 8 ಅಸಮರ್ಥವಾಗಿದೆ. ಹೀಗಾಗಿ ಐದು ವರ್ಷ ಶಿಕ್ಷೆಯಾಗುವಂತಹ ಆರೋಪ ಹೊರಿಸಿದ ಕೂಡಲೇ ಜನಪ್ರತಿನಿಧಿಗಳನ್ನು ಅನರ್ಹಗೊಳಿಸುವ ಸಂಬಂಧ ತಿದ್ದುಪಡಿ ತರಬೇಕು ಎಂದು ಈ ಹಿಂದೆ ಕಾನೂನು ಆಯೋಗ ಶಿಫಾರಸು ಮಾಡಿತ್ತು.
ಆದರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಚುನಾವಣಾ ಆಯೋಗ, ಐಪಿಸಿ ಸೆಕ್ಷನ್ 171ಬಿ ಹಾಗೂ 171ಸಿ ಅಡಿ ಮತದಾರರಿಗೆ ಲಂಚ ನೀಡುವುದು, ಚುನಾವಣೆಯಲ್ಲಿ ಪ್ರಭಾವ ಬೀರುವ ಆರೋಪ ಎದುರಿಸುತ್ತಿರುವ ರಾಜಕಾರಣಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗುತ್ತಿದ್ದಂತೆ ಅವರನ್ನು ಅನರ್ಹಗೊಳಿಸಬೇಕು ಎಂಬ ಪ್ರಸ್ತಾಪವನ್ನು ಸರ್ಕಾರ ಮುಂದೆ ಇಟ್ಟಿದೆ. ಗಮನಾರ್ಹ ಸಂಗತಿ ಎಂದರೆ, ಈ ಎರಡೂ ಸೆಕ್ಷನ್‌ಗಳಡಿ ಗರಿಷ್ಠ 1 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.