
ವಿಜಯಪುರ(ಡಿ.20): ಅವರು ರಾಜ್ಯಕ್ಕೆ ಅನುದಾನ ಕೊಡಿಸಬೇಕಾದ ದೆಹಲಿ ವಿಶೇಷ ಪ್ರತಿನಿಧಿ. ಆದ್ರೆ ಅವ್ರು ಮಾಡಿರೋದು ಅಲ್ಪಸಂಖ್ಯಾತರು ಸಿಡಿದೇಳುವಂತಹ ಕೆಲಸ. ನಿವೃತ್ತ ನ್ಯಾಯಾಧೀಶರ ಮನವಿಯಿಂದ ಆ ಗ್ರಾಮಕ್ಕೆ ಮಂಜೂರಾಗಿರೋ ಶಾಲೆಯನ್ನೇ, ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಅಲ್ಲದೇ ಸರ್ಕಾರಿ ಜಾಗವಿದ್ದರೂ, ಖಾಸಗಿ ಜಮೀನು ಖರೀದಿಗೆ ಒತ್ತಡ ಹಾಕುತ್ತಿದ್ದಾರೆ.
ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲೂಕಿನ ಇಣಚಗಲ್ ಗ್ರಾಮದ ನಿವಾಸಿ ನಿವೃತ್ತ ನ್ಯಾಯಾಧೀಶ ಜಿ.ಡಿ.ಇನಾಮ್ದಾರ್, ಮಹಾರಾಷ್ಟ್ರದಲ್ಲಿ ಜಡ್ಜ್ ಆಗಿ ನಿವೃತ್ತಿ ಹೊಂದಿದ್ದಾರೆ. ಗ್ರಾಮದ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿರೊ ಇವರು, ಸರ್ಕಾರಕ್ಕೆ ಮನವಿ ಮಾಡಿ ಆರೋಗ್ಯ ಕೇಂದ್ರ ಕಟ್ಟಿಸಿಕೊಟ್ಟಿದ್ದರು. ಅದಾದ ಬಳಿಕ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ, 2015-16 ಇಣಚಗಲ್ ಗ್ರಾಮದಲ್ಲೇ ವಸತಿ ಶಾಲೆ ಸ್ಥಾಪಿಸಬೇಕೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆದೇಶಿಸಿತು.
ಆದರೆ ಮುದ್ದೇಬಿಹಾಳ ಕಾಂಗ್ರೆಸ್ ಶಾಸಕ ದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್. ನಾಡಗೌಡ್ರು ಇಣಚಗಲ್ ಗ್ರಾಮದ ಬದಲು ಮೂಕಿಹಾಳ ಗ್ರಾಮದಲ್ಲಿ ಶಾಲೆ ನಿರ್ಮಾಣ ಆಗಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅಲ್ಲದೇ ತಮ್ಮ ಬೆಂಬಲಿಗ ಕಾಶಿಂ ಪಟೇಲ್ ಅವ್ರ ಜಮೀನನ್ನೇ ಖರೀದಿಸಬೇಕೆಂದು ಪತ್ರ ಬರೆದು, ಶಾಲೆ ಸ್ಥಳಾಂತರ ಮಾಡಿಸಿದ್ದಾರಂತೆ.
ಇನ್ನೂ ಸ್ವತಃ ನಾನೇ ಜಮೀನನ್ನು ಉಚಿತವಾಗಿ ಕೊಡುತ್ತೇನೆಂದು ಜೆ.ಡಿ.ಇನಾಮ್ದಾರ್ ಹೇಳಿದರೂ, ನಾಡಗೌಡರು, ನಾಡಗೌಡರು ಅಧಿಕಾರ ದುರ್ಬಳಕ್ಕೆ ಮಾಡಿಕೊಂಡು , ಶಾಲೆ ಸ್ಥಳಾಂತರ ಮಾಡಿಸುವ ಮೂಲಕ ಗ್ರಾಮಸ್ಥರ ಕನಸಿಗೆ ತಣ್ಣೀರು ಎರಚಿದ್ದಾರೆ. ಇನ್ನೂ ಇದೇ 22 ರಂದು ಸಿಎಂ ಸಿದ್ದರಾಮಯ್ಯ, ಶಾಲೆ ಕಟ್ಟಡದ ಗುದ್ದಲಿ ಪೂಜೆಗೆ ಆಗಮಿಸುತ್ತಿದ್ದಾರೆ. ಆದ್ರೆ ಇದಕ್ಕೆ ಅಲ್ಪಸಂಖ್ಯಾತರ ಸಮಾಜ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸಂವೃದ್ಧವಾಗಿರುವ ಗ್ರಾಮವನ್ನು ಕುಗ್ರಾಮ ಎಂದು ಸುಳ್ಳು ಮಾಹಿತಿ ನೀಡಿರುವುದು ಎಷ್ಟು ಸರಿ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇನ್ನೂ ಶಾಲೆಗೆ ಸರ್ಕಾರ 10 ಕೋಟಿ ಮೀಸಲಿಟ್ಟಿದೆ. ಈ ಹಣ ಲೂಟಿ ಮಾಡಲು ಶಾಸಕರು ಈ ರೀತಿ ಮಾಡುತ್ತಿದ್ದಾರಾ, ಸರ್ಕಾರಿ ಜಾಗವಿದ್ದರೂ, ಖಾಸಗಿ ಜಮೀನು ಖರೀದಿಗೆ ಒತ್ತಡ ಹಾಕುತ್ತಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.