
ಜಾರ್ಜಿಯಾ(ಡಿ.13): ನೇರ ಪ್ರಸಾರದ ಚರ್ಚಾ ಕಾರ್ಯಕ್ರಮದಲ್ಲಿ ನ್ಯೂಸ್ ಚಾನೆಲ್'ಗಳಲ್ಲಿ ರಾಜಕೀಯ ಪಕ್ಷದ ನಾಯಕರು ಪರಸ್ಪರ ಠೀಕಿಸಿ ಮಾತಿನಲ್ಲಿ ಜಗಳವಾಡುವುದನ್ನು ನಾವೆಲ್ಲಾ ನೋಡಿದ್ದೇವೆ. ಇದು ಸಾಮಾನ್ಯ. ಆದರೆ ಇತ್ತೀಚೆಗಷ್ಟೇ ನ್ಯೂಸ್ ಚಾನೆಲ್ ಒಂದು ನಡೆಸಿದ ಚರ್ಚಾ ಕಾರ್ಯಕ್ರಮದ ನೇರ ಪ್ರಸಾರದ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ರಾಜಕೀಯ ಪಕ್ಷದ ನಾಯಕರಿಬ್ಬರು ಹೊಡೆದಾಡಿಕೊಂಡ ಘಟನೆ ನಡೆದಿದೆ. ಇದೀಗ ಈ ನಾಯಕರ ಗುದ್ದಾಟದ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಜಾರ್ಜಿಯಾದ ಟಿವಿ ಶೋವೊಂದರಲ್ಲಿ ನಡೆದಿದ್ದು, ಚರ್ಚಾ ಕಾರ್ಯಕ್ರಮದ ವೇದಿಕೆಯಾಗಬೇಕಿದ್ದ ನ್ಯೂಸ್ ರೂಂ ರಾಜಕೀಯ ನಾಯಕರಿಬ್ಬರ ಹೊಡೆದಾಟದಿಂದ ರಣರಂಗವಾಗಿ ಮಾರ್ಪಾಡಾಗಿದೆ. ಕಳೆದ ಅಕ್ಟೋಬರ್'ನಲ್ಲಿ ಜಾರ್ಜಿಯಾದಲ್ಲಿ ಚುನಾವಣೆ ನಡೆದಿತ್ತು ಈ ವಿಚಾರವಾಗಿ ಇಲ್ಲಿನ ರಾಜಕೀಯ ಪಕ್ಷಗಳ ವಾಕ್ಸಮರ ಮೊದಲೇ ಆರಂಭವಾಗಿತ್ತು.
ಈ ಚುನಾವಣೆ ವಿಚಾರವಾಗಿ ಜಾರ್ಜಿಯಾದ ಪ್ರಖ್ಯಾತ ನ್ಯೂಸ್ ವಾಹಿನಿ 'ಇಬೇರಿಯಾ ಟಿವಿ' ಯಲ್ಲಿ ಚರ್ಚಾ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮಕ್ಕೆ ರಿಫಾರ್ಮಿಸ್ಟ್ ಪಾರ್ಟಿಯ ನಾಯಕ ಇರೆಕ್ಲಿ ಘ್ಲೋಂತೀ ಹಾಗೂ ಇಂಡಸ್ಟ್ರಿಯಲ್ ಪಾರ್ಟಿಯ ನಾಯಕ ಜಾಜಾ ಅಘ್ಲಾಜೆಯನ್ನು ಆಹ್ವಾನಿಸಲಾಗಿತ್ತು. ಆದರೆ ಅಚಾನಕ್ಕಾಗಿ ರಷ್ಯಾದ ವಿಚಾರಧಾರೆಯನ್ನು ಬೆಂಬಲಿಸುವ ವಿಚಾರವಾಗಿ ಈ ಇಬ್ಬರೂ ವಿರೋಧ ಪಕ್ಷದ ನಾಯಕರ ಮಧ್ಯೆ ಭಿನ್ನಾಭಿಪ್ರಾಯವೇರ್ಪಟ್ಟಿತ್ತು. ಮಾತಿನಲ್ಲಿ ಜಗಳವಾಡುತ್ತಿದ್ದವರು ನೋಡ ನೋಡುತ್ತಿದ್ದಂತೆಯೇ ತಮ್ಮ ಎದುರಿಗಿಟ್ಟಿದ್ದ ನೀರಿನ ಗ್ಲಾಸ್'ನ್ನು ಒಬ್ಬರ ಮೇಲೊಬ್ಬರು ಎಸೆದಿದ್ದಾರೆ. ಬಳಿಕ ಇದೇ ವಿಚಾರಕ್ಕೆ ನ್ಯೂಸ್ ಸ್ಟುಡಿಯೋದಲ್ಲೇ ಲೈವ್ ಶೋ ಆಗುತ್ತಿರಬೇಕಾದರೇ ಬಡಿದಾಡಿಕೊಳ್ಳುವಷ್ಟು ಮಟ್ಟಕ್ಕೆ ತಿರುಗಿದೆ.
ಇವರಿಬ್ಬರ ನಡುವಿನ ಈ ಜಗಳವನ್ನು ತಡೆಯಲು ನಿರೂಪಕಿ ಸಾಕಷ್ಟು ಪ್ರಯತ್ನಿಸಿದಳಾದರೂ ಸಾಧ್ಯವಾಗಲಿಲ್ಲ. ಚರ್ಚಾ ಕಾರ್ಯಕ್ರಮದಲ್ಲಿ ನಡೆದ ಈ ಗುದ್ದಾಟ ವೀಕ್ಷಕರಿಗೆ ಕೆಲ ಸಮಯ ಮನೋರಂಜನೆ ನೀಡಿತ್ತು. ಬಳಿಕ ಬಂದ ಟಿವಿ ಪ್ರೊಡ್ಯುಸರ್ ಇವರಿಬ್ಬರಿಗೂ ತಿಳಿ ಹೇಳಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.
ಇದು ಜಾರ್ಜಿಯಾದಲ್ಲಿ ನಡೆದ ಎರಡನೇ ಘಟನೆಯಾಗಿದೆ. ಇದಕ್ಕೂ ಮೊದಲು ಕ್ವೆಮೊ ಕಾರ್ಟ್ಲಿ ಎಂಬ ನ್ಯೂಸ್ ಚಾನೆಲ್'ನಲ್ಲಿ ಪ್ರಬಲ ಅಭ್ಯರ್ಥಿ ಪೊಲಾಡ್ ಖಾಲಿಕೋವ್ ಹಾಗೂ ರಾಜಕಾರಣಿಯಾಗಿರುವ ವೇಪಖಿಯಾ ನಡುವೆ ಇದೇ ರೀತಿ ಜಗಳವಾಗಿತ್ತು.ಇದೀಗ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.