ಸೋಲಿಲ್ಲದ ಸರದಾರನ ಮೊದಲ ಸೋಲು ಯಾವುದು..?

By Web DeskFirst Published Nov 26, 2018, 7:26 AM IST
Highlights

ಸಿನಿಮಾ ಹಾಗೂ ರಾಜಕೀಯ ಜೀವನದಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದಿದ್ದ ಅಂಬರೀಷ್ ಅವರನ್ನು ರಾಜಕೀಯಕ್ಕೆ ಆಹ್ವಾನಿಸಿದ್ದ ವಿಚಾರವನ್ನು ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರು ಬಿಚ್ಚಿಟ್ಟಿದ್ದಾರೆ. 

ಬೆಂಗಳೂರು :  ಅಂಬರೀಷ್‌ ಅವರ ತಂದೆ ಹುಚ್ಚಪ್ಪಗೌಡ ಹಾಗೂ ನನ್ನ ನಡುವೆ ಉತ್ತಮ ಒಡ​ನಾ​ಟ​ವಿತ್ತು. ಇದಕ್ಕೆ ಕಾರಣ ನಮ್ಮ ತಂದೆ ಹಾಗೂ ಅಂಬರೀಷ್‌ ಅವರ ತಂದೆ ಆತ್ಮೀಯ ಸ್ನೇಹಿತರಾಗಿದ್ದರು. ಇದೇ ಕಾರಣದಿಂದ ಅವರೊಂದಿಗೆ ನನಗೂ ಉತ್ತಮ ಒಡನಾಟ ಬೆಳೆದಿತ್ತು ಎಂದು ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರು ಹೇಳಿದ್ದಾರೆ.

ಹೀಗೆ ಹುಚ್ಚಪ್ಪಗೌಡರ ಮಗ​ನಾದ ಅಂಬ​ರೀಷ್‌ ಅವರು ಆರಂಭ​ದಿಂದಲೂ ನಮ್ಮ ಕುಟುಂಬಕ್ಕೆ ಆಪ್ತ​ರಾ​ಗಿ​ದ್ದರು. ಇನ್ನು ಅಂಬ​ರೀಷ್‌ ಹಾಗೂ ನನ್ನ ಅವರ ಕಾಮನ್‌ ಫ್ರೆಂಡ್‌ ಆರ್‌.ಟಿ.ನಾರಾಯಣ್‌ ಸಹಕಾರದಿಂದ ನನ್ನ ಹಾಗೂ ಅಂಬರೀಷ್‌ ಅವರ ಸ್ನೇಹ ಬೆಳೆದು, ಗಟ್ಟಿ​ಯಾ​ಗಿ​ತ್ತು.

ಮಂಡ್ಯ ಜಿಲ್ಲೆಯವರೇ ಆಗಿದ್ದ ಅಂಬರೀಷ್‌ ಚಿತ್ರ ರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದರು. ಅವರ ಬೆಳೆಯುವುದನ್ನು ಗಮನಿಸಿದ್ದ ನಾನು ಚಿತ್ರ ರಂಗ ಮತ್ತು ರಾಜಕೀಯಕ್ಕೆ ಸಂಬಂಧ ಕಲ್ಪಿಸಬೇಕು ಎಂಬ ಕಾರಣದಿಂದಾಗಿ ರಾಜಕೀಯಕ್ಕೆ ಆಹ್ವಾನಿಸಿದ್ದೆ. ಅದೇ ಸಂದರ್ಭದಲ್ಲಿ ಇತರೆ ರಾಜಕಾರಣಿಗಳು ಅವರಿಗೆ ರಾಜಕೀಯ ಪ್ರವೇಶಕ್ಕೆ ಸಲಹೆ ನೀಡಿದ್ದರು. ನಂತರ ಜೆಡಿಎಸ್‌ ಪಕ್ಷಕ್ಕೆ ಸೇರಿದ್ದ ಅಂಬರೀಷ್‌ 1996ರಲ್ಲಿ ಮಂಡ್ಯ ಜಿಲ್ಲೆಯಿಂದ ಲೋಕಸಭೆಗೆ ಸ್ಪರ್ಧಿಸಿ, ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಂ.ಲಿಂಗಪ್ಪ ಅವರ ವಿರುದ್ಧ ಸೋಲನ್ನನುಭವಿಸಿದ್ದರು.

ನಂತರ ನಾನು ಅಂಬ​ರೀಷ್‌ ಅವ​ರನ್ನು ಕಾಂಗ್ರೆಸ್‌ ಪಕ್ಷಕ್ಕೆ ಕರೆ​ತಂದೆ. ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆ​ಸ್‌​ನಿಂದ ಸ್ಪರ್ಧಿಸಿ ಗೆದ್ದ ಅಂಬ​ರೀಷ್‌ ಮುಂದೆ ರಾಜಕಾರಣದಲ್ಲಿ ಸೋಲಿಲ್ಲದ ಸರದಾರನಂತೆ ಬೆಳೆದರು.

ಅಂಬರೀಷ್‌ ಮಂಡ್ಯ ಲೋಕಸಭೆಯಿಂದ ಆಯ್ಕೆಯಾಗಿದ್ದ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದೆ. ಆ ಸಂದರ್ಭದಲ್ಲಿ ಎದುರಾಗಿದ್ದ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಆಗ ರಾಜ್ಯದಿಂದ ಆಯ್ಕೆಯಾಗಿದ್ದ ಎಲ್ಲ ಸಂಸದರು ನನ್ನ ಕೈ ಬಲ ಪಡಿಸಿದ್ದರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ಅಂಬರೀಷ್‌ ಅವರು ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುವುದನ್ನು ಸಹಿಸದೆ ರಾಜೀನಾಮೆ ನೀಡುವ ಮೂಲಕ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗದಂತೆ ನೋಡಿಕೊಂಡಿದ್ದರು.

ಚಿತ್ರರಂಗದಲ್ಲಿ ಡಾ.ರಾಜಕುಮಾರ್‌ ಮತ್ತು ವಿಷ್ಣುವರ್ಧನ ಅವರ ನಂತರ ಅಂಬರೀಷ್‌ ಅವರು ದೊಡ್ಡ ಹೆಸರು ಮಾಡಿದ್ದರು. ರಾಜಕುಮಾರ್‌ ಕುರಿತು ಅವರಿಗೆ ಅತ್ಯಂತ ಅಭಿಮಾನವನ್ನು ಬೆಳೆಸಿಕೊಂಡಿದ್ದರು.

ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟುಯೋಜನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದರು. ನಮ್ಮ ಸ್ವಂತ ಜಿಲ್ಲೆ ಮಂಡ್ಯ ಆದ್ದರಿಂದ ಇಬ್ಬರು ಒಟ್ಟಿಗೆ ಶ್ರಮಿಸಿದ್ದೆವು. ಅದೇ ಕಾರಣಕ್ಕೆ ಅಂಬರೀಷ್‌ ಅವರ ಮೇಲೆ ಆ ಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

ವರನಟ ಡಾ.ರಾಜ್‌ಕುಮಾರ್‌ ಅವರನ್ನು ಕಾಡುಗಳ್ಳ ವೀರಪ್ಪನ್‌ ಅಪಹರಣ ಮಾಡಿದ್ದ ಸಂದರ್ಭದಲ್ಲಿ ಅಂಬರೀಷ್‌ ಸೇರಿದಂತೆ ಹಲವು ಚಿತ್ರ ರಂಗದ ಮುಖಂಡರು ಸಂಧಾನಕ್ಕಾಗಿ ನನಗೆ ಬೆಂಬಲ ಸೂಚಿಸಿದ್ದರು. ಜೊತೆಗೆ, ನನಗೆ ಧೈರ್ಯ ಹೇಳಿ ಆತ್ಮ ವಿಶ್ವಾಸವನ್ನು ತುಂಬಿದ್ದರು. ಅಲ್ಲದೆ, ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಅವರು ತಮ್ಮೊಂದಿಗೆ ಒಡನಾಡಿಯಾಗಿದ್ದರಿಂದ ಸಮಸ್ಯೆ ಪರಿಹಾರಕ್ಕೆ ಸುಲಭವಾಗಿತ್ತು.

ನಟ ಅಂಬರೀಷ್‌ ಅವರನ್ನು ಕೆಲ ತಿಂಗಳುಗಳ ಹಿಂದೆ ಮಂಡ್ಯ ಜಿಲ್ಲೆಯ ಸುವರ್ಣ ಮಹೋತ್ಸವದಲ್ಲಿ ಭೇಟಿಯಾಗಿದ್ದೆ. ಮೈಸೂರು ಜಿಲ್ಲೆಯಿಂದ ಮಂಡ್ಯ ಜಿಲ್ಲೆಯನ್ನು ಪ್ರತ್ಯೇಕ ಮಾಡುವಲ್ಲಿ ನಮ್ಮ ತಂದೆಯವರ ಪಾತ್ರ ಮಹತ್ವದ್ದಾಗಿತ್ತು. ಅದೇ ಕಾರಣದಿಂದಾಗಿ ನನಗೆ ಮಂಡ್ಯ ಜಿಲ್ಲೆಯೊಂದಿಗೆ ಭಾವನಾತ್ಮಕ ಸಂಬಂಧವಿತ್ತು. ಪರಿಣಾಮ ಅಂದು ಜ್ವರ ಇದ್ದರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆಗ ಅಂಬರೀಷ್‌ ಅವರು ಕುಶಲೋಪರಿ ವಿಚಾರಿಸಿ ಶುಭ ಹಾರೈಸಿದ್ದರು. ಕಳೆದ ಬಾರಿ ಅಂಬರೀಷ್‌ ಅವರ ಆರೋಗ್ಯ ಕೆಟ್ಟಿದ್ದ ಸಂದರ್ಭದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಆದರೆ, ಅವರನ್ನು ಮಾತನಾಡಿಸುವುದಕ್ಕೆ ಸಾಧ್ಯವಾಗಿರಲಿಲ್ಲ.

ಅಂಬರೀಷ್‌ ರಾಜಕೀಯದಲ್ಲಿ ಮತ್ತಷ್ಟುಬೆಳೆಯುವುದಕ್ಕೆ ಅವಕಾಶಗಳಿತ್ತು. ಆದರೆ, ದುರದೃಷ್ಟವಶಾತ್‌ ನಮ್ಮನ್ನು ಅಗಲಿದ್ದಾರೆ. ಇಂತಹ ನಾಯಕನನ್ನು ಕಳೆದುಕೊಂಡು ಕನ್ನಡ ಚಿತ್ರ ರಂಗ ಮತ್ತು ಮತ್ತು ರಾಜಕಾರಣ ಇಂದು ಬಡವಾಗಿದೆ ಎಸ್‌.ಎಂ.ಕೃಷ್ಣ, ಭಾವುಕರಾಗಿದ್ದಾರೆ.

click me!