
ಚೆನ್ನೈ (ಫೆ.11): ತಮಿಳುನಾಡಿನಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದೆ. ಮುಖ್ಯಮಂತ್ರಿಯಾಗಿ ಎಐಎಡಿಎಂಕೆ ಶಾಸಕಾಂಗ ಪಕ್ಷದ ಮುಖ್ಯಸ್ಥೆ ವಿ.ಕೆ. ಶಶಿಕಲಾ ಅವರನ್ನು ನೇಮಿಸುವುದಕ್ಕೆ ಸಂಬಂಧಿಸಿ ರಾಜ್ಯಪಾಲ ಸಿ.ಎಚ್ ವಿದ್ಯಾಸಾಗರ್ ರಾವ್ ಅವರು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಮಧ್ಯೆ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ ಮತ್ತು ಚೆನ್ನೈ ನಗರ ಪೊಲೀಸ್ ಆಯುಕ್ತ ಎಸ್. ಜಾರ್ಜ್ ಅವರನ್ನು ಕರೆಸಿ ರಾಜ್ಯಪಾಲರು ಚರ್ಚೆ ನಡೆಸಿದ್ದಾರೆ. ಪನ್ನೀರ್‌ಸೆಲ್ವಂ ಅವರ ಮೇಲೆ ಒತ್ತಡ ಹೇರಿ ರಾಜೀನಾಮೆ ಕೊಡಿಸಲಾಗಿದೆ ಎಂಬ ಆರೋಪ ಮತ್ತು ಶಾಸಕರನ್ನು ಕೂಡಿ ಹಾಕಲಾಗಿದೆ ಎಂಬ ಆರೋಪದ ಬಗ್ಗೆಯೂ ಚರ್ಚೆ ಮಾಡಲಾಗಿದೆ.
ಇದೆಲ್ಲದರ ಮಧ್ಯೆ ಇತ್ತೀಚಿಗಷ್ಟೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ವಿ.ಕೆ.ಶಶಿಕಲಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಶಶಿಕಲಾ ಅವರು ಮಧುಸೂದನನ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಅಧ್ಯಕ್ಷ ಸ್ಥಾನದಿಂದ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮಧುಸೂದನನ್ ಅವರು, ಅವರು ನನ್ನನ್ನು ಉಚ್ಚಾಟಿಸುವ ಮೊದಲೇ ನಾನು ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹಾಗೂ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದ್ದೇನೆ ಎಂದಿದ್ದಾರೆ. ಶಶಿಕಲಾ ಅವರಿಗೆ ಯಾವುದೇ ಅಧಿಕಾರ ಇಲ್ಲ. ಅವರು ಕಾನೂನು ಬಾಹಿರವಾಗಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಿಯಮಬದ್ದ ಚುನಾವಣೆ ನಡೆಯಬೇಕು. ಆದರೆ ಅದು ನಡೆದಿಲ್ಲ. ಹೀಗಾಗಿ ಅವರ ಅವರ ಆಯ್ಕೆ ಅನೂರ್ಜಿತವಾಗಿದೆ ಎಂದು ಮಧುಸೂದನನ್ ಹೇಳಿದ್ದಾರೆ.
ಇದೆಲ್ಲದರ ಮಧ್ಯೆ ಪನ್ನೀರ್‌ಸೆಲ್ವಂ ಬಣಕ್ಕೆ ಸೇರಿಕೊಂಡ ಪಕ್ಷದ ಗೌರವಾಧ್ಯಕ್ಷ ಮಧುಸೂದನನ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಶಶಿಕಲಾ ಅವರು ಉಚ್ಚಾಟಿಸಿದ್ದಾರೆ. ಹೀಗಾಗಿ ಎರಡೂ ಬಣಗಳ ನಡುವಣ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಪಕ್ಷದೊಳಗಿನ ತಮ್ಮ ವಿರೋಧಿಗಳಿಗೆ ಪ್ರಬಲ ಸಂದೇಶ ರವಾನಿಸಿರುವ ಶಶಿಕಲಾ, ಮಧುಸೂದನನ್ ಅವರೊಂದಿಗೆ ಪಕ್ಷದ ಯಾರೂ ಸಂಪರ್ಕ ಇರಿಸಿಕೊಳ್ಳಬಾರದು ಎಂಬ ಎಚ್ಚರಿಕೆ ನೀಡಿದ್ದಾರೆ. ಆದ್ರೆ, ತಾತ್ಕಾಲಿಕ ಪ್ರಧಾನ ಕಾರ್ಯದರ್ಶಿಯಾಗಿರುವ ಶಶಿಕಲಾ ಅವರಿಗೆ ಪಕ್ಷದ ಹುದ್ದೆಗಳಿಗೆ ನೇಮಕ ಮಾಡುವ ಅಥವಾ ಯಾರನ್ನಾದರೂ ಉಚ್ಚಾಟನೆ ಮಾಡುವ ಅಧಿಕಾರ ಇಲ್ಲ ಎಂದು ಪನ್ನೀರ್‌ಸೆಲ್ವಂ ಹೇಳಿದ್ದಾರೆ. ಈ ಮಧ್ಯೆ, ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಮಧುಸೂದನನ್, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಅವರಿಗೆ ಮಾನ್ಯತೆ ನೀಡಬಾರದು. ಶಶಿಕಲಾ ಅವರು ಪಕ್ಷದ ನಿಯಮಗಳ ಪ್ರಕಾರ ಆಯ್ಕೆ ಆಗಿಲ್ಲ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.