
ವಿಜಯಪುರ: ಪೊಲೀಸ್ ಠಾಣೆ ಅಂದರೆ ಪುಂಡ ಪೋಕರಿಗಳಿಗೆ, ಕುಡಿದು ಗಲಾಟೆ ಮಾಡುವವರಿಗೆ, ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ಕೊಡಿಸುವ ಜಾಗ ಅಂತಾರೆ. ಆದರೆ, ವಿಜಯಪುರ ಜಿಲ್ಲೆಯ ಠಾಣೆಯೊಂದರ ಪೊಲೀಸರಿಗೆ ಮಾತ್ರ ತಾವು ಮಾಡುತ್ತಿರುವ ಕೆಲಸದ ಪರಿವೇ ಇಲ್ಲದಂತಾಗಿದೆ.
ಹೌದು, ಪೊಲೀಸ್ ಠಾಣೆ ಅಂದ್ರೆ ಅದೆಷ್ಟೋ ಜನರಿಗೆ ನ್ಯಾಯ ಕೊಡಿಸುವ ಪವಿತ್ರ ಸ್ಥಳ ಎಂದು ನಂಬಿರ್ತಾರೆ. ಅಲ್ಲದೇ, ಅದೆಷ್ಟೋ ಪೊಲೀಸ್ ಠಾಣೆಗಳು ಮಾದರಿಯಾಗಿವೆ ಕೂಡ. ಆದರೆ, ನಾವು ಇಂದು ನಿಮಗೆ ತೋರಿಸ್ತಾ ಇರುವ ಠಾಣೆಯ ಚಿತ್ರಣವನ್ನ ನೋಡಿದ್ರೆ ನೀವೇ ಬೆಚ್ಚಿ ಬೀಳ್ತೀರಾ. ಹೌದು, ಇದು ಪೊಲೀಸ್ ಠಾಣೆಯಲ್ಲ... ಪೊಲೀಸ್ ಬಾರ್..
ಇಡೀ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರದ ಜಲ ನಗರ ಠಾಣಾ ಅಧಿಕಾರಿಗಳು ಹಾಗೂ ಪೇದೆಗಳು ಜನರ ಸಮಸ್ಯೆಗಳನ್ನು ಆಲಿಸುವುದನ್ನು ಬಿಟ್ಟು ಹಾಡಹಗಲೇ ಠಾಣೆ ಆವರಣದಲ್ಲಿ, ಗುಂಡು ತುಂಡಿನ ಮತ್ತಲ್ಲಿ ತೇಲಾಡಿದ್ದಾರೆ. ಈ ವಿಷಯ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತಾಗಿದೆ.
ವಿಜಯಪುರದ ಜಲನಗರ ಠಾಣೆಯನ್ನೇ ಬಾರ್ ಮಾಡಿ ಕೊಂಡ ಎಎಸ್ಐ ಮಾಳೆಗಾವ್, ಪೇದೆ ಸೊಡ್ಡಿ, ಪ್ರಕಾಶ್ ಅಕ್ಕಿ ಸೇರಿದಂತೆ ಇನ್ನುಳಿದ ಇಬ್ಬರು ಕುಡಿದು ಠಾಣಾ ಆವರಣದಲ್ಲೇ ಮಜಾ ಮಾಡಿದ್ದಾರೆ. ದುರಂತವೆಂದರೆ ಕುಡುಕ ಪೊಲೀಸ್ ಅಧಿಕಾರಿಗಳಿಗೆ ಸರ್ವರ್ ಬೇರಾರೂ ಅಲ್ಲ ಠಾಣೆಯಲ್ಲೇ ಇರುವ ಮಹಿಳಾ ಪೇದೆಗಳು. ಅಸಹಾಯಕ ಮಹಿಳಾ ಪೇದೆಗಳೇ ಹಿರಿಯ ಅಧಿಕಾರಿಗಳಿಗೆ ಮರು ಪ್ರಶ್ನೆ ಮಾಡದೇ ಸಪ್ಲೈ ಮಾಡುವ ಅನಿವಾರ್ಯತೆ ಎದುರಾಗಿದೆ.
ಜಲನಗರ ಠಾಣೆ ಕಂಪೌಂಡನ ಬೈಕ್ ಪಾರ್ಕಿಂಗ್ ಬಳಿ ದೂರು ನೀಡಲು ಬಂದ ಜನರಿಗೆ ಕೂರಲು ವ್ಯವಸ್ಥೆ ಮಾಡಿರುವ ಕುರ್ಚಿಗಳೇ ಈ ಕುಡುಕ ಪೋಲೀಸ್ ಅಧಿಕಾರಿಗಳಿಗೆ ಆಸನ. ಇನ್ನು ಇವರಿಗೆ ಎಣ್ಣೆಗೆ ಜತೆಗೆ ಠಾಣೆ ಪಕ್ಕದಲ್ಲೇ ಇರುವ ಕಲ್ಯಾಣ ಮಂಟಪದಲ್ಲಿ ನಡೆಯುವ ಮದುವೆ ಮನೆಯ ಉಪ್ಪಿನಕಾಯಿ, ಬಜ್ಜಿ, ಮಿರ್ಚಿ. ಸಾಲದಕ್ಕೆ ಅಲ್ಲಿಯ ಭೂರಿ ಭೋಜನ. ಯಾರೂ ಕೇಳೋರು ಹೇಳೋರೂ ಇಲ್ಲವೆಂಬಂತೆ ಕುಡಿತದ ನಶೆಯಲ್ಲಿ ಇವ್ರು ಆಡಿದ್ದೇ ಆಟ ಎಂಬಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲ್'ದೀಪ್ ಜೈನ್, ವಿಷಯ ಗಮನಕ್ಕೆ ಬಂದಿದೆ, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ವರದಿ: ವಿಜಯಪುರದಿಂದ ಪ್ರಸನ್ನ ದೇಶಪಾಂಡೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.