
ಬೆಂಗಳೂರು(ನ. 07): ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ವಿಭಿನ್ನ ಅಭಿಪ್ರಾಯವಿದೆ. ಎಲ್ಲಾ ಮುಗಿದ ಮೇಲೆ ಪೊಲೀಸರು ಸ್ಪಾಟ್'ಗೆ ಬರುತ್ತಾರೆ ಎಂದು ಅಣಕಿಸುವುದು ಉಂಟು. ಆದರೆ, ಈ ಸ್ಟೋರಿ ಓದಿದ ಮೇಲೆ ಅಂಥ ಕೆಲವರ ಅಭಿಪ್ರಾಯ ಬದಲಾಗಬಹುದು. ಬಾಣಸವಾಡಿಯಲ್ಲಿ ಸುಲಿಗೆಕೋರರಿಂದ ಸುತ್ತುವರಿದ ಬಾಲಾಜಿ ಎಂಬ ಉದ್ಯಮಿಯೊಬ್ಬರನ್ನು ಪೊಲೀಸರು ಕೇವಲ 7 ನಿಮಿಷಗಳಲ್ಲಿ ರಕ್ಷಿಸಿದ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ಘಟನೆ?
ಕಳೆದ ಶುಕ್ರವಾರ, ಅಂದರೆ ಅ. 28ರ ಮಧ್ಯರಾತ್ರಿಯ ಸಮಯ. ಬಾಲಾಜಿಯವರು ಆಫೀಸ್'ನಿಂದ ಮನೆಗೆ ಹೋಗುತ್ತಿರುತ್ತಾರೆ. ಮೂರ್ನಾಲ್ಕು ಮಂದಿ ಇದ್ದ ಎರಡು ಬೈಕ್'ಗಳು ಆ ಕಾರನ್ನು ಹಿಂಬಾಲಿಸುತ್ತಿರುತ್ತವೆ. ಮನೆ ತಲುಪಲು 100 ಮೀಟರ್ ಇರುವಂತೆ ಒಂದು ಬೈಕ್ ಮುಂದೆ ಬಂದು ಅಡ್ಡಗಟ್ಟಿ ನಿಲ್ಲುತ್ತದೆ. ಇನ್ನೊಂದು ಬೈಕು ಹಿಂದೆ ನಿಲ್ಲುತ್ತದೆ. ಬಾಲಾಜಿ ತನ್ನ ಬೈಕನ್ನು ಎತ್ತಕಡೆಯೂ ತಿರುಗಿಸದಂತೆ ಅಡ್ಡಗಟ್ಟುತ್ತಾರೆ. ಕಾರಿನ ಬಳಿ ಬಂದ ದುಷ್ಕರ್ಮಿಗಳು ಆ್ಯಕ್ಸಿಡೆಂಟ್ ಇತ್ಯಾದಿ ಏನೇನೋ ನೆಪಗಳನ್ನೊಡ್ಡಿ ಬಾಲಾಜಿಯವರನ್ನು ಹೆದರಿಸಲು ಆರಂಭಿಸುತ್ತಾರೆ. ಆದರೆ, ಬಾಲಾಜಿ ಕಾರಿನಿಂದ ಹೊರಬರದೇ ಅಲ್ಲೇ ಇರುತ್ತಾರೆ. ಕಾರಿನ ಗಾಜು ಸರಿಸಿದ ನಂತರ ಒಬ್ಬ ದುಷ್ಕರ್ಮಿ ಒಳಗೆ ಕೈಹಾಕಿ ಕೀಗಳನ್ನು ಎತ್ತಿಕೊಳ್ಳುತ್ತಾನೆ. ಲ್ಯಾಪ್'ಟಾಪ್ ಕಿತ್ತುಕೊಂಡು, ಹಣಕ್ಕೆ ಬೇಡಿಕೆ ಇಡುತ್ತಾರೆ.
ಹಣ ತನ್ನ ಬಳಿ ಇಲ್ಲವೆಂದು ಹೇಳುವ ಬಾಲಾಜಿ ತನ್ನ ಸ್ನೇಹಿತರಿಗೆ ಫೋನ್ ಮಾಡಿ ತರಿಸಿಕೊಳ್ಳುವುದಾಗಿ ತಿಳಿಸುತ್ತಾರೆ. ಇದಕ್ಕೆ ದುಷ್ಕರ್ಮಿಗಳು ಒಪ್ಪುತ್ತಾರೆ. ಸ್ನೇಹಿತರು ಬರುವುದು ತಡವಾಗುವುದೆಂದು ಅಂದಾಜು ಮಾಡಿದ ಬಾಲಾಜಿ ಜಾಣ್ಮೆ ಉಪಯೋಗಿಸಿ ಪೊಲೀಸ್ ಕಂಟ್ರೋಲ್ ರೂಮ್'ನ ನಂಬರ್ 100ಕ್ಕೆ ಡಯಲ್ ಮಾಡುತ್ತಾರೆ. ಸ್ನೇಹಿತರೊಂದಿಗೆ ಮಾತನಾಡುವ ರೀತಿಯಲ್ಲೇ ಮಾತನಾಡಿದ ಬಾಲಾಜಿ, ತನಗೆ ತುರ್ತಾಗಿ ಹಣ ಬೇಕಾಗಿದೆ ಎಂದು ತಿಳಿಸುತ್ತಾರೆ. ಕಂಟ್ರೋಲ್ ರೂಮ್'ನಲ್ಲಿದ್ದವರಿಗೆ ಇವರ ಸೂಕ್ಷ್ಮ ಸ್ಥಿತಿ ಅರ್ಥವಾಗುತ್ತದೆ. ಸ್ಥಳ ಎಲ್ಲಿ ಎಂಬ ವಿವರವನ್ನು ಪಡೆದುಕೊಳ್ಳುತ್ತಾರೆ.
ಏಳು ನಿಮಿಷಗಳಷ್ಟೇ..
ಬಾಲಾಜಿಯಿಂದ ಬಂದ ಕರೆ ಕಟ್ ಆದ ತತ್'ಕ್ಷಣವೇ ಪೊಲೀಸ್ ಕಾರ್ಯಾಚರಣೆ ಆರಂಭವಾಗುತ್ತದೆ. ಕಂಟ್ರೋಲ್ ರೂಮ್'ನಲ್ಲಿದ್ದವರು ಕೂಡಲೇ ಬಾಣಸವಾಡಿ ಪೊಲೀಸ್ ಠಾಣೆಯ ಹೊಯ್ಸಳ ವಾಹನವನ್ನು ಅಲರ್ಟ್ ಮಾಡುತ್ತಾರೆ. ಬಾಲಾಜಿ ಇದ್ದ ಸ್ಥಳದಿಂದ ಪೊಲೀಸರು 2 ಕಿಮೀ ದೂರವಿರುತ್ತಾರೆ. ಪಾಪಣ್ಣ ಮತ್ತು ಜಬೀವುಲ್ಲಾ ಎಂಬಿಬ್ಬರು ಹೊಯ್ಸಳ ಪೇದೆಗಳು ಕೂಡಲೇ ಸ್ಥಳಕ್ಕೆ ಆಗಮಿಸುತ್ತಾರೆ. ಪೊಲೀಸರು ಬಂದದ್ದನ್ನು ಕಂಡೊಡನೆಯೇ ನಾಲ್ವರು ದುಷ್ಕರ್ಮಿಗಳು ಕಾರಿನ ಕೀಯನ್ನು ಅಲ್ಲಿಯೇ ಬಿಸಾಡಿ ಅಲ್ಲಿಂದ ಕಂಬಿಕೀಳುತ್ತಾರೆ. ಕಂಟ್ರೋಲ್ ರೂಮಿಗೆ ಬಾಲಾಜಿ ಮಾಡಿದ ಕರೆ ಕಟ್ ಆದ ನಂತರ ಸರಿಯಾಗಿ ಏಳು ನಿಮಿಷಕ್ಕೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಲಾಜಿಯನ್ನು ಬಚಾವ್ ಮಾಡಿರುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.