
ನವದೆಹಲಿ(ಏ. 02): ಶ್ರೀ ಕೃಷ್ಣ ಪರಮಾತ್ಮನಿಗೆ ಅವಹೇಳನ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಹಿರಿಯ ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಿಲಕ್ ಮಾರ್ಗ್ ಠಾಣೆಯ ಪೊಲೀಸರು ದೂರನ್ನು ಸ್ವೀಕರಿಸಿದ್ದಾರಾದರೂ ಎಫ್'ಐಆರ್'ನ್ನು ಇನ್ನೂ ದಾಖಲಿಸಿಲ್ಲ.
ಶ್ರೀಕೃಷ್ಣ ಹುಡುಗಿಯರನ್ನು ಚುಡಾಯಿಸುವುದರಲ್ಲಿ ನಿಸ್ಸೀಮ ಎಂದು ಮಾಜಿ ಆಮ್ ಆದ್ಮಿ ಮುಖಂಡ ಪ್ರಶಾಂತ್ ಭೂಷಣ್ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಅವರು ಜಾರಿಗೆ ತಂದ ಆ್ಯಂಟಿ ರೋಮಿಯೋ ಕಾರ್ಯಾಚರಣೆಗೆ ಪ್ರಶಾಂತ್ ಭೂಷಣ್ ನೀಡಿದ ಪ್ರತಿಕ್ರಿಯೆ ಇದಾಗಿತ್ತು.
"ರೋಮಿಯೋ ಕೇವಲ ಒಬ್ಬ ಹುಡುಗಿಯನ್ನು ಪ್ರೀತಿಸಿದ. ಆದರೆ, ಕೃಷ್ಣ ಹುಡುಗಿಯರನ್ನು ಚುಡಾಯಿಸುವುದರಲ್ಲಿ ನಿಷ್ಣಾತ. ತಮ್ಮ ಕಾರ್ಯಾಚರಣೆಗೆ ಆ್ಯಂಟಿ-ಕೃಷ್ಣ ಪಡೆ ಎಂದು ಕರೆಯುವ ಧೈರ್ಯ ಆದಿತ್ಯನಾಥ್'ಗೆ ಇದೆಯಾ?" ಎಂದು ಪ್ರಶಾಂತ್ ಭೂಷಣ್ ಸವಾಲೆಸೆದು ಟ್ವೀಟ್ ಮಾಡಿದ್ದಾರೆ.
ದಿಲ್ಲಿಯ ಬಿಜೆಪಿ ವಕ್ತಾರ ತಜೀಂದರ್ ಪಾಲ್ ಸಿಂಗ್ ಬಗ್ಗಾ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಪ್ರಶಾಂತ್ ಭೂಷಣ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ತಮ್ಮ ಹೇಳಿಕೆಯನ್ನು ಸುಖಾಸುಮ್ಮನೆ ಅಪಾರ್ಥ ಮಾಡಿಕೊಳ್ಳಲಾಗಿದೆ ಎಂದು ಪ್ರಶಾಂತ್ ಭೂಷಣ್ ಸ್ಪಷ್ಟನೆ ನೀಡಿ ಇನ್ನಷ್ಟು ಟ್ವೀಟ್ ಮಾಡಿದ್ದಾರೆ.
"ರೋಮಿಯೋ ಬ್ರಿಗೇಡ್'ನ ಲಾಜಿಕ್ ನೋಡಿದಾಗ ಕೃಷ್ಣ ಪರಮಾತ್ಮ ಕೂಡ ಹುಡುಗಿಯರನ್ನು ಚುಡಾಯಿಸುವ ಪೋಕರಿಯಂತೆ ಕಾಣಿಸುತ್ತಾನೆ... ಗೋಪಿಯರನ್ನು ಕೃಷ್ಣ ಗೋಳು ಹುಯ್ದುಕೊಳ್ಳುವ ಕಥೆಗಳನ್ನು ಕೇಳುತ್ತಾ ಬೆಳೆದವರು ನಾವು. ಇವೆಲ್ಲಾ ಈಗ ಅಪರಾಧವಾಗಿ ಕಾಣುವಂತಾಗಿದೆ ಎಂದು ಹೇಳುವುದು ನನ್ನ ಉದ್ದೇಶ. ಯಾರ ಭಾವನೆಗೂ ಧಕ್ಕೆ ತರುವ ಉದ್ದೇಶ ನನ್ನದಾಗಿರಲಿಲ್ಲ" ಎಂದು ಸುಪ್ರೀಂಕೋರ್ಟ್ ವಕೀಲರೂ ಆಗಿರುವ ಪ್ರಶಾಂತ್ ಭೂಷಣ್ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.