
ಮಂಗಳೂರು (ನ.19) ಕಳ್ಳ ಖದೀಮರು ಹಾಗೂ ರೌಡಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೌರುಷ ತೋರಿಸುತ್ತಿರುವ ಮಂಗಳೂರು ನಗರ ಪೊಲೀಸರು, ತಮ್ಮದೇ ಪೊಲೀಸ್ ವಸತಿ ಗೃಹ ಪ್ರದೇಶದಲ್ಲಿ ಕಳ್ಳತನಕ್ಕೆ ಹೆದರಿ ಶಸ್ತ್ರ ಸನ್ಯಾಸವನ್ನು ಕೈಗೊಂಡಿದ್ದಾರೆ! ಅರ್ಥಾತ್ ಕಳ್ಳರಿಗೆ ಹೆದರಿ ನಗರ ಪಾಲಿಕೆಗೆ ಸೇರಿದ ಪೊಲೀಸ್ ಲೇನ್ ರಸ್ತೆಯನ್ನೇ ಬಂದ್ ಮಾಡುವ ಮೂಲಕ ಪರಾಕ್ರಮವನ್ನು ತೋರಿಸಿದ್ದಾರೆ!
ಯಕಶ್ಚಿತ್ ಕಳ್ಳರಿಗೆ ಹೆದರಿ ಪಾಲಿಕೆ ರಸ್ತೆಯನ್ನು ಈ ರೀತಿ ಬಂದ್ ಮಾಡಿರುವ ನಗರ ಪೊಲೀಸರ ಕ್ರಮಕ್ಕೆ ಮಂಗಳೂರು ನಗರದ ನಾಗರಿಕರಿಂದ ಅಸಮಾಧಾನ ವ್ಯಕ್ತವಾಗಿದೆ. ಪೊಲೀಸ್ ಅಧಿಕಾರಿಗಳ ಈ ಕ್ರಮದಿಂದಾಗಿ ಪೊಲೀಸ್ ಲೇನ್'ನ ನಾಗರಿಕರು ಸುತ್ತುಬಳಸಿ ಸಂಚರಿಸುವಂತಾಗಿದೆ.
ಈ ಪೊಲೀಸ್ ಲೇನ್ ರಸ್ತೆಗೆ ಮೂರು ಕಡೆ ನಗರದ ಪ್ರಮುಖ ರಸ್ತೆಯನ್ನು ಸಂಪರ್ಕಿಸುವ ದಾರಿ ಇದೆ. ಒಂದು ತಿಂಗಳ ಹಿಂದೆ ಮೊದಲು ಮುಖ್ಯ ರಸ್ತೆಯನ್ನು ಪ್ರವೇಶಿಸುವಲ್ಲಿ ಅಂದರೆ ನೆಹರೂ ಮೈದಾನದ ಎದುರಿನ ಪೊಲೀಸ್ ಲೇನ್ ರಸ್ತೆ ಪ್ರವೇಶವನ್ನು ಬಂದ್ ಮಾಡಲಾಯಿತು. ನಂತರ ಕೇಂದ್ರ ರೈಲು ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯಲ್ಲಿ ಸಾಮರ್ಥ್ಯ ಸೌಧದ ಎದುರು ಹಾಗೂ ಬಳಿಕ ಓಲ್ಡ್'ಕೆಂಟ್ ರಸ್ತೆಯನ್ನು ಸಂಪರ್ಕಿಸುವಲ್ಲೂ ಪೊಲೀಸ್ ಲೇನ್ ರಸ್ತೆಗೆ ಪ್ರವೇಶವನ್ನು ಬಂದ್ ಮಾಡಲಾಯಿತು. ಈಗ ಪೊಲೀಸ್ ಲೇನ್'ಗೆ ಹೋಗಬೇಕಾದರೆ ಬಹಳಷ್ಟು ಸುತ್ತುಬಳಸಬೇಕು. ಇದು ಪೊಲೀಸರಿಗೆ ಮಾತ್ರವಲ್ಲ, ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರಿಗೂ ತೊಂದರೆಯಾಗಿದೆ.ಆದರೆ ಪೊಲೀಸರೇ ರಸ್ತೆ ತಡೆ ಮಾಡಿರುವುದರಿಂದ ಇದನ್ನು ಪ್ರಶ್ನಿಸುವ ಧೈರ್ಯವನ್ನು ಯಾರೂ ಮಾಡುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ತಡೆಗೋಡೆಗೆ ಪೊಲೀಸ್ ಕಾವಲು: ಪೊಲೀಸ್ ಲೇನ್ ಸಂಪರ್ಕಿಸುವ ಮೂರು ಕಡೆ ರಸ್ತೆಯನ್ನು ಬಂದ್ ಮಾಡಿದ್ದಲ್ಲದೆ ಅಲ್ಲಿ ಪೊಲೀಸ್ ಸಿಬ್ಬಂದಿ ಕಾವಲನ್ನೂ ಹಾಕಲಾಗಿದೆ. ಕಲ್ಲು, ಟಯರ್, ಬ್ಯಾರಿಕೇಡ್ ಮೂಲಕ ತಡೆಗೋಡೆಯನ್ನು ನಿರ್ಮಿಸಿ ರಸ್ತೆಯನ್ನು ಬಂದ್ ಮಾಡಲಾಗಿದೆ. ತಡೆಗೋಡೆ ಏರಿಕೊಂಡು ಯಾರೂ ಪೊಲೀಸ್ ಲೇನ್ ಪ್ರವೇಶಿಸದಂತೆ ಒಂದು ತಡೆಗೋಡೆಯ ಎದುರು ತಲಾ ಇಬ್ಬರು ಪೊಲೀಸರು ಕಾವಲು ಇರುತ್ತಾರೆ. ಹೀಗೆ ಮೂರು ತಡೆಗೋಡೆಗಳಲ್ಲಿ ಕಾವಲು ಹಾಕಲಾಗಿದೆ. ಹೀಗಾಗಿ ಪೊಲೀಸರ ಕಣ್ತಪ್ಪಿಸಿಯೂ ತಡೆಗೋಡೆ ದಾಟಿ ನಡೆದುಕೊಂಡು ಹೋಗುವಂತಿಲ್ಲ.ಈ ಬಗ್ಗೆ ಪೊಲೀಸ್ ಸಿಬ್ಬಂದಿಯನ್ನು ಪ್ರಶ್ನಿಸಿದರೆ, ಮೇಲಧಿಕಾರಿಗಳ ಸೂಚನೆಯನ್ನು ಪಾಲಿಸುತ್ತಿದ್ದೇವೆ ಎಂದಷ್ಟೆ ಹೇಳುತ್ತಾರೆ.
ನಗರದ ಭದ್ರತೆಗೆ ಸಿಬ್ಬಂದಿ ಕೊರತೆ ಇರುವಾಗ ಪೊಲೀಸ್ ಲೇನ್ ತಡೆಗೋಡೆ ಕಾಯಲು ಪೊಲೀಸರ ಕೊರತೆ ಇರುವುದಿಲ್ಲವೇ ಎಂದು ನಾಗರಿಕರು ಪ್ರಶ್ನಿಸುವಂತಾಗಿದೆ. ಕಳ್ಳರಿಗೆ ಇಷ್ಟೊಂದು ಹೆದರುವುದು ಏಕೆ?: ಕಳ್ಳತನ, ದರೋಡೆ ಕೃತ್ಯಗಳು ನಡೆದಾಗ ಸಿಸಿ ಕ್ಯಾಮರಾ, ಸೆಕ್ಯೂರಿಟಿ ಸಿಬ್ಬಂದಿ ನೇಮಕದ ಬಗ್ಗೆ ಭದ್ರತಾ ಸಭೆ ನಡೆಸಿ ಆದೇಶ ನೀಡುವ ಪೊಲೀಸ್ ಅಧಿಕಾರಿಗಳು, ತಮ್ಮದೇ ವಸತಿ ಗೃಹಗಳಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವ ಬದಲು ರಸ್ತೆಯನ್ನೇ ಬಂದ್ ಮಾಡಿರುವುದು ಅಚ್ಚರಿಯ ಸಂಗತಿಯಾಗಿದೆ. ಮಾತ್ರವಲ್ಲ ಈ ಕ್ರಮವನ್ನು ಪೊಲೀಸ್ ಅಧಿಕಾರಿಗಳು ಕೂಡ ಸಮರ್ಥಿಸುತ್ತಾರೆ. ಮತ್ತೆ ಕಳ್ಳತನ ನಡೆದಿದೆಯೇ ಎಂದರೆ ಗೊತ್ತಿಲ್ಲ ಎನ್ನುತ್ತಿದ್ದಾರೆ.
ಇಷ್ಟಕ್ಕೂ ಕಳ್ಳರನ್ನು ಬೆನ್ನಟ್ಟುವ ಪೊಲೀಸರಿಗೆ ಪೊಲೀಸ್ ಲೇನ್ ಕಳ್ಳತನವನ್ನು ಪತ್ತೆ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಸಾಮಾನ್ಯರನ್ನೂ ಕಾಡಲಾರಂಭಿಸಿದೆ.ಪೊಲೀಸ್ ಲೇನ್‌ನಲ್ಲಿ ಪೊಲೀಸರ ಕುಟುಂಬ ಮಾತ್ರವಲ್ಲ ಇತರೆ ನಾಗರಿಕರೂ ಇದ್ದಾರೆ. ಎರಡು ದೇವಸ್ಥಾನ, ಒಂದು ಮಸೀದಿಯೂ ಇದೆ. ಇದು ಸಾರ್ವಜನಿಕರು ನಡೆದಾಡುವ ಪ್ರದೇಶ. ಈಗ ಪೊಲೀಸ್ ಲೇನ್ ರಸ್ತೆಯನ್ನೇ ಬಂದ್ ಮಾಡಿರುವ ಕಾರಣ ಇದು ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧಿತ ಪ್ರದೇಶವಾಗಿ ಮಾರ್ಪಟ್ಟಿದೆ ಎನ್ನುತ್ತಾರೆ ಸ್ಥಳೀಯರು.
ವಿಪರೀತವಾಗಿ ಕಳ್ಳತನ ನಡೆದ ಸಂದರ್ಭ ಒಂದು ತಿಂಗಳ ಮಟ್ಟಿಗೆ ಪೊಲೀಸ್ ಲೇನ್ ರಸ್ತೆಯನ್ನು ಬಂದ್ ಮಾಡುವುದಾಗಿ ನಗರದ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದರು. ಆದರೆ ತಮ್ಮದೇ ರಸ್ತೆಯನ್ನು ಬಂದ್ ಮಾಡಿರುವ ವಿಚಾರ ನಗರ ಪಾಲಿಕೆಯ ಅಧಿಕಾರಿಗಳಿಗೆ ಗೊತ್ತಿಲ್ಲ. ಈಗ ತಿಂಗಳು ಎರಡು ಕಳೆದಿದೆ. ಇನ್ನೂ ಪೊಲೀಸ್ ಲೇನ್ ರಸ್ತೆಗೆ ಬಂಧಮುಕ್ತ ಸಿಕ್ಕಿಲ್ಲ. ದೂರು ಯಾಕೆ ನೀಡುತ್ತಿಲ್ಲ?. ಪೊಲೀಸ್ ಲೇನ್‌ನಲ್ಲಿ ಕೆಲವು ತಿಂಗಳ ಹಿಂದೆ ಅನೇಕ ಬಾರಿ ಕಳ್ಳತನ ನಡೆದಿತ್ತು.
ಒಂದೆರಡು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಬಿಟ್ಟರೆ ಬಹುತೇಕ ಬಾರಿ ಕಳ್ಳತನ ನಡೆದರೂ ದೂರು ನೀಡಲು ಯಾರೂ ಮುಂದೆ ಬರುತ್ತಿಲ್ಲ ಯಾಕೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಪೊಲೀಸ್ ಲೇನ್‌ನಲ್ಲಿ ಪದೇ ಪದೇ ಕಳ್ಳತನ ನಡೆದಾಗ ದೂರು ನೀಡುವುದು ಎಂದರೆ, ಸಾರ್ವಜನಿಕವಾಗಿ ಪೊಲೀಸರಿಗೂ ಮರ್ಯಾದೆಯ ಪ್ರಶ್ನೆ ಬರುತ್ತದೆ. ಇದೇ ಕಾರಣಕ್ಕೆ ದೂರು ನೀಡುವ ಉಸಾಬರಿಯೇ ಬೇಡ ಎಂದು ಭಾವಿಸಿದ್ದಾರೆಯೇ? ಅಥವಾ ಮನೆಯಿಂದ ನಗ, ನಗದು ಕಳ್ಳತನವಾದರೆ ಸೊತ್ತುಗಳ ಮೌಲ್ಯವನ್ನು ದೂರಿನಲ್ಲಿ ತಿಳಿಸಬೇಕಾಗುತ್ತದೆ. ಇದು ಕೂಡ ಪೊಲೀಸರಿಗೆ ಕಗ್ಗಂಟಾಗಿದೆಯೇಎಂಬ ಶಂಕೆ ನಾಗರಿಕರಲ್ಲಿ ಮೂಡುವಂತಾಗಿದೆ. ಹಾಗಾಗಿ ಇದರ ಉಸಾಬರಿಯೇ ಬೇಡ ಎಂದು ರಸ್ತೆಗೆ ತಡೆಬೇಲಿ ಹಾಕುವ ಮೂಲಕ ನೆಗಡಿಯಾದರೆ ಮೂಗನ್ನೇ ಕೊಯ್ಯುವ ನಿರ್ಧಾರಕ್ಕೆ ಬರಲಾಗಿದೆ ಎಂದು ಆರೋಪಿಸ ಲಾಗುತ್ತಿದೆ.
ಪೊಲೀಸ್ ಲೇನ್ ಪ್ರದೇಶದಲ್ಲಿ ಕೆಲವು ಸಮಯದಿಂದ ರಾತ್ರಿ ಬೀಟ್ ನಡೆಯುತ್ತಿಲ್ಲ. ಇದೇ ಕಾರಣಕ್ಕೆ ರಾತ್ರಿ ಕಳ್ಳತನ ನಡೆಯುತ್ತಿದೆ. ಅದು ಕೂಡ ಕಳ್ಳರು ಪೊಲೀಸರ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿರುವುದು ಯಾಕೆ ಎಂಬುದೇ ಕುತೂಹಲಕಾರಿಯಾಗಿದೆ ಎನ್ನುತ್ತಾರೆ ನಾಗರಿಕರು.
ಒಂದೇ ಕಳವು ಪ್ರಕರಣ ದಾಖಲು: ಪೊಲೀಸ್ ಲೇನ್‌ನಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರ ವಸತಿಗೃಹದಿಂದ ಒಂದು ತಿಂಗಳ ಹಿಂದೆ ನಡೆದ ಕಳ್ಳತನ ಪ್ರಕರಣ ಮಾತ್ರ ನಗರದ ಪಾಂಡೇಶ್ವರ ಠಾಣೆಯಲ್ಲಿ ದಾಖಲಾಗಿದೆ. ಆ ಸಿಬ್ಬಂದಿ ವಸತಿ ಗೃಹದಿಂದ 4 ಪವನ್ ಚಿನ್ನ ಹಾಗೂ ನಗದು ಸೇರಿ ಕಳವಾದ ಸೊತ್ತುಗಳ ಮೌಲ್ಯ 1.25 ಲಕ್ಷ ಎಂದು ಠಾಣೆಗೆ ದೂರು ದಾಖಲಾಗಿತ್ತು. ನಂತರ ಕಳ್ಳತನ ನಡೆದರೂ ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.