ಮಸೀದಿಗಳಲ್ಲಿ ಟಾಯ್ಲೆಟ್ ಕಟ್ಟಿಸಲು ಮೋದಿ ಪತ್ರ; ಅಧಿಕಾರಿಗೆ ಸಂಚಲನ ಮೂಡಿಸಿದೆ 'ನಮೋ' ಸೂಚನೆ

Published : Dec 26, 2017, 08:59 AM ISTUpdated : Apr 11, 2018, 12:38 PM IST
ಮಸೀದಿಗಳಲ್ಲಿ ಟಾಯ್ಲೆಟ್ ಕಟ್ಟಿಸಲು ಮೋದಿ ಪತ್ರ; ಅಧಿಕಾರಿಗೆ ಸಂಚಲನ ಮೂಡಿಸಿದೆ 'ನಮೋ' ಸೂಚನೆ

ಸಾರಾಂಶ

ಗ್ರಾಮೀಣ ಪ್ರದೇಶದ ಮಸೀದಿಗಳಲ್ಲಿ ಶೌಚಾಲಯ, ಕುಡಿವ ನೀರಿನ ಸೌಲಭ್ಯವಿಲ್ಲ ಎಂಬ ಮನವಿಗೆ ಸ್ಪಂದಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ತಕ್ಷಣ ಆ ಸೌಲಭ್ಯ ವ್ಯವಸ್ಥೆ ಮಾಡುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿರುವುದು ಧಾರವಾಡ ಜಿಲ್ಲೆಯ ಅಧಿಕಾರಿ ವರ್ಗದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.

ಧಾರವಾಡ (ಡಿ.26): ಗ್ರಾಮೀಣ ಪ್ರದೇಶದ ಮಸೀದಿಗಳಲ್ಲಿ ಶೌಚಾಲಯ, ಕುಡಿವ ನೀರಿನ ಸೌಲಭ್ಯವಿಲ್ಲ ಎಂಬ ಮನವಿಗೆ ಸ್ಪಂದಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ತಕ್ಷಣ ಆ ಸೌಲಭ್ಯ ವ್ಯವಸ್ಥೆ ಮಾಡುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿರುವುದು ಧಾರವಾಡ ಜಿಲ್ಲೆಯ ಅಧಿಕಾರಿ ವರ್ಗದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.

ಧಾರವಾಡ ಜಿಲ್ಲೆ ಅಂಜುಮಾನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷರಾದ ಎಚ್.ಎಂ. ಕೊಪ್ಪದ ಅವರು ಗ್ರಾಮೀಣ ಭಾಗದ ಮಸೀದಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿರುವ ಬಗ್ಗೆ ಪತ್ರ ಬರೆದು ಸಮಸ್ಯೆ ನಿವೇದಿಸಿ ಕೊಂಡಿದ್ದರು. ಮುಸ್ಲಿಮರು ನಿತ್ಯ ನಮಾಜು ಮಾಡುವ ಬಹುತೇಕ ಮಸೀದಿಗಳಲ್ಲಿ ಶೌಚಾಲಯ, ನೀರಿನ ವ್ಯವಸ್ಥೆ ಅಷ್ಟಕಷ್ಟೆ. ನೂರಾರು ಸಂಖ್ಯೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಬರುವವರಿಗೆ ಈ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇಲ್ಲೂ ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಿಸಿ, ನೀರಿನ ವ್ಯವಸ್ಥೆ ಕಲ್ಪಿಸಿದರೆ ಉತ್ತಮವಾಗುತ್ತದೆ ಎಂದು ಎಚ್.ಎಂ. ಕೊಪ್ಪದ ಅವರು ಪ್ರಧಾನಿಗೆ ಪತ್ರದಲ್ಲಿ ತಿಳಿಸಿದ್ದರು. ಈ ಮನವಿಗೆ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಎರಡೇ ದಿನಗಳಲ್ಲಿ ಸ್ಪಂದನೆ ದೊರಕಿದ್ದು, ‘ಸ್ವಚ್ಛ ಭಾರತ ಅಭಿಯಾನ’ ಅಡಿಯಲ್ಲಿ ತಕ್ಷಣ ಗ್ರಾಮೀಣ ಮಸೀದಿಗಳ ಬಳಿ ಈ ಮೂಲಭೂತ ಸೌಕರ್ಯ ಕಲ್ಪಿಸಿ ಎಂದು ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ.

ಪ್ರಧಾನಿ ಸೂಚನೆಯಂತೆ ಮುಖ್ಯ ಕಾರ್ಯದರ್ಶಿಗಳು ಧಾರವಾಡ ಜಿಲ್ಲಾ ಪಂಚಾಯತಿ ಸಿಇಒ ಅವರಿಗೆ ಆದೇಶಿಸಿದ್ದಾರೆ. ಈಗ ಸಿಇಒ ಅವರಿಂದಲೂ ಆದೇಶ ಹೊರಬಿದ್ದಿದ್ದು, ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಮಸೀದಿಗಳನ್ನು ಹುಡುಕಿಕೊಂಡು ಹಳ್ಳಿಹಳ್ಳಿ ಸುತ್ತುತ್ತಿದ್ದಾರೆ. ಜನವರಿ ಅಂತ್ಯದ ಒಳಗಾಗಿ ಧಾರವಾಡ ಜಿಲ್ಲೆಯ ಎಲ್ಲ ಮಸೀದಿಗಳಿಗೆ ಈ ಮೂಲಸೌಕರ್ಯಗಳು ಲಭ್ಯವಾಗಲಿವೆ. ಹೀಗಾಗಿ ಗ್ರಾಮೀಣ ಭಾಗದ ಮನೆಗಳ ವೈಯಕ್ತಿಕ ಶೌಚಾಲಯಕ್ಕೆ ಸೀಮಿತವಾಗಿದ್ದ ‘ಸ್ವಚ್ಛ ಭಾರತ ಅಭಿಯಾನ’ ಇದೀಗ ಮಸೀದಿಗಳಿಗೂ ವಿಸ್ತರಣೆಯಾದಂತಾಗಿದೆ.

ಪಿಡಿಒಗಳಿಗೆ ಆದೇಶ: ಧಾರವಾಡ ಜಿ.ಪಂ. ಸಿಇಒ ಅವರು ಪಿಡಿಒಗಳಿಗೆ ಆದೇಶ ಹೊರಡಿಸಿ, ಧಾರವಾಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮಸೀದಿಗಳಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಬೇಕು. ಜತೆಗೆ ಗ್ರಾ.ಪಂ. ಸ್ವಂತ ನಿಧಿಯಲ್ಲಿ ಮಸೀದಿ ಪಕ್ಕ ನೀರಿನ ಟ್ಯಾಂಕ್ ಗಳನ್ನು ನಿರ್ಮಿಸಿಕೊಡಬೇಕು. ಶೌಚಾಲಯಗಳನ್ನು ಸ್ವಂತ ಅನುದಾನದಲ್ಲೇ ನಿರ್ವಹಣೆ ಮಾಡುವಂತೆ ಒಪ್ಪಿಗೆಯ ಮುಚ್ಚಳಿಕೆ ಪತ್ರವನ್ನು ಮಸೀದಿ ಆಡಳಿತ ಮಂಡಳಿಯಿಂದ ಬರೆಸಿಕೊಂಡು ಜಿ.ಪಂ.ಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಪಿಡಿಒಗಳಿಗೆ ಆದೇಶಿಸಿದ್ದಾರೆ. ಇದೀಗ ಜಿಲ್ಲೆಯ ಹುಬ್ಬಳ್ಳಿ, ಧಾರವಾಡ, ಕುಂದ ಗೋಳ, ಕಲಘಟಗಿ, ನವಲಗುಂದ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿನ ಮಸೀದಿಗಳ ಸಮೀಕ್ಷೆ ಕಾರ್ಯ ಮುಗಿದಿದ್ದು, ಒಟ್ಟು 300 ಮಸೀದಿಗಳಿವೆ. ಈ ಮಸೀದಿಗಳಲ್ಲಿ ಶೌಚಾಲಯ ನಿರ್ಮಾಣ ಹಾಗೂ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಬಹುಶಃ ಜನವರಿಯೊಳಗೆ ಶೌಚಾಲಯ ನಿರ್ಮಾಣ ಕಾರ್ಯ ಆರಂಭವಾಗಲಿದೆಯಂತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!