
ಕೋಲ್ಕತಾ(ಜ.06): ನೋಟು ಅಮಾನ್ಯ ಹಾಗೂ ತಮ್ಮ ಸಂಸದ ಸುದೀಪ್ ಬಂದೋಪಾಧ್ಯಯ ಬಂಧನದ ನಂತರ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ. ಮೋದಿ ವಿರುದ್ಧ ಹರಿಹಾಯ್ದಿರುವ ಮಮತಾ, ಪ್ರಧಾನಿ ಅವರನ್ನು ಕಾಳಿದಾಸನಿಗೆ ಹೋಲಿಸಿದ್ದಾರೆ.
ಕೋಲ್ಕತಾದಲ್ಲಿ ಮಾತನಾಡಿದ ಸಿಎಂ ಮಮತಾ, ‘‘ನಮ್ಮ ದೇಶವನ್ನು ಈಗ ಉಳಿಸಲು ರಾಷ್ಟ್ರಪತಿಗಷ್ಟೇ ಸಾಧ್ಯ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ನಾಯಕ ಅಸಮರ್ಥರಾಗಿದ್ದಾರೆ. ಅವರು ಕುಳಿತ ಮರವನ್ನೇ ಕಡಿದ ಕಾಳಿದಾಸ. ಆಡ್ವಾಣಿಜೀ, ರಾಜನಾಥ್'ಸಿಂಗ್ ಅಥವಾ ಅರುಣ್ ಜೇಟ್ಲಿ ಅವರಾದರೂ ಸರ್ಕಾರದ ನೇತೃತ್ವ ವಹಿಸಿದರೆ ಏನೂ ತೊಂದರೆಯಿಲ್ಲ. ಆದರೆ, ಕಾಳಿದಾಸನಂಥ ಅಸಮರ್ಥ ನಾಯಕನಿಂದ ದೇಶದ ಉದ್ಧಾರ ಸಾಧ್ಯವಿಲ್ಲ. ಕನಿಷ್ಟ 2 ವರ್ಷಗಳ ಕಾಲವಾದರೂ ರಾಷ್ಟ್ರಪತಿ ಆಳ್ವಿಕೆ ಹೇರುವುದು ಒಳ್ಳೆಯದು,’’ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರಕ್ಕೆ ವಿರೋಧ ಪಕ್ಷಗಳ ಆರೋಪಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ವಿರುದ್ಧ ವಿಪಕ್ಷಗಳು ಧ್ವನಿ ಎತ್ತಿದರೆ ಅವರ ಮೇಲೆ ಸಿಬಿಐ ಅನ್ನು ಛೂ ಬಿಡಲಾಗುತ್ತಿದೆ ಎಂದು ಟಿಎಂಸಿ ನಾಯಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತ್ವರಿತ ವಿಚಾರಣೆಗೆ ನಕಾರ:
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾಮಾನ್ಯ ಬಜೆಟ್ ಮಂಡನೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ‘‘ಇದರಲ್ಲಿ ತುರ್ತು ಏನೂ ಇಲ್ಲ. ಅರ್ಜಿಯು ವಿಚಾರಣೆಗೆ ಬಂದಾಗ ಕೈಗೆತ್ತಿಕೊಳ್ಳುತ್ತೇವೆ,’’ ಎಂದು ಸಿಜೆಐ ಜೆ ಎಸ್ ಖೆಹರ್ ನೇತೃತ್ವದ ಪೀಠ ಹೇಳಿದೆ. ಅರ್ಜಿಯ ತ್ವರಿತ ವಿಚಾರಣೆ ಕೋರಿ ವಕೀಲ ಎಂ.ಎಲ್ ಶರ್ಮಾ ಅರ್ಜಿ ಸಲ್ಲಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.