ಕಾಂಗ್ರೆಸಿಗೆ ಪ್ರಧಾನಿ ಮೋದಿ ಸವಾಲ್

By Kannadaprabha NewsFirst Published Oct 14, 2019, 7:21 AM IST
Highlights

ಜಮ್ಮು ಕಾಶ್ಮೀರದ 370 ವಿಧಿಗೆ ಸಂಬಂಧಿಸಿದಂತೆ ಕಾಂಗ್ರೆಸಿಗೆ ಪ್ರಧಾನಿ ನರೇಂದ್ರ ಮೋದಿ ಸವಾಲು ಹಾಕಿದ್ದಾರೆ. 

ಜಲಗಾಂವ್ [ಅ.14]: 370 ನೇ ವಿಧಿ ರದ್ದು ಕುರಿತಂತೆ ಕಾಂಗ್ರೆಸ್ ಹಾಗೂ ಎನ್‌ಸಿಪಿ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ನಿಜಕ್ಕೂ ತಾಕತ್ತು ಇದ್ದರೆ 370 ನೇ ವಿಧಿಯನ್ನು ಮತ್ತೆ ತರು ತ್ತೇವೆ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರಳಿಸುತ್ತೇವೆ ಎಂದು ಚುನಾವಣಾ ಪ್ರಣಾಳಿಕೆ ಯಲ್ಲಿ ಘೋಷಿಸಿ ಎಂದು ಸವಾಲು ಹಾಕಿದ್ದಾರೆ.

ಅ. 21 ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಿಮಿತ್ತ ಮೊದಲ  ಸಮಾವೇಶ ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ಜಮ್ಮು-ಕಾಶ್ಮೀರ ಎಂಬುದು ಒಂದು ತುಂಡು ಜಾಗವಲ್ಲ. ಇದು ಭಾರತದ ಕಿರೀಟ. ೪೦ ವರ್ಷಗಳಿಂದ ಅಲ್ಲಿರುವ ಪರಿಸ್ಥಿತಿಯನ್ನು ಸಹಜಸ್ಥಿತಿಗೆ ತರಲು 4 ತಿಂಗಳಿಗಿಂತ ಹೆಚ್ಚು ಸಮಯ ಬೇಕಾಗಿಲ್ಲ ಎಂದು ಹೇಳಿದರು.

370 ನೇ ವಿಧಿ ರದ್ದತಿ ವಿಚಾರವಾಗಿ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ. ನೆರೆಯ ದೇಶದ ರೀತಿ ಮಾತನಾಡುತ್ತಿವೆ. ಇಡೀ ದೇಶ ಯಾವ ರೀತಿಯ ಭಾವನೆ ಹೊಂದಿದೆಯೋ ಅದಕ್ಕೆ ತದ್ವಿರುದ್ಧವಾದ ಭಾವನೆ ವಿರೋಧ ಪಕ್ಷಗಳದ್ದಾಗಿದೆ ಎಂದು ಕುಟುಕಿದರು. ವಿಪಕ್ಷಗಳು ಮೊಸಳೆ ಕಣ್ಣೀರು ಹಾಕುವುದನ್ನು ಬಿಟ್ಟು, 370 ನೇ ವಿಧಿಯನ್ನು ಮರಳಿ ತರುತ್ತೇವೆ ಎಂದು ಮಹಾರಾಷ್ಟ್ರ ಚುನಾವಣೆ ಹಾಗೂ ಮುಂಬರುವ ಚುನಾವಣಾ ಪ್ರಣಾಳಿಕೆಗಳಲ್ಲಿ ಘೋಷಿಸಲಿ. 

ಆ ರೀತಿ ಅವರೇನಾದರೂ ಮಾಡಿದರೆ ಜನರು ಒಪ್ಪಿಕೊಳ್ಳುತ್ತಾರಾ? ಹಾಗೆ ಮಾಡಿದರೆ ಆ ಪಕ್ಷಗಳಿಗೆ ಭವಿಷ್ಯವೇ ಇರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಬಗ್ಗೆ ಹೊಗಳಿದ ಮೋದಿ, ಐದು ವರ್ಷಗಳ ಫಡ್ನವೀಸ್ ಅಧಿಕಾರಾವಧಿ ಭ್ರಷ್ಟಾಚಾರ ಮುಕ್ತವಾಗಿತ್ತು. ರೈತರು ಹಾಗೂ ಕೈಗಾರಿಕೋದ್ಯಮಿಗಳು ಸೇರಿದಂತೆ ಎಲ್ಲರಲ್ಲೂ  ವಿಶ್ವಾಸ ಮೂಡಿಸಿದೆ ಎಂದು ಬಣ್ಣಿಸಿದರು. 

ತ್ರಿವಳಿ ತಲಾಖ್ ಸವಾಲು: ಇದೇ ವೇಳೆ ತ್ರಿವಳಿ ತಲಾಕ್ ಗೆ ನಿಷೇಧ ಹೇರುವ ಎನ್‌ಡಿಎ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಸೇರಿದಂತೆ ಕೆಲ ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಸವಾಲು ಹಾಕಿದ್ಧಾರೆ. ನಿಮಗೆ ತಾಕತ್ತಿದ್ದರೆ, ಮತ್ತೆ ತ್ರಿವಳಿ ತಲಾಖ್ ಅನ್ನು ಜಾರಿಗೆ ತನ್ನಿ ಎಂದು ಕುಟುಕಿದ್ದಾರೆ. 

ಖರ್ಗೆ ಟೀಕೆ: ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರ ಚುನಾವಣೆಯ ಪ್ರಚಾರದಲ್ಲಿ ಕಾಶ್ಮೀರದಂತಹ ರಾಷ್ಟ್ರೀಯ ವಿಚಾರವನ್ನು ಪ್ರಸ್ತಾಪಿಸಿದ್ದನ್ನು ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ, ಕಲಬುರಗಿಯ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಲಾತೂರಿನ ಅಸುವಾದಲ್ಲಿ ಭಾನುವಾರ ಕಾಂಗ್ರೆಸ್ ರ‌್ಯಾಲಿಯಲ್ಲಿ ಮಾತನಾಡಿದ ಖರ್ಗೆ, ‘ಮೋದಿ ಅವರು ರಾಷ್ಟ್ರೀಯ ವಿಚಾರಗಳ ಆಧಾರದಲ್ಲಿ ಇಂದು
ಮಹಾರಾಷ್ಟ್ರದಲ್ಲಿ ಮತ ಕೇಳುತ್ತಿದ್ದಾರೆ. ಏಕೆಂದರೆ ಮಹಾರಾಷ್ಟ್ರದಲ್ಲಿ ಅವರ ಸರ್ಕಾರ ಯಾವುದೇ ಸಾಧನೆ ಮಾಡಿಲ್ಲ. ಹೀಗಾಗಿ ಹೊರಗಿನ ರಾಜ್ಯದ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ 35 ಸಾವಿರ ಕೋಟಿ ರು. ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಫಡ್ನವೀಸ್ ಸರ್ಕಾರ ಅದರ ಅರ್ಧದಷ್ಟೂ ಸಾಲ ಮನ್ನಾ ಮಾಡಿಲ್ಲ’ ಎಂದು ಟೀಕಿಸಿದರು. ‘ಪ್ರಜಾಪ್ರಭುತ್ವವನ್ನು ಹಾಗೂ ಸಂವಿಧಾನವನ್ನು ಕಾಂಗ್ರೆಸ್ ರಕ್ಷಿಸಿತು. ಹೀಗಾಗಿ ಇಂದು ಚುನಾವಣೆ ನಡೆಯುತ್ತಿದೆ ಮತ್ತು ನೀವಿಂದು ಇಲ್ಲಿ ಮೋದಿ ಹಾಗೂ ಅಮಿತ್ ಶಾ ಅವರನ್ನು ನೋಡುತ್ತಿದ್ದೀರಿ’ ಎಂದೂ ಖರ್ಗೆ ಹೇಳಿದರು.

click me!