
ನವದೆಹಲಿ[ಆ.29]: ಈಗಾಗಲೇ ಸ್ವಚ್ಛ ಭಾರತ ಸೇರಿದಂತೆ ಇನ್ನಿತರ ಮಹತ್ವಾಕಾಂಕ್ಷಿ ಆಂದೋಲನಗಳನ್ನು ಜಾರಿಗೊಳಿಸಿ ಯಶಸ್ವಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಶಾಲಾ ವಿದ್ಯಾರ್ಥಿಗಳ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವ ‘ಫಿಟ್ ಇಂಡಿಯಾ ಆಂದೋಲನ’ಕ್ಕೆ ಗುರುವಾರ ಚಾಲನೆ ನೀಡಲಿದ್ದಾರೆ. ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಫಿಟ್ ಇಂಡಿಯಾ ಆಂದೋಲನದ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮವು ದೂರದರ್ಶನದಲ್ಲಿ ಪ್ರಸಾರವಾಗಲಿದ್ದು, ಇದರ ವೀಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಯುಜಿಸಿ ಹಾಗೂ ಸಿಬಿಎಸ್‌ಇ ತಮ್ಮ ಅಧೀನಕ್ಕೆ ಒಳಪಡುವ ಶಿಕ್ಷಣ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿವೆ.
ಏತನ್ಮಧ್ಯೆ, ಫಿಟ್ ಇಂಡಿಯಾ ಆಂದೋಲನದಲ್ಲಿ ದೇಶದ ಜನತೆ ಹೆಚ್ಚು ಜನ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೇಂದ್ರದ ಯುವ ಹಾಗೂ ಕ್ರೀಡಾ ಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜಿಜು ಮನವಿ ಮಾಡಿದ್ದಾರೆ. ಫಿಟ್ ಇಂಡಿಯಾ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದು, ಆರೋಗ್ಯಕರ ಜೀವನಕ್ಕೆ ಫಿಟ್ ಇಂಡಿಯಾ ನೆರವಾಗಲಿದೆ ಎಂದು ಹೇಳಿದರು.
ಫಿಟ್ ಇಂಡಿಯಾ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಲಿರುವ ಭಾಷಣವನ್ನು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗೆ ನೋಡಲು ಅನುವಾಗುವ ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿಶ್ವಸಂಸ್ಥೆ ಅನುದಾನ ಆಯೋಗ(ಯುಜಿಸಿ) ಸೂಚನೆ ನೀಡಿದೆ. ಫಿಟ್‌ನೆಸ್ ಪ್ರತಿಜ್ಞೆಯ ಭಾಗವಾಗಿ, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ಇಂದು(ಗುರುವಾರ) ಕನಿಷ್ಠ 10 ಸಾವಿರ ಹೆಜ್ಜೆಗಳನ್ನು ನಡೆಯಬೇಕು. ಅಲ್ಲದೆ, ಇದನ್ನು ದಿನನಿತ್ಯ ಪಾಲಿಸುವ ಸಲುವಾಗಿ ವ್ಯಾಯಾಮ ಕಾರ್ಯಚಟುವಟಿಕೆಗೆ ಶಿಕ್ಷಣ ಸಂಸ್ಥೆಗಳು ಯೋಜನೆ ರೂಪಿಸಬೇಕು. ಅಲ್ಲದೆ, ಫಿಟ್ ಇಂಡಿಯಾ ಆಂದೋಲನದ ಪೋರ್ಟಲ್ ಅನ್ನು ಯುಜಿಸಿ ಅಭಿವೃದ್ಧಿ ಪಡಿಸುತ್ತಿದ್ದು, ಇದಕ್ಕೆ ಶಿಕ್ಷಣ ಸಂಸ್ಥೆಗಳು ಫಿಟ್‌ನೆಸ್ ಬಗ್ಗೆ ತಮ್ಮ ಕಾರ್ಯ ಯೋಜನೆಯನ್ನು ಅಪ್ಲೋಡ್ ಮಾಡಬೇಕು. ಜೊತೆಗೆ, ಫಿಟ್‌ನೆಸ್ ಯೋಜನೆಯನ್ನು ಜನಪ್ರಿಯಗೊಳಿಸಲು ಶಾಲಾ-ಕಾಲೇಜಿನ ನೋಟಿಸ್ ಬೋರ್ಡ್, ತಮ್ಮ ವೆಬ್‌ಸೈಟ್‌ಗಳಲ್ಲಿ ಈ ಕುರಿತು ಅಪ್ಲೋಡ್ ಮಾಡಬೇಕು ಎಂದು ಸಹ ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.