
ನವದೆಹಲಿ: ಎಣ್ಣೆಕಾಳು ಬೆಳೆಗಾರರು ಬೆಳೆದ ಬೆಳೆಯ ಬೆಲೆ ಗರಿಷ್ಠ ಬೆಂಬಲ ಬೆಲೆಗಿಂತ ಕುಸಿದರೆ, ಅಂಥ ಸಂದರ್ಭದಲ್ಲಿ ನಷ್ಟದ ಪ್ರಮಾಣವನ್ನು ಪರಿಹಾರ ರೂಪದಲ್ಲಿ ನೀಡುವ ‘ಅನ್ನದಾತ ಮೂಲ್ಯ ಸಂರಕ್ಷಣ’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದೇ ವೇಳೆ ಎಣ್ಣೆಕಾಳು ಬೆಳೆಗಳ ಖರೀದಿಗೆ ಖಾಸಗಿಯವರಿಗೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಅನುವು ಮಾಡಿಕೊಡುವ ಯೋಜನೆಗೂ ಸಂಪುಟ ಒಪ್ಪಿಗೆ ನೀಡಿದೆ. ಈ ಎರಡೂ ಯೋಜನೆಗಳಿಗೆ ಸರ್ಕಾರ 15053 ಕೋಟಿ ರು. ಬಿಡುಗಡೆ ಮಾಡಲು ಸಮ್ಮತಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಅನುಮೋದನೆ ನೀಡಲಾಯಿತು. ಕಳೆದ ಬಜೆಟ್‌ನಲ್ಲಿ ರೈತರಿಗೆ ಪೂರ್ಣ ಬೆಂಬಲ ಬೆಲೆ ಒದಗಿಸುವ ಯೋಜನೆಯೊಂದನ್ನು ಜಾರಿಗೊಳಿಸುವ ಭರವಸೆ ನೀಡಲಾಗಿತ್ತು. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈಗ ಕ್ರಮ ಜರುಗಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಈ ಯೋಜನೆ ಪ್ರಕಾರ, ಎಣ್ಣೆಕಾಳು ಬೆಳೆದ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗದೇ ಹೋದರೆ ಸಗಟು ಮಾರುಕಟ್ಟೆಯ ದರದಲ್ಲಿ ಉಳಿದ ವ್ಯತ್ಯಾಸದ ದರವನ್ನು ರೈತರಿಗೆ ಸರ್ಕಾರವೇ ಭರಿಸಿಕೊಡಲಿದೆ. ಆ ಮಾಸದ ಸರಾಸರಿ ದರ ಆಧರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ, ವ್ಯತ್ಯಾಸ ಹಣವನ್ನು ರೈತರಿಗೆ ನೀಡಲಾಗುತ್ತದೆ.
3 ಅವಕಾಶ: ರೈತರ ಬೆಳೆಗೆ ಹೆಚ್ಚಿನ ಬೆಲೆ ದೊರಕಿಸಿಕೊಡಲು ಕೇಂದ್ರ ಸರ್ಕಾರ, ರಾಜ್ಯಗಳಿಗೆ 3 ಯೋಜನೆಗಳ ಆಫರ್ ನೀಡಿದೆ. ಮೊದಲನೆಯದು, ಹಾಲಿ ಜಾರಿಯಲ್ಲಿರುವ ಕನಿಷ್ಠ ಬೆಂಬಲ ಬೆಲೆ. ಎರಡನೆ ಯದ್ದು ರೈತರಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಮಾರುಕಟ್ಟೆಬೆಲೆ ನಡುವಿನ ವ್ಯತ್ಯಾಸದ ದರವನ್ನು ಸರ್ಕಾರವೇ ತುಂಬಿಕೊಡುವುದು. ಮೂರನೆಯದ್ದು ಖಾಸಗಿ ಪಾಲುದಾರಿಕೆಯಲ್ಲಿ ಖರೀದಿಗೆ ಅವಕಾಶ ಮಾಡಿಕೊಡುವುದು.
ಮೊದಲನೇ ಯೋಜನೆ ಹಾಲಿ ಇರುವ ರೀತಿಯಲ್ಲೇ ಮುಂದುವರೆಯಲಿದೆ. ಒಂದು ವೇಳೆ ರಾಜ್ಯ ಸರ್ಕಾರಗಳು 2ನೇ ಯೋಜನೆ ಆಯ್ದುಕೊಂಡರೆ ರೈತರಿಗೆ ಮಾರಾಟದಲ್ಲಿ ಒಂದು ವೇಳೆ ನಷ್ಟಉಂಟಾದಲ್ಲಿ ಅದನ್ನು ಸರ್ಕಾರವೇ ಭರಿಸಿಕೊಡಲಿದೆ. ಉದಾಹರಣೆಗೆ 1 ಕ್ವಿಂಟಾಲ್ ಸೂರ್ಯಕಾಂತಿ ಬೀಜಕ್ಕೆ 3750 ರು. ಕನಿಷ್ಠ ಬೆಂಬಲ ಬೆಲೆ ಇರುತ್ತದೆ. ಆದರೆ ರೈತನಿಗೆ ಮಾರುಕಟ್ಟೆಯಲ್ಲಿ 3000 ರು. ದರ ಮಾತ್ರ ಸಿಗುತ್ತದೆ. ಆಗ ಸರ್ಕಾರ ಆ ತಿಂಗಳಲ್ಲಿ ಸಗಟು ಮಾರುಕಟ್ಟೆಯಲ್ಲಿ ಇದ್ದ ದರದ ಸರಾಸರಿ ತೆಗೆದು ಆ ಮೂಲಕ ದರವನ್ನು ನಿಗದಿ ಮಾಡಿ ಬಾಕಿ ಮೊತ್ತವನ್ನು ರೈತನಿಗೆ ಪಾವತಿ ಮಾಡುತ್ತದೆ. ಆದರೆ ಈ ಯೋಜನೆ ನೊಂದಾಯಿತ ಮಾರುಕಟ್ಟೆಯಲ್ಲಿ ಮೊದಲೇ ಹೆಸರು ನೊಂದಾಯಿಸಿಕೊಂಡ ರೈತರಿಗೆ ಮಾತ್ರ ಲಭ್ಯವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.