
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು 4 ದಿವಸಗಳ ಪಶ್ಚಿಮ ಏಷ್ಯಾ ದೇಶಗಳ ಯಾತ್ರೆಗೆ ಶುಕ್ರವಾರ ಆರಂಭವಾಗಿದ್ದು, ಮೊದಲ ಹಂತವಾಗಿ ಅವರು ಜೋರ್ಡಾನ್‌ಗೆ ತೆರಳಿದರು. ಇದು ಜೋರ್ಡಾನ್‌ಗೆ ಭಾರತದ ಪ್ರಧಾನಿಯೊಬ್ಬರು 30 ವರ್ಷಗಳಲ್ಲಿ ನೀಡುತ್ತಿರುವ ಮೊದಲ ಭೇಟಿ. ಮೋದಿ ಭೇಟಿ ನೀಡಲಿರುವ 4 ದೇಶಗಳ ಪೈಕಿ ಪ್ರಮುಖ ದೇಶ ಪ್ಯಾಲೆಸ್ತೀನ್ ಆಗಿದೆ. ಭಾರತದ ಪ್ರಧಾನಿಯೊಬ್ಬರು ಪ್ಯಾಲೆಸ್ತೀನ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಜೋರ್ಡಾನ್, ಪ್ಯಾಲೆಸ್ತೀನ್ ಅಲ್ಲದೆ, ಯುಎಇ ಹಾಗೂ ಓಮಾನ್‌ಗೆ ಕೂಡ ಮೋದಿ ಅವರು ಭೇಟಿ ನೀಡಲಿದ್ದಾರೆ. ಕೊಲ್ಲಿ ಹಾಗೂ ಪಶ್ಚಿಮ ಏಷ್ಯಾ ದೇಶಗಳೊಂದಿಗೆ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಭೇಟಿ ಪ್ರಮುಖವಾಗಿದೆ. ಭದ್ರತೆ, ವ್ಯಾಪಾರ ಹಾಗೂ ವ್ಯೂಹಾತ್ಮಕ ಮಾತುಕತೆಗಳನ್ನು ಈ ವೇಳೆ ಆಯಾ ದೇಶಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ಸಮಾಲೋಚಿಸಲಿದ್ದಾರೆ.
ಈ ಪ್ರವಾಸವನ್ನು ಫೆಬ್ರವರಿ 10ರಿಂದ ಪ್ಯಾಲೆಸ್ತೀನ್ ಭೇಟಿಯೊಂದಿಗೆ ಮೋದಿ ಆರಂಭಿಸಲಿದ್ದಾರೆ. ಅಲ್ಲಿ ಅವರು ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಮಾತುಕತೆ ನಡೆಸಲಿದ್ದು, ಪ್ಯಾಲೆಸ್ತೀನ್ ಅಭಿವೃದ್ಧಿಗೆ ಸಹಕಾರ ನೀಡುವ ಬದ್ಧತೆ ಪ್ರಕಟಿಸಲಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಮಧ್ಯೆ ಎಣ್ಣೆ ಸೀಗೆಕಾಯಿ ಸಂಬಂಧ ಇರುವ ಹಿನ್ನೆಲೆಯಲ್ಲಿ ಮೋದಿ ಅವರು ಎರಡೂ ದೇಶಗಳ ಮಿತ್ರತ್ವದ ನಡುವೆ ಹೇಗೆ ಸಮನ್ವಯ ಸಾಧಿಸಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ಯುಎಇನಲ್ಲಿ ಅವರು ದುಬೈ ಅರಸ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ಕ ಮಕ್ತೋಮ್ ಅವರೊಂದಿಗೆ ಹಾಗೂ ದುಬೈ ರಾಜಕುವರ ಶೇಖ್ ಮೊಹಮ್ಮದ್ ಬುನ್ ಝಾಯೇದ್ ಅಲ್ ನಹ್ಯಾನ್ ಅವರೊಂದಿಗೆ ಚರ್ಚಿಸಲಿದ್ದಾರೆ. ದುಬೈನಲ್ಲಿ ವಿಶ್ವ ಸರ್ಕಾರಿ ಶೃಂಗವನ್ನು ಉದ್ದೇಶಿಸಿ ಕೂಡ ಅವರು ಮಾತನಾಡಲಿದ್ದಾರೆ. ತಮ್ಮ ಪ್ರವಾಸದ ಕೊನೆಗೆ ಅವರು ಓಮಾನ್‌ಗೆ ಭೇಟಿ ನೀಡಿ ಅಲ್ಲಿನ ಸುಲ್ತಾನ ಹಾಗೂ ಪ್ರಧಾನಿ ಜತೆ ಸಮಾಲೋಚನೆ ನಡೆಲಿದ್ದಾರೆ.
ದೇಗುಲಕ್ಕೆ ಶಂಕುಸ್ಥಾಪನೆ : ಪ್ರಧಾನಿ ನರೇಂದ್ರ ಮೋದಿ ಅಬುದಾಬಿಯಲ್ಲಿ ಸ್ವಾಮಿನಾರಾಯಾಣ ದೇಗುಲ ನಿರ್ಮಾಣಕ್ಕೆ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ದುಬೈನಿಂದ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕವೇ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.