ಕನ್ನಡ ಬಾರದ ವಕೀಲಗೆ ಹೈಕೋರ್ಟ್‌ ತರಾಟೆ

By Suvarna Web DeskFirst Published Feb 10, 2018, 8:00 AM IST
Highlights

ಕನ್ನಡ ಬಾರದಿದ್ದರೆ ಕರ್ನಾಟಕದಲ್ಲಿ ವಕೀಲಿಕೆ ಏಕೆ ಮಾಡುತ್ತೀರಿ.. ಕನ್ನಡ ಬರುವುದಿಲ್ಲ ಎನ್ನುವುದಾದರೆ ಕ್ರಿಮಿನಲ್‌ ಪ್ರಕರಣಗಳಿಗೆ ವಕಾಲತು ಹಾಕುವುದನ್ನು ನಿಲ್ಲಿಸಿಬಿಡಿ’ ಎಂದು ಕನ್ನಡದಲ್ಲಿದ್ದ ದಾಖಲೆಗಳನ್ನು ಓದಲು ತಡಬಡಾಯಿಸುತ್ತಿದ್ದ ವಕೀಲರೊಬ್ಬರಿಗೆ ಹೈಕೋರ್ಟ್‌ ತರಾಟೆ ತೆಗೆದುಕೊಂಡಿದೆ.

ಬೆಂಗಳೂರು : ‘ಕನ್ನಡ ಬಾರದಿದ್ದರೆ ಕರ್ನಾಟಕದಲ್ಲಿ ವಕೀಲಿಕೆ ಏಕೆ ಮಾಡುತ್ತೀರಿ.. ಕನ್ನಡ ಬರುವುದಿಲ್ಲ ಎನ್ನುವುದಾದರೆ ಕ್ರಿಮಿನಲ್‌ ಪ್ರಕರಣಗಳಿಗೆ ವಕಾಲತು ಹಾಕುವುದನ್ನು ನಿಲ್ಲಿಸಿಬಿಡಿ’ ಎಂದು ಕನ್ನಡದಲ್ಲಿದ್ದ ದಾಖಲೆಗಳನ್ನು ಓದಲು ತಡಬಡಾಯಿಸುತ್ತಿದ್ದ ವಕೀಲರೊಬ್ಬರಿಗೆ ಹೈಕೋರ್ಟ್‌ ತರಾಟೆ ತೆಗೆದುಕೊಂಡಿದೆ.

ಪತ್ನಿಯ ಕೊಲೆ ಆರೋಪ ಸಂಬಂಧ ಅಧೀನ ನ್ಯಾಯಾಲಯ ತನಗೆ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದುಪಡಿಸುವಂತೆ ಕೇಶವ ಎಂಬಾತ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದ. ಅಲ್ಲದೆ, ಮೇಲ್ಮನವಿ ಇತ್ಯರ್ಥಪಡಿಸುವರೆಗೂ ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿರಿಸುವಂತೆ ಮಧ್ಯಂತರ ಮನವಿ ಮಾಡಿದ್ದ.

ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಕೆ.ಸೋಮಶೇಖರ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ವಿಚಾರಣೆಗೆ ಬಂದಿತ್ತು. ವಿಚಾರಣೆ ಸಂದರ್ಭದಲ್ಲಿ ಪ್ರಕರಣದ ತನಿಖಾಧಿಕಾರಿಗಳು ನೀಡಿದ್ದ ಸಾಕ್ಷ್ಯದ ದಾಖಲೆ ಓದಲು ಕೇಶವ ಪರ ವಕೀಲರಿಗೆ ನ್ಯಾಯಪೀಠ ನಿರ್ದೇಶಿಸಿತು. ಆದರೆ, ಕನ್ನಡದಲ್ಲಿದ್ದ ದಾಖಲೆಗಳನ್ನು ಓದಲು ವಕೀಲರು ತಡಬಡಾಯಿಸುತ್ತಿದ್ದರು. ಅಲ್ಲದೆ, ಕನ್ನಡದ ಶಬ್ದಗಳನ್ನು ಸರಿಯಾಗಿ ಉಚ್ಛರಿಸುತ್ತಿರಲಿಲ್ಲ.

ಇದರಿಂದ ತೀವ್ರ ಅಸಮಾಧಾನಗೊಂಡ ನ್ಯಾಯಮೂರ್ತಿ ರವಿ ಮಳಿಮಠ ಅವರು, ‘ಕನ್ನಡ ಓದಲು ನೀವು ಏಕೆ ಇಷ್ಟೊಂದು ಕಷ್ಟಪಡುತ್ತಿದ್ದೀರಿ? ನಿಮಗೆ ಕನ್ನಡ ಓದಲು ಬರುವುದಿಲ್ಲವೇ? ಕನ್ನಡ ಬಾರದಿದ್ದರೆ ಕ್ರಿಮಿನಲ್‌ ಪ್ರಕರಣಗಳಲ್ಲಿ ಏಕೆ ವಕಾಲತ್ತು ಹಾಕುತ್ತೀರಿ? ಎಂದು ಖಾರವಾಗಿ ಪ್ರಶ್ನಿಸಿದರು.

ಅಲ್ಲದೆ, ಕ್ರಿಮಿನಲ್‌ ಪ್ರಕರಣಗಳು ವ್ಯಕ್ತಿಯ ಜೀವನ್ಮರಣದ ಪ್ರಶ್ನೆಯಾಗಿರುತ್ತವೆ. ಸಾಕ್ಷಿಗಳು ನೀಡುವ ಹೇಳಿಕೆಗಳು ಕನ್ನಡದಲ್ಲಿಯೇ ಇರುತ್ತವೆ. ಅವುಗಳನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡು ನ್ಯಾಯಾಲಯಕ್ಕೆ ವಿವರಿಸಬೇಕು. ಇಲ್ಲವಾದರೆ, ನಿಮ್ಮ ಕಕ್ಷಿದಾರನಿಗೇ ತೊಂದರೆ ಉಂಟಾಗುತ್ತದೆ ಎಂದು ನ್ಯಾಯಮೂರ್ತಿಗಳು ಎಚ್ಚರಿಸಿದರು. ಹಾಗೆಯೇ, ಕನ್ನಡ ಓದಲು ಹಾಗೂ ಬರೆಯಲು ಬಾರದಿದ್ದರೆ ನಾಳೆಯಿಂದ ಹೈಕೋರ್ಟ್‌ನಲ್ಲಿ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಗೆ ಹಾಜರಾಗಬೇಡಿ ಎಂದು ತೀಕ್ಷ$್ಣವಾಗಿ ನುಡಿದರು.

ಪ್ರಕರಣದಲ್ಲಿ ಕೇಶವ ಪರ ವಕೀಲರ ವಾದ ಹಾಗೂ ಸರ್ಕಾರಿ ಅಭಿಯೋಜಕರ ಪ್ರತಿವಾದ ಆಲಿಸಿದ ನ್ಯಾಯಪೀಠವು, ಕೇಶವನಿಗೆ ಅಧೀನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ್ದ ಆದೇಶವನ್ನು ಅಮಾನತಿನಲ್ಲಿರಿಸಿ ಜಾಮೀನು ನೀಡಿತು.

ಪ್ರಕರಣದ ಹಿನ್ನೆಲೆ: ಕೇಶವ 2013ರಲ್ಲಿ ತನ್ನ ಪತ್ನಿಯನ್ನು ಕೊಲೆ ಮಾಡಿ, ತದನಂತರ ತಾನೂ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ಕೇಶವನನ್ನು ದೋಷಿ ಎಂದು ತೀರ್ಮಾನಿಸಿದ್ದ ದೇವನಹಳ್ಳಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ 2015ರ ನ.20ರಂದು ಆದೇಶಿಸಿತ್ತು.

ಈ ಆದೇಶ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿರುವ ಕೇಶವ, ನನ್ನ ಪತ್ನಿಯೊಂದಿಗೆ ಮತ್ತೊಬ್ಬ ವ್ಯಕ್ತಿ ಅನೈತಿಕ ಸಂಬಂಧ ಹೊಂದಿದ್ದ. ಆತನೇ ನನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಪ್ರಕರಣದಲ್ಲಿ ನಾನು ನಿರ್ದೋಷಿಯಾಗಿದ್ದೇನೆ. ಆದರೆ, ಅಧೀನ ನ್ಯಾಯಾಲಯ ನನ್ನನ್ನು ದೋಷಿ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿರುವುದು ಕಾನೂನು ಬಾಹಿರವಾಗಿದೆ. ಆದ್ದರಿಂದ ತನಗೆ ವಿಧಿಸಿರುವ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿದ್ದಾನೆ.

click me!