ಪ್ರಧಾನಿ ಮೋದಿಯಿಂದ ಹೊಸ ಬಾಂಬ್‌

By Web DeskFirst Published Sep 2, 2018, 8:08 AM IST
Highlights

ಪ್ರಧಾನಿ ನರೇಂದ್ರ ಮೋದಿ ಇದೀಗ ಹೊಸ ಬಾಂಬ್ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಬ್ಯಾಂಕ್‌ ನಿಧಿಯು ಬಹುತೇಕ ಶ್ರೀಮಂತರಿಗೆ ಮೀಸಲಾಗಿತ್ತು. ಒಂದು ಕುಟುಂಬಕ್ಕೆ ಹತ್ತಿರವಾದ ಶ್ರೀಮಂತರಿಗೆ ಮಾತ್ರ ಅದರಲ್ಲೂ ವಿಶೇಷವಾಗಿ ಸಾಲ ನೀಡಲಾಗುತ್ತಿತ್ತು’ ಎಂದು ಪರೋಕ್ಷ ಆರೋಪ ಮಾಡಿದ್ದಾರೆ.

ನವದೆಹಲಿ :  ದೇಶದಲ್ಲಿನ ಆರ್ಥಿಕ ಗೊಂದಲದ ಬಗ್ಗೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವೇ ಕಾರಣ ಎಂದು ಪುನಃ ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ‘ವಸೂಲಾಗದ ಸಾಲದ ಸಮಸ್ಯೆ’ಗೆ ಹಿಂದಿನ ಸರ್ಕಾರವೇ ಜವಾಬ್ದಾರ ಎಂದು ಆರೋಪ ಮಾಡಿದ್ದಾರೆ. ಅಲ್ಲದೆ, ‘ಕೆಲವು ಧನಿಕ ಕುಟುಂಬಗಳಿಗೆ ‘ಫೋನ್‌-ಎ-ಲೋನ್‌’ (ಫೋನ್‌ ಮಾಡಿದರೆ ಸಾಕು ಸಾಲ ಲಭ್ಯ) ಸೌಲಭ್ಯವನ್ನೂ ಯುಪಿಎ ಸರ್ಕಾರ ಕಲ್ಪಿಸಿತ್ತು’ ಎಂಬ ಗಂಭೀರ ಆಪಾದನೆ ಹೊರಿಸಿದ್ದಾರೆ.

ಶನಿವಾರ ಸಂಜೆ ಇಲ್ಲಿನ ತಲ್ಕಾತೋರಾ ಕ್ರೀಡಾಂಗಣದಲ್ಲಿ ಅಂಚೆ ಪೇಮೆಂಟ್‌ ಬ್ಯಾಂಕ್‌ಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ‘ಯುಪಿಎ ಸರ್ಕಾರದ ಅವಧಿಯಲ್ಲಿ ಬ್ಯಾಂಕ್‌ ನಿಧಿಯು ಬಹುತೇಕ ಶ್ರೀಮಂತರಿಗೆ ಮೀಸಲಾಗಿತ್ತು. ಒಂದು ಕುಟುಂಬಕ್ಕೆ ಹತ್ತಿರವಾದ ಶ್ರೀಮಂತರಿಗೆ ಮಾತ್ರ ಅದರಲ್ಲೂ ವಿಶೇಷವಾಗಿ ಸಾಲ ನೀಡಲಾಗುತ್ತಿತ್ತು’ ಎಂದು ಗಾಂಧಿ ಕುಟುಂಬವನ್ನು ಹೆಸರಿಸದೇ ಪರೋಕ್ಷ ಆರೋಪ ಮಾಡಿದರು.

ಸ್ವಾತಂತ್ರ್ಯಾನಂತರ 2008ರವರೆಗೆ ಬ್ಯಾಂಕ್‌ಗಳು ನೀಡಿದ ಸಾಲದ ಪ್ರಮಾಣ 18 ಲಕ್ಷ ಕೋಟಿ ರುಪಾಯಿ ಆಗಿತ್ತು. ಆದರೆ, 2008ರಿಂದ 6 ವರ್ಷಗಳಲ್ಲಿ ಇದರ ಪ್ರಮಾಣ 52 ಲಕ್ಷ ಕೋಟಿ ರು.ಗಳಿಗೆ ಏಕಾಏಕಿ ಏರಿತು. (ಅಂದರೆ ಈ 6 ವರ್ಷದಲ್ಲಿ ನೀಡಲಾದ ಸಾಲದ ಪ್ರಮಾಣ .34 ಲಕ್ಷ ಕೋಟಿ) ‘ನಾಮ್‌ದಾರ್‌ಗಳು’ (ವಂಶಪರಂಪರೆಯಿಂದ ಬಂದವರು), ಮಾಡಿದ ಫೋನ್‌ ಕರೆಯ ಶಿಫಾರಸುಗಳ ಮೇರೆಗೆ ಸಾಲ ನೀಡಲಾಗುತ್ತಿತ್ತು’ ಎಂದು ಯಾರೊಬ್ಬರ ಹೆಸರನ್ನು ಪ್ರಸ್ತಾಪಿಸದೇ ಮೋದಿ ಸೂಚ್ಯವಾಗಿ ತಿವಿದರು.

ಇಂಥ ನಾಮದಾರ್‌ಗಳು ಮಾಡಿದ ಶಿಫಾರಸನ್ನು ತಿರಸ್ಕರಿಸಲಾಗದೇ ಬ್ಯಾಂಕ್‌ಗಳು ನಿಯಮಗಳನ್ನು ಗಾಳಿಗೆ ತೂರಿ ಸಾಲ ನೀಡಿದವು. ಈ ಸಾಲದ ಹಣ ವಾಪಸು ಬರಲ್ಲ ಎಂದು ಬ್ಯಾಂಕ್‌ಗಳಿಗೂ ಗೊತ್ತಿತ್ತು. ಯಾವಾಗ ಸಾಲ ಪಡೆದವರು ಕಟಬಾಕಿದಾರರಾದರೋ ಆಗ ಸಾಲದ ಮರುವರ್ಗೀಕರಣ (ಒಂದರ್ಥದಲ್ಲಿ ಸಾಲ ಮನ್ನಾ) ಮಾಡುವಂತೆ ಬ್ಯಾಂಕ್‌ಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು ಎಂದು ಅವರು ಆಪಾದಿಸಿದರು.

‘ಆದರೆ 2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಸೂಲಾಗದ ಸಾಲವನ್ನು ವಸೂಲಿ ಮಾಡುವಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಯಿತು. ಕಳೆದ 4 ವರ್ಷಗಳಲ್ಲಿ 50 ಕೋಟಿ ರು.ಗಿಂತ ಹೆಚ್ಚಿನ ಸಾಲಗಳನ್ನು ಪರಿಶೀಲಿಸಲಾಗಿದ್ದು, ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಗುವಂತೆ ನೋಡಿಕೊಳ್ಳಲಾಗಿದೆ’ ಎಂದರು.

12 ದೊಡ್ಡ ಕಟಬಾಕಿದಾರರು 1.75 ಲಕ್ಷ ಕೋಟಿ ರು. ಬಾಕಿ ಕಟ್ಟಬೇಕಿದೆ. ಇನ್ನುಳಿದ 27 ಜನ .1 ಲಕ್ಷ ಕೋಟಿ ಕಟ್ಟಬೇಕಿದೆ. ಈ 12 ದೊಡ್ಡ ಕಟಬಾಕಿದಾರರಲ್ಲಿ ಯಾರಿಗೂ ತಮ್ಮ ಸರ್ಕಾರ ಸಾಲ ಕೊಟ್ಟಿಲ್ಲ ಎಂದು ಮೋದಿ ಹೇಳಿಕೊಂಡರು.

ಕೆಲವು ಧನಿಕ ಕುಟುಂಬಗಳಿಗೆ ‘ಫೋನ್‌ ಮಾಡಿದರೆ ಸಾಕು ಸಾಲ ಲಭ್ಯ’ ಎಂಬ ಸೌಲಭ್ಯವನ್ನು ಯುಪಿಎ ಸರ್ಕಾರ ಕಲ್ಪಿಸಿತ್ತು. ಸ್ವಾತಂತ್ರ್ಯಾನಂತರ 2008ರವರೆಗೆ ಬ್ಯಾಂಕ್‌ಗಳು ಒಟ್ಟು 18 ಲಕ್ಷ ಕೋಟಿ ರು. ಸಾಲ ನೀಡಿದ್ದರೆ, 2008ರಿಂದ 6 ವರ್ಷಗಳಲ್ಲಿ 34 ಲಕ್ಷ ಕೋಟಿ ರು. ಸಾಲ ನೀಡಿವೆ. ಇದಕ್ಕೆ ನಾಮ್‌ದಾರ್‌ಗಳ ಒತ್ತಡವೇ ಕಾರಣ. ಈಗಿನ ಸುಸ್ತಿ ಸಾಲದ ಸಮಸ್ಯೆಗೂ ಇದೇ ಕಾರಣ.

- ನರೇಂದ್ರ ಮೋದಿ, ಪ್ರಧಾನಿ

click me!