ಅಂದು ಪೈಲೆಟ್ ಆಗಿದ್ದವ ಈಗ ದೈವ ಪಾತ್ರಿ

By Suvarna Web DeskFirst Published Mar 24, 2017, 11:19 AM IST
Highlights

ಈತನ ಹೆಸರು ಮನೋಜ್ ಪೂಜಾರಿ ವಿದ್ಯಾವಂತ ಯುವಕ. ಕಿನ್ನಿಗೋಳಿ ಸಮೀಪದ ಎಳತ್ತೂರು ಗ್ರಾಮದ ಸುಂದರ ಪೂಜಾರಿ ಹಾಗೂ ಗೋಪಿ ದಂಪತಿಗಳ ಏಕ ಮಾತ್ರ ಪುತ್ರ. ಪೂರ್ವ ದಕ್ಷಿಣ ಆಫ್ರಿಕಾದಲ್ಲಿ ಆರಿಕ್ ಎರ್  ವಿಮಾನ ಸಂಸ್ಥೆಯಲ್ಲಿ ಪೈಲೆಟ್ ಆಗಿರುವ ಈತ ಸಮೀಪದ ಕಾಂತಾಬಾರೆ ಬೂದಾಬಾರೆ ಗರಡಿಯ ಗುಡ್ಡೆ ಧೂಮಾವತಿ ದೈವದ ಪಾತ್ರಿಯೂ ಆಗಿದ್ದಾನೆ.

ಮಂಗಳೂರು(ಮಾ.24): ಆ ಯುವಕ ಸೌತ್ ಆಫ್ರಿಕಾದಲ್ಲಿ ಪೈಲೆಟ್, ಐಷಾರಾಮಿ ಶ್ರೀಮಂತ ಬದುಕು ಕಾಣುವ ಎಲ್ಲ ಅವಕಾಶಗಳಿರುವ ವಿದ್ಯಾವಂತ ಯುವಕ, ಆದರೆ ದೈವದ ಬಗ್ಗೆ ವಿಶೇಷ ಭಕ್ತಿಯನ್ನು ಹೊಂದಿದ ಆ ಯುವಕ ಅನೇಕ ವರ್ಷಗಳಿಂದ ದೈವದ ಸೇವೆ ಮಾಡಿಕೊಂಡು ಬಂದಿದ್ದು ಇದೀಗ ದೈವ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾನೆ.

ಈತನ ಹೆಸರು ಮನೋಜ್ ಪೂಜಾರಿ ವಿದ್ಯಾವಂತ ಯುವಕ. ಕಿನ್ನಿಗೋಳಿ ಸಮೀಪದ ಎಳತ್ತೂರು ಗ್ರಾಮದ ಸುಂದರ ಪೂಜಾರಿ ಹಾಗೂ ಗೋಪಿ ದಂಪತಿಗಳ ಏಕ ಮಾತ್ರ ಪುತ್ರ. ಪೂರ್ವ ದಕ್ಷಿಣ ಆಫ್ರಿಕಾದಲ್ಲಿ ಆರಿಕ್ ಎರ್  ವಿಮಾನ ಸಂಸ್ಥೆಯಲ್ಲಿ ಪೈಲೆಟ್ ಆಗಿರುವ ಈತ ಸಮೀಪದ ಕಾಂತಾಬಾರೆ ಬೂದಾಬಾರೆ ಗರಡಿಯ ಗುಡ್ಡೆ ಧೂಮಾವತಿ ದೈವದ ಪಾತ್ರಿಯೂ ಆಗಿದ್ದಾನೆ.

ವಿಮಾನದ ಪೈಲೆಟ್ ಆಗಿದ್ದು , ಐಷಾರಾಮಿ ಶ್ರೀಮಂತ ಬದುಕು ಕಾಣುವ ಎಲ್ಲಾ ಅವಕಾಶಗಳಿರುವ ಇಪ್ಪತ್ತೊಂಭತ್ತರ ಹರೆಯದ ಯುವಕ ಮನೋಜ್ ಪೂಜಾರಿ ತುಳುನಾಡಿನ ಜಾನಪದ ಆರಾಧನೆಯಾದ ದೈವಾರಾಧನೆಯಲ್ಲಿ ದೈವಪಾತ್ರಿಯಾಗಿ ದೈವಶಕ್ತಿಗೆ ಸಾಕ್ಷಿಯಾಗಿದ್ದಾನೆ.

ಮುಲ್ಕಿ ಸಮೀಪದ ಕಾಂತಾಬಾರೆ ಬೂದಾಬಾರೆ ಎಂಬ ಕಾರಣೀಕದ ಅವಳಿ ವೀರಪುರುಷರು ಮೂಲ್ಕಿ ಒಂಭತ್ತು ಮಾಗಣೆಗೆ ಸಂಬಂಧಿಸಿದವರು ಅನೇಕ ವರುಷಗಳ ಕಾಲ ಅಜೀರ್ಣಾವಸ್ಥೆಯಲ್ಲಿದ್ದ ಗರಡಿಯ ಗುಡ್ಡೆ ಜುಮಾದಿ, ಜಾರಂದಾಯ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ದುಸ್ಥಿತಿಯ ಬಗ್ಗೆ ಕುಟುಂಬಿಕರು ನಾಗದರ್ಶನದಲ್ಲಿ ಕೇಳಿಕೊಂಡಾಗ ನಿಮ್ಮ ಕುಟುಂಬದಲ್ಲಿ ಹುಟ್ಟುವ ಮಗುವೊಂದಕ್ಕೆ ಹದಿನೆಂಟು ವರುಷ ತುಂಬಿದಾಗ ದೈವಸ್ಥಾನ ಜೀರ್ಣೋದ್ಧಾರಗೊಳ್ಳುತ್ತದೆ ಎಂಬ ಉತ್ತರ ಬಂದಿತ್ತು.

ಅದರಂತೆ ಸುಂದರ ಪೂಜಾರಿ ಹಾಗೂ ಗೋಪಿ ದಂಪತಿಗಳ ಪುತ್ರ ಮನೋಜ್ ಹುಟ್ಟಿ ವರುಷ ಹದಿನೆಂಟಾದಾಗ ಗರಡಿಯ ದೈವಸ್ಥಾನ ಜೀರ್ಣೋದ್ಧಾರಗೊಂಡಿತು. ಗರಡಿ ಜೀರ್ಣೋದ್ಧಾರಗೊಂಡ ಕಾರಣ ಮನೋಜ್  ದೈವಗಳಿಗೆ ಪೂಜೆಯ ಸೇವೆಗೆ ತೊಡಗಿಕೊಂಡರು. 2003ರಲ್ಲಿ ದೈವದ ಪೂಪೂಜನದ ಸೇವೆಗೆ ತೊಡಗಿಕೊಳ್ಳುವವರೆಗೆ ಸರಿಯಾಗಿ ನೇಮಗಳನ್ನು ನೋಡಿದವರೇ ಅಲ್ಲ. 2004ರಲ್ಲಿ ಎಳತ್ತೂರು ಮಜಲಗುತ್ತುವಿನ ಜಾರಂದಾಯ ದೈವದ ಮುಗ  ಹಿಡಿಯುವ ಕಾಯಕವನ್ನು ಆರಂಭಿಸಿದ್ದರು. ಅಜ್ಜ ಕೋಟು ಪೂಜಾರಿ ಕೊಲ್ಲೂರು ಕೆಳಗಿನಗುಡ್ಡೆಯ ಕಾಂತಾಬಾರೆ ಬೂದಾಬಾರೆಯರ ದೈವಸ್ಥಾನದಲ್ಲಿ ದರ್ಶನಕ್ಕೆ ನಿಲ್ಲುತ್ತಿದ್ದರು, ಮಾನಾಡಿಯ ದೈವಪಾತ್ರಿ ಯಾದವ ಪೂಜಾರಿಯವರಿಂದ ನೋಡಿ ಕೇಳಿ ಆರಾಧನಾ ಕ್ರಮವನ್ನು ಕಲಿತಿದ್ದೇನೆ. ವಿಮಾನದಲ್ಲಿ ಪೈಲೆಟ್ ಆಗಿದ್ದಾಗ, ತನ್ನ ಜೀವನದಲ್ಲೂ ನಂಬಿದ ದೈವಗಳು ರಕ್ಷಣೆ ನೀಡಿ ಕಾಪಾಡಿದ್ದಾವೆ ಎಂಬುದು ನನ್ನ ಅನುಭವಕ್ಕೆ ಬಂದಿದೆ' ಎನ್ನುತ್ತಾರೆ ಪೈಲೆಟ್ ಮನೋಜ್ ಪೂಜಾರಿ

ಹುಟ್ಟೂರು ಅದರಲ್ಲೂ ಕುಟುಂಬದವರು ನಂಬಿಕೊಂಡು ಬಂದಿರುವ ಕಾಂತಾಬಾರೆ ಬೂದಾಬಾರೆಯರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆದಿ ಕಿಲ್ಲಾಡಿ, ನಡುಮಾನಾಡಿ(ಮಾನಂಪಾಡಿ) ಹಾಗೂ ಪುರುಪು ಗುಡ್ಡೆಸಾನಗಳಲ್ಲಿ ಮಾತ್ರ ಇರುವ ಗುಡ್ಡೆ ಗುಡ್ಡೆ ಧೂಮಾವತಿ ದೈವದ ಸೇವೆಗೆ ಸಮರ್ಪಿತವಾಗಿದ್ದ ಮನೋಜ್ ಕೆಲ ದಿನಗಳ ಹಿಂದೆ ನಡೆದ ತುಡರಬಲಿ ಸಂದರ್ಭ ಮೊದಲ ಬಾರಿಗೆ ದೈವಪಾತ್ರಿಯಾಗಿದ್ದಾರೆ.ದೈವದ ಸೇವೆಯಲಿರುವ ಹಿರಿಯರು ಇವರ ಬಗ್ಗೆ ಅಬಿಮಾನವನ್ನು ವ್ಯಕ್ತಪಡಿಸುತ್ತಾರೆ.

ಕಳೆದ ವರ್ಷ ದೈವದಿಂದ ಎಣ್ಣೆ ಪಡೆದು, ಮೊನ್ನೆ ಮಾರ್ಚ್ 6ರಂದು ಗಡಿ ಹಿಡಿದರು. ಕೆಲ ದಿನಗಳ ಹಿಂದೆ ಎಳತ್ತೂರು ಮಜಲಗುತ್ತುವಿನಲ್ಲಿ ನಡೆದ ನೇಮದಲ್ಲಿ ಜಾರಂದಾಯನ ಮೊಗ ಹಿಡಿದಿದ್ದಾರೆ. ಶನಿವಾರ ಕಾಂತಾಬಾರೆ ಬೂದಾಬಾರೆ ದೈವಸ್ಥಾನದಲ್ಲಿ ನಡೆಯಲಿರುವ ನೇಮದಲ್ಲಿ ಗುಡ್ಡೆ ಜುಮಾದಿಯ ದೈವಪಾತ್ರಿಯಾಗಿ ಸೇವೆ ಮಾಡಲಿದ್ದಾರೆ. ಏನೇ ಆಗಲಿ ಸಂಸ್ಕೃತಿ ಸಂಸ್ಕಾರದತ್ತ ಹಿಮ್ಮುಖವಾಗುತ್ತಿರುವ ಇಂದಿನ ಯುಗದಲ್ಲಿ, ಮನೋಜ್ ಪೂಜಾರಿಯವರು ದೈವದ ಸೇವೆಯಲ್ಲಿ ತೊಡಗಿಕೊಳ್ಳುತ್ತಿರುವುದು ವಿಶೇಷವೇ ಸರಿ.

ವರದಿ: ಸುಕೇಶ್ ಕುಮಾರ್,ಮಂಗಳೂರು, ಸುವರ್ಣ ನ್ಯೂಸ್

click me!