
ಬೆಂಗಳೂರು : ಉಪ ಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್ ಅವರು ಪ್ರಮಾಣ ವಚನ ಸ್ವೀಕರಿಸುವುದು ಅಸಂವಿಧಾನಿಕವಾಗಿದ್ದು, ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರಿಗೆ 10 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ವಿವೇಕಾನಂದ ಕಾಲೇಜಿನ ಪ್ರೊ.ಶೇಖರ್ ಎಸ್.ಅಯ್ಯರ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳೆಂದರೆ ವೈಯಕ್ತಿಕ ಹಿತಾಸಕ್ತಿ ಅರ್ಜಿಗಳಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿ ಅರ್ಜಿದಾರರಿಗೆ ದಂಡ ವಿಧಿಸಿ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಸಂವಿಧಾನದಲ್ಲಿ ಉಪ ಮುಖ್ಯಮಂತ್ರಿ ಎಂಬ ಹುದ್ದೆಯೇ ಇಲ್ಲವಾಗಿದ್ದು, ಅದಕ್ಕೆ ಸಾಂವಿಧಾನಿಕ ಮಾನ್ಯತೆ ಇಲ್ಲ. ಹೀಗಾಗಿ ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಅಸಾಂವಿಧಾನಿಕ ಎಂಬುದಾಗಿ ಘೋಷಿಸಿ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ವಿಚಾರಣೆ ವೇಳೆ ವಾದ ಖುದ್ದು ವಾದ ಮಂಡಿಸಿದ ಅರ್ಜಿದಾರರು, ಸಾರ್ವಜನಿಕ ಹಿತಾಸಕ್ತಿ ಹಾಗೂ ಕಳಕಳಿಯಿಂದ ಈ ಅರ್ಜಿ ಸಲ್ಲಿಸಿದ್ದೇನೆ. ತಮಗೆ ಯಾವುದೇ ದುರುದ್ದೇಶ ಇಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ನಿಮ್ಮಂಥವರು ಇಂತಹ ಪಿಐಎಲ್‌ಗಳನ್ನು ದಾಖಲಿಸುವುದು ಬಿಟ್ಟು ಸಮಾಜದ ರಚನಾತ್ಮಕ ಕಾರ್ಯಗಳತ್ತ ಗಮನ ಹರಿಸಿ. ಕೋರ್ಟ್ ಸಮಯ ಹಾಳು ಮಾಡುವುದನ್ನು ಬಿಡಿ. ಅಪ್ರಾಮಾಣಿಕ ಪಿಐಎಲ್ ಅರ್ಜಿಯಿಂದ ನಿಜವಾದ ಸಂತ್ರಸ್ತರು ಮತ್ತು ಅಪ್ಪಟ ಕಾಳಜಿ ಹೊಂದಿದ ಅರ್ಜಿಗಳ ವಿಚಾರಣೆಗೆ ತೊಂದರೆ ಆಗಿದೆ. ಅಂತೆಯೇ ಕಾರ್ಯಾಂಗದ ಮೇಲೂ ಗಾಢ ಪರಿಣಾಮ ಉಂಟಾಗುತ್ತಿದೆ. ಪಿಐಎಲ್‌ಗಳೆಂದರೆ ಸಮಾಜಕ್ಕೆ ಮಾರ್ಗದರ್ಶಿಯಾಗಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಸಾರ್ವಜನಿಕ ಹಿತಾಸಕ್ತಿ ಇಲ್ಲದ ಇಂತಹ ಅರ್ಜಿಗಳಿಂದ ನ್ಯಾಯಾಂಗದ ಅಮೂಲ್ಯವಾದ ಸಮಯವನ್ನು ಹಾಳು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಂಡ ವಿಧಿಸುತ್ತಿರುವುದಾಗಿ ನ್ಯಾಯಪೀಠ ಅರ್ಜಿ ವಜಾಗೊಳಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.