ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಮತ್ತೊಂದು ಬಿಗ್ ಬಾಂಬ್‌

Published : Jun 30, 2018, 09:26 AM IST
ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ  ಮತ್ತೊಂದು ಬಿಗ್ ಬಾಂಬ್‌

ಸಾರಾಂಶ

ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. 

ಬೆಂಗಳೂರು :  ಹಾಲಿ ಜಲಸಂಪನ್ಮೂಲ ಸಚಿವರು (ಡಿ.ಕೆ.ಶಿವಕುಮಾರ್‌) ತಮ್ಮ ಇಲಾಖೆಯ ಗುತ್ತಿಗೆದಾರರ ಬಿಲ್‌ಗಳನ್ನು ತಡೆಹಿಡಿದಿದ್ದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕಮಿಷನ್‌ ಕೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಗಂಭೀರ ಆಪಾದನೆ ಮಾಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಿಲ್‌ ಪಾವತಿ ಮಾಡದಂತೆ ಜಲಸಂಪನ್ಮೂಲ ಸಚಿವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಸಚಿವ ಡಿ.ಕೆ.ಶಿವಕುಮಾರ್‌ ಹೆಸರನ್ನು ಉಲ್ಲೇಖಿಸದೆ, ನೂತನ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಿರುವ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಖಾತೆ ಸಚಿವರು ಮತ್ತೊಮ್ಮೆ ಕಮಿಷನ್‌ ಕೇಳುತ್ತಿದ್ದಾರೆ. ಕಮಿಷನ್‌ ಇಲ್ಲದೆ ಬಿಲ್‌ ಪಾವತಿಯಾಗುವುದಿಲ್ಲ. ಹಿಂದಿನ ಸರ್ಕಾರದ ಯೋಜನೆಗಳಿಗೆ ಬಿಲ್‌ ಪಾವತಿಯಾಗದಿದ್ದರೆ ಮತ್ತೆ ಬಿಲ್‌ ಪಾವತಿಗೆ ಗುತ್ತಿಗೆದಾರರು ಆಗಮಿಸುತ್ತಾರೆ. ಆಗ ಕಮಿಷನ್‌ ಪಡೆದುಕೊಳ್ಳಬಹುದು ಎಂಬುದು ಸಚಿವರ ಯೋಚನೆಯಾಗಿದೆ ಎಂದು ಆರೋಪಿಸಿದರು.

ಇಂದಿರಾ ಕ್ಯಾಂಟೀನ್‌ ಅನುದಾನಕ್ಕೆ ಕತ್ತರಿ: ಹಿಂದಿನ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಇಂದಿರಾ ಕ್ಯಾಂಟೀನ್‌ಗೆ ಹಣವೇ ಬಿಡುಗಡೆ ಮಾಡುತ್ತಿಲ್ಲ. ಸುಮಾರು 35 ಕೋಟಿ ರು. ಬಿಡುಗಡೆ ಮಾಡಬೇಕಿದೆ. ಸಮ್ಮಿಶ್ರ ಸರ್ಕಾರ ಇದರ ಬಗ್ಗೆ ಯೋಚನೆಯೇ ಮಾಡಿಲ್ಲ. ಈ ಮೂಲಕ ಹಿಂದಿನ ಯೋಜನೆಗಳಿಗೆ ಕತ್ತರಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರಿದರು.

ಕಾಂಗ್ರೆಸ್‌-ಜೆಡಿಎಸ್‌ ಶಾಸಕರು ಬೇಸತ್ತಿದ್ದಾರೆ:  ಸಮ್ಮಿಶ್ರ ಸರ್ಕಾರದ ಆಡಳಿತ ವೈಖರಿಯಿಂದ ಕಾಂಗ್ರೆಸ್‌-ಜೆಡಿಎಸ್‌ನ ಶಾಸಕರು ಸೇರಿದಂತೆ ನಾಯಕರು ಬೇಸತ್ತಿದ್ದಾರೆ ಎಂದು ಇದೇ ವೇಳೆ ಯಡಿಯೂರಪ್ಪ ಹೇಳಿದರು.

ಅನೇಕ ಶಾಸಕರು ಪಕ್ಷವನ್ನು ತೊರೆಯುವ ಆಲೋಚನೆಯಲ್ಲಿದ್ದಾರೆ. ಆ ಎರಡು ಪಕ್ಷದ ನಾಯಕರು ಬಿಜೆಪಿಗೆ ಬರಲು ಸಿದ್ಧವಿದ್ದು, ಪಕ್ಷದ ನಾಯಕರು ಕರೆತರಲು ಮುಂದಾಗಬೇಕು. ನಿಮ್ಮ ಕುರ್ಚಿ ಹೋಗುತ್ತದೆ ಎಂಬ ಭಯದಿಂದ ಪಕ್ಷಕ್ಕೆ ಬರುವ ನಾಯಕರಿಗೆ ಅಡ್ಡಿಯಾಗಬಾರದು ಎಂದು ಸೂಕ್ಷ್ಮವಾಗಿ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಾಗಿರಬೇಕು ಎಂಬ ಸಂದೇಶವನ್ನು ಯಡಿಯೂರಪ್ಪ ಇದೇ ವೇಳೆ ನೀಡಿದರು.

ಪಕ್ಷವನ್ನು ಅಧಿಕಾರಕ್ಕೆ ತರುವಂತಹ ಬಲಾಢ್ಯ ನಾಯಕರು ಪಕ್ಷಕ್ಕೆ ಬರಲು ಆಸಕ್ತಿ ತೋರಿದರೆ ಯಾವುದೇ ಹಿಂಜರಿಕೆ ಇಲ್ಲದೆ ಕರೆತರಬೇಕು. ಈ ಮೂಲಕ ಪಕ್ಷವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ