
ಬೆಂಗಳೂರು(ಜು.16): ‘ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್ ರೈಲು ನಿಲ್ದಾಣದಲ್ಲಿ ಬುಲೆಟ್ ರೈಲಿಗಾಗಿ ಕಾಯುತ್ತಿದ್ದಾರೆ’ ಎಂಬ ಒಕ್ಕಣೆಯೊಂದಿಗೆ ಟೀ- ಶರ್ಟ್, ಪ್ಯಾಂಟ್ ಧರಿಸಿ, ಬ್ಯಾಗ್‌ವೊಂದನ್ನು ಹೆಗಲಿಗೇರಿಸಿಕೊಂಡು ಮೊಬೈಲ್ ನೋಡುತ್ತಿರುವ ವ್ಯಕ್ತಿಯೊಬ್ಬರ ಫೋಟೋ ಕಳೆದ ಕೆಲವು ದಿನಗಳಿಂದ ಫೇಸ್‌ಬುಕ್, ವಾಟ್ಸ್'ಆ್ಯಪ್'ನಲ್ಲಿ ಹರಿದಾಡುತ್ತಿದೆ.
ಸೂಕ್ಷ್ಮವಾಗಿ ಗಮನಿಸಿದರೆ ಆ ವ್ಯಕ್ತಿ ಪ್ರಧಾನಿ ಮೋದಿ ಅವರಲ್ಲ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಆದರೆ ನಿಜಕ್ಕೂ ಫೋಟೋದಲ್ಲಿರುವುದು ಯಾರು? ರಾಮಚಂದ್ರನ್ ನಾಯರ್. ಕೇರಳದವರು. ಖಾಸಗಿ ಬ್ಯಾಂಕಿನ ನಿವೃತ್ತ ಮ್ಯಾನೇಜರ್. ಸದ್ಯ ಬೆಂಗಳೂರಿಗೆ ಬಂದಿದ್ದಾರೆ! ಹೌದು. ರಾಮಚಂದ್ರನ್ ನಾಯರ್ ಈಗ ಇಂಟರ್ನೆಟ್‌ನಲ್ಲಿ ಸೆನ್ಸೇಷನ್. ಅವರ ಹಿರಿಯ ಪುತ್ರ ಬೆಂಗಳೂರಿನಲ್ಲಿ ಉದ್ಯೋಗಿ. ಮಗನ ಮನೆಗೆ ಹೋಗಲೆಂದು ಕಣ್ಣೂರು ಜಿಲ್ಲೆಯಲ್ಲಿರುವ ಪಯ್ಯನೂರು ರೈಲು ನಿಲ್ದಾಣದಲ್ಲಿ ನಾಯರ್ ಅವರು ಬೆಂಗಳೂರು ರೈಲಿಗಾಗಿ ಕಾಯುತ್ತಾ ಮೊಬೈಲ್ ನೋಡುತ್ತಾ ನಿಂತಿದ್ದಾಗ ಯಾರೋ ಫೋಟೋ ತೆಗೆದು ಸಾಮಾಜಿಕ ಜಾಲ ತಾಣಗಳಿಗೆ ಹಾಕಿದ್ದಾರೆ.
ಈ ವಿಷಯ ರಾಮಚಂದ್ರನ್ ಅವರಿಗೂ ಗೊತ್ತಿರಲಿಲ್ಲ. ಸಾಮಾಜಿಕ ಜಾಲ ತಾಣ ನೋಡಿದಾಗಲೇ ತಿಳಿಯಿತು! ಸದ್ಯ ಬೆಂಗಳೂರಿಗೆ ಬಂದಿಳಿದಿರುವ ನಾಯರ್ ಅವರಿಗೆ ಟೀವಿ ವಾಹಿನಿಗಳು ದುಂಬಾಲು ಬಿದ್ದು, ಕಚೇರಿಗೆ ಕರೆಸಿಕೊಂಡು ಚರ್ಚೆ ನಡೆಸುತ್ತಿವೆ. ಇದೇ ವೇಳೆ ಟೀವಿ ವಾಹಿನಿಯ ಸಿಬ್ಬಂದಿಯೊಬ್ಬರು ರಾಮಚಂದ್ರನ್ ಅವರ ಸಮ್ಮುಖ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ನಮ್ಮ ಹಳ್ಳಿಯ ಮಕ್ಕಳು ಕೆಲವೊಮ್ಮೆ ನನ್ನನ್ನು ಮೋದಿ ಎನ್ನುತ್ತಿದ್ದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಮೋದಿ ಅವರನ್ನು ಗಮನಿಸುತ್ತಾ ಬಂದಿದ್ದೇನೆ. ಅವರ ಬಗ್ಗೆ ಅಪಾರ ಗೌರವವಿದೆ. ನಾನೊಬ್ಬ ರಾಜಕೀಯೇತರ ವ್ಯಕ್ತಿ. ಯಾವುದೇ ಪಕ್ಷದ ಬಗ್ಗೆಯೂ ಒಲವಿಲ್ಲ ಎಂದು ರಾಮಚಂದ್ರನ್ ಹೇಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.