
ಉಡುಪಿ: ಭಕ್ತರ ಅನುಕೂಲಕ್ಕಾಗಿ ₹2 ಕೋಟಿ ವೆಚ್ಚದಲ್ಲಿ ಎರಡು ಛತ್ರ ನಿರ್ಮಾಣ ಎರಡು ವರ್ಷದ ಪರ್ಯಾಯಾವಧಿಯಲ್ಲಿ ಕೃಷ್ಣ ಮಠಕ್ಕೆ ಬಂದ ಆದಾಯ ₹4.50 ಕೋಟಿ ಮತ್ತು ಪರ್ಯಾಯಕ್ಕೆ ಮೊದಲು ಭಕ್ತರು ತಮಗೆ ಕಾಣಿಕೆಯಾಗಿ ಅರ್ಪಿಸಿದ ₹7 ಕೋಟಿ ಗಳನ್ನು ಕೃಷ್ಣಮಠದ ಅಭಿವೃದ್ಧಿಗೆ ವಿನಿಯೋಗಿಸಿದ್ದು, ಮುಂದಿನ ಜನವರಿ ತಿಂಗಳಲ್ಲಿ ಪರ್ಯಾಯವನ್ನು ಮುಗಿಸಿ ಬರಿಗೈಯಲ್ಲಿ ತೆರಳುವುದಕ್ಕೆ ಸಿದ್ಧರಿರುವುದಾಗಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸ್ವಾಮೀಜಿ, ₹4.50 ಕೋಟಿ ವೆಚ್ಚದಲ್ಲಿ ಕೃಷ್ಣಮಠದ ಒಳಾಂಗಣದ ಮಾಡು ದುರಸ್ತಿ ಗೊಳಿಸಿ, ಮರ ಮತ್ತು ತಾಮ್ರವನ್ನು ಹೊದಿಸಿದ್ದೇವೆ. ತಲಾ ₹2 ಕೋಟಿ ವೆಚ್ಚದಲ್ಲಿ 2 ಛತ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಸ್ವಾಮೀಜಿ ಹೇಳಿದರು.
ರಾಜಾಂಗಣ ಪುನರ್ ನಿರ್ಮಾಣ: ಈಗಿರುವ ರಾಜಾಂಗಣವು ತಮ್ಮ 4ನೇ ಪರ್ಯಾಯಾವಧಿಯಲ್ಲಿ ನಿರ್ಮಿಸಿದ್ದು, ಅದನ್ನು ಪುನರ್ನಿರ್ಮಿಸಲಾಗುತ್ತಿದೆ. ಈಗಿರುವ ರಾಜಾಂಗಣದ ಮೇಲೆ ಮಧ್ವಾಂಗಣವನ್ನು ನಿರ್ಮಿಸಲಾಗುತ್ತಿದೆ. ಅದನ್ನು ಸಂಪೂರ್ಣವಾಗಿ ಸ್ಟೀಲಿನಿಂದ ಸ್ಪೇಸ್ ಫ್ರೇಮ್ ಸ್ಟ್ರಕ್ಚರ್ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಇದರ ಒಟ್ಟು ವೆಚ್ಚ ₹3 ಕೋಟಿಗಳಾಗಲಿದೆ. ನವೀಕೃತ ರಾಜಾಂಗಣವು ಅಕ್ಟೋಬರ್ ತಿಂಗಳೊಳಗೆ ಪೂರ್ಣಗೊಂಡು ಉದ್ಘಾಟನೆಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ಕೆಜಿಯಿಂದ ಪಿಜಿವರೆಗೆ ಕಾಲೇಜು: ಉಡುಪಿಯಿಂದ ಹೊರಗೆ ಇರುವ ಪಾಜಕದಲ್ಲಿ ಧರ್ಮಸಂಸ್ಕೃತಿಯ ಜೊತೆಗೆ ಕೆ.ಜಿ.ಯಿಂದ ಪಿ.ಜಿ.ವರೆಗೆ ಆಧುನಿಕ ಶಿಕ್ಷಣ ನೀಡುವ ಶಿಕ್ಷಣ ಕೇಂದ್ರ ಸ್ಥಾಪಿಸಲಾಗಿದ್ದು, ಈಗಾಗಲೇ 3 ಮಹಡಿಯ ಪ್ರೌಢಶಾಲೆವರೆಗೆ ಕಟ್ಟಡ ಸಿದ್ಧವಾಗಿ ಶಾಲಾರಂಭವಾಗಿದೆ. ಇದಕ್ಕೆ ₹6.25 ಕೋಟಿ ಖರ್ಚಾಗಿದೆ. ಇನ್ನು ಕಾಲೇಜು ಕಟ್ಟಡಕ್ಕೆ ₹75 ಲಕ್ಷ ಬೇಕಾಗಿದೆ. ಈ ಒಟ್ಟು ₹2 ಕೋಟಿಗಳನ್ನು ಭಕ್ತರ ದೇಣಿಗೆಯಿಂದ ಸಂಗ್ರಹಿಸಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.