
ತುಮಕೂರು(ಜೂ.9): ಉಡುಪಿ ಮಠದಲ್ಲಿ ಇಫ್ತಾರ್ ಕೂಟ ಆಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಪೇಜಾವರ ಶ್ರೀ, ಈ ಬಾರಿ ತಾವು ಪ್ರವಾಸದಲ್ಲಿ ನಿರತವಾಗಿದ್ದರಿಂದ ಇಫ್ತಾರ್ ಕೂಟ ಆಯೋಜನೆ ಮಾಡಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉಡುಪಿ ಮಠದಲ್ಲಿ ಕಳೆದ ಬಾರಿಯೂ ಕೂಡ ಇಫ್ತಾರ್ ಆಯೋಜನೆ ಮಾಡಲಾಗಿತ್ತು. ಆದರೆ ಈ ಬಾರಿ ಮಠದಲ್ಲಿ ಇಫ್ತಾರ್ ಕೂಟ ಆಯೋಜನೆಗೆ ಮುಸ್ಲಿಂ ಬಾಂಧವರಲ್ಲಿ ಆಸಕ್ತಿ ಇರಲಿಲ್ಲ ಎಂದು ಪೇಜಾವರ ಶ್ರೀ ಹೇಳಿದ್ದಾರೆ. ಕಳೆದ ಬಾರಿ ದೇವರ ಮೂರ್ತಿ ಇರುವ ಕೊಠಡಿಯಲ್ಲಿ ಇಫ್ತಾರ್ ಆಯೋಜನೆ ಮಾಡಿದ್ದಾರೆ ಎಂದ ಅಪನಂಬಿಕೆ ಅವರಲ್ಲಿ ಇದೆ. ಆದರೆ ಇಫ್ತಾರ್ ಆಯೋಜಿಸಿದ್ದ ಕೋಣೆಯಲ್ಲಿ ದೇವರ ಮೂರ್ತಿ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತಾವು ಟೀಕೆ ಮಾಡಿಲ್ಲ ಎಂದೂ ಸ್ಪಷ್ಟಪಡಿಸಿರುವ ಪೇಜಾವರ ಶ್ರೀ, ಮೋದಿ ಸರ್ಕಾರಕ್ಕೆ ತಾವು ನೀಡಿದ್ದ ಸಲಹೆಯನ್ನು ಮಾಧ್ಯಮಗಳು ತಪ್ಪಾಗಿ ಕಲ್ಪಿಸಿಕೊಂಡು ವರದಿ ಮಾಡಿವೆ ಎಂದು ಹೇಳಿದರು. ಗಂಗಾ ಶುದ್ದೀಕರಣ ಕೆಲಸ ಇನ್ನಷ್ಟು ಚುರುಕುಗೊಳಿಸುವಂತೆ ಮಾತ್ರ ತಾವು ಸಲಹೆ ನೀಡಿದ್ದು, ಇದಕ್ಕೆ ಬೇರೆ ಅಥರ್ಥ ಕಲ್ಪಿಸುವ ಅವಶ್ಯಕತೆ ಇರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇನ್ನು ರಾಜ್ಯದ ಸಮ್ಮಿಶ್ರ ಸರ್ಕಾರದ ವಿಚಾರ ಪ್ರಸ್ತಾಪಿಸಿದ ಪೇಜಾವರ ಶ್ರೀ, ಎರಡು ಪಕ್ಷಕ್ಕಿಂತ ಸರ್ವ ಪಕ್ಷ ಆಡಳಿತಕ್ಕೆ ಬಂದರೆ ಒಳ್ಳೇಯದು ಎಂದು ಅಭಿಪ್ರಾಯಪಟ್ಟಿದ್ದಾರೆ. ಸರ್ವ ಪಕ್ಷ ಬಂದರೆ ರೆಸಾರ್ಟ್ ರಾಜಕಾರಣ, ಕುದುರೆ ವ್ಯಾಪಾರ ನಿಲ್ಲುತ್ತದೆ ಎಂದಿರುವ ಅವರು, ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಪರಸ್ಪರ ಬೈದಾಡಿಕೊಂಡು ಈಗ ಜೊತೆಯಾಗಿದ್ದಾರೆ. ಅಷ್ಟು ಬೈದಾಡಿಕೊಂಡಿದ್ದವರಿಂದ ಸ್ಥಿರ ಸರ್ಕಾರ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.