
ಬೆಂಗಳೂರು(ಅ.28): ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸಿ ಪಕ್ಷದಿಂದ ಅಮಾನತುಗೊಂಡಿರುವ 8 ಜನ ಬಂಡಾಯ ಶಾಸಕರಿಗೆ ಹೊಸ ರಾಜಕೀಯ ಆಫರ್ ಒಂದು ಸಿಕ್ಕಿದೆ. ಈಗಾಗಲೇ ಒಂದು ಹಂತದ ಮಾತುಕತೆ ಮುಗಿದಿದ್ದು, ದೀಪಾವಳಿ ಹಬ್ಬದ ಬಳಿಕ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಯಾವ ಪಕ್ಷದಿಂದ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ
ರೆಬೆಲ್ ಶಾಸಕರ ಮೇಲೆ ಪವಾರ್ ಕಣ್ಣು !: ರಾಜ್ಯದಲ್ಲಿ ಎನ್ಸಿಪಿ ಬಲವರ್ಧನೆಯ ಆಫರ್ !
8 ಜನ ಭಿನ್ನಮತೀಯ ಜೆಡಿಎಸ್ ಶಾಸಕರ ವಿರುದ್ಧ ಅನರ್ಹತೆಯ ದೂರಿನ ವಿಚಾರಣೆ ಮುಂದುವರಿದಿರುವಾಗಲೇ ರೆಬೆಲ್ ಶಾಸಕರಿಗೆ ಹೊಸ ರಾಜಕೀಯದ ಆಫರ್ ಸಿಕ್ಕಿದೆ. ಬಂಡಾಯ ಶಾಸಕರ ಮೇಲೆ ಕಣ್ಣು ಹಾಕಿರುವ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ರಾಜ್ಯದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ಬಲವರ್ಧನೆಗೊಳಿಸುವ ಆಹ್ವಾನ ನೀಡಿದ್ದಾರೆ. ಈಗಾಗಲೇ ಶರದ್ ಪವಾರ್ ಜೊತೆ ಶಾಸಕ ಜಮೀರ್ ಅಹಮದ್ ಒಂದು ಬಾರಿ ಮುಂಬೈನಲ್ಲಿ ಮಾತುಕತೆಯನ್ನೂ ಮುಗಿಸಿದ್ದಾರೆ. ಜೊತೆಗೆ ಬೆಂಗಳೂರಿಗೆ ಬಂದಾಗ 8 ಜನ ಅಮಾನತುಗೊಂಡ ಶಾಸಕರ ಜೊತೆ ಮಾತುಕತೆ ನಡೆಸುವ ಇಂಗಿತವನ್ನು ಪವಾರ್ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬಹುತೇಕ ದೀಪಾವಳಿ ಹಬ್ಬದ ಬಳಿಕ ಈ ಪ್ರಕ್ರಿಯೆಗೆ ವೇಗ ದೊರಕಲಿದೆ. ಶೀಘ್ರವೇ ಬೆಂಗಳೂರಿಗೆ ಬರಲಿರುವ ಶರದ್ ಪವಾರ್ ಜೊತೆ ಬಂಡಾಯ ಶಾಸಕರು ಮಾತುಕತೆ ನಡೆಸಲಿದ್ದಾರೆ. ಎಲ್ಲವೂ ಸಹಮತಕ್ಕೆ ಬಂದಲ್ಲಿ 8 ಬಂಡಾಯ ಶಾಸಕರು ರಾಜ್ಯದಲ್ಲಿ ಎನ್ಸಿಪಿ ಪಕ್ಷವನ್ನು ಬಲವರ್ಧಿಸುವ ಕೆಲಸಕ್ಕೆ ಮುಂದಾಗುವ ಸಾಧ್ಯತೆಯಿದೆ. ಆದರೆ ಯಾವುದೇ ನೆಲೆ ಇಲ್ಲದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ ನೆಲೆ ಕಾಣಿಸುವುದು ಸದ್ಯದ ರಾಜ್ಯ ರಾಜಕೀಯ ಪರಿಸ್ಥಿತಿಯಲ್ಲಿ ಕಷ್ಟದ ಮಾತಾಗಿದೆ.
ಹಾಗಂತ ರಾಜ್ಯದಲ್ಲಿ ಎನ್ಸಿಪಿ ಕಟ್ಟುವ ಮಾತು ಕೇಳಿ ಬಂದಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೊಮ್ಮೆ ಅಫ್ಜಲ್ಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಎನ್ಸಿಪಿಗೆ ವಲಸೆ ಹೊರಟು ನಿಂತಿದ್ದರು. ಆದರೆ ಅದು ಕೊನೆಯ ಕ್ಷಣದಲ್ಲಿ ವರ್ಕೌಟ್ ಆಗಿರಲಿಲ್ಲ. ಇದೀಗ ಮತ್ತೆ ಬಂಡಾಯ ಶಾಸಕರನ್ನು ಸೆಳೆಯಲು ಎನ್ಸಿಪಿ ಮುಂದಾಗಿದ್ದು ಎಷ್ಟರ ಮಟ್ಟಿಗೆ ಫಲ ಕೊಡುತ್ತದೋ ಗೊತ್ತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.