ಪ್ರಧಾನಿ ಮೋದಿಯವರು ದೇಶಪ್ರೇಮ ತಮಗಷ್ಟೇ ಮೀಸಲು ಎಂದು ಭಾವಿಸಬಾರದು: ದೇವೇಗೌಡ

By Suvarna Web DeskFirst Published May 29, 2017, 10:21 PM IST
Highlights

ಕೇಂದ್ರ ಸರ್ಕಾರ ಮೂರು ವರ್ಷ ಪೂರೈಸಿರುವ ಬಗ್ಗೆ ಮಾಧ್ಯಮಗಳಲ್ಲಿ ವೈಭವೀಕರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೇಶಪ್ರೇಮ ತಮಗಷ್ಟೇ ಮೀಸಲು ಎಂದು ಭಾವಿಸಬಾರದು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಹೊಳೆನರಸೀಪುರ (ಮೇ.29): ಕೇಂದ್ರ ಸರ್ಕಾರ ಮೂರು ವರ್ಷ ಪೂರೈಸಿರುವ ಬಗ್ಗೆ ಮಾಧ್ಯಮಗಳಲ್ಲಿ ವೈಭವೀಕರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೇಶಪ್ರೇಮ ತಮಗಷ್ಟೇ ಮೀಸಲು ಎಂದು ಭಾವಿಸಬಾರದು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿ ಅವರು ತಾವೊಬ್ಬರೇ ದೇಶದ ಬಗ್ಗೆ ಅಭಿಮಾನ ಹೊಂದಿರುವವರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಹಾಗಾದರೆ, ಹಿಂದಿನ ಪ್ರಧಾನಿಗಳಿಗೆ ದೇಶಪ್ರೇಮ ಇರಲಿಲ್ಲ ಎಂಬುದು ಇದರ ಅರ್ಥವೇ ಎಂದು ಪ್ರಶ್ನಿಸಿದರಲ್ಲದೆ, ನಾನೊಬ್ಬನೇ ಪ್ರಬಲ ಎಂದುಕೊಂಡರೆ ಅದು ಅವರ ಮೌಢ್ಯದ ನಡೆ. ಅವಕಾಶ, ಅಧಿಕಾರ ಸಿಕ್ಕರೆ ಎಲ್ಲರೂ ಸಮರ್ಥವಾಗಿ ಕೆಲಸ ಮಾಡುತ್ತಾರೆ. ಹಿಂದೆ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ವಾಜಪೇಯಿ, ಮನಮೋಹನ್‌ಸಿಂಗ್, ಪಿ.ವಿ.ನರಸಿಂಹರಾವ್ ಅವರು ಇವರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ, ಅವರು ಏನು ಮಾಡಿಯೇ ಇಲ್ಲ ಎಂಬಂತೆ ಬಿಂಬಿಸುವ ಕೆಲಸವನ್ನು ಕೇಂದ್ರ ಈಗ ಮಾಡುತ್ತಿದೆ ಎಂದರು. 
 
ಸಮರ್ಥ ವಿರೋಧಪಕ್ಷವಿಲ್ಲ: ಈ ದೇಶದ ದುರ್ದೈವ ಎಂದರೆ ರಾಷ್ಟ್ರಮಟ್ಟದಲ್ಲಿ ಸಮರ್ಥ ವಿರೋಧಪಕ್ಷ ಇಲ್ಲ. ಅಣ್ಣಾಡಿಎಂಕೆ, ಟಿಎಂಸಿ, ಬಿಜೆಡಿ ಬಿಟ್ಟರೆ ಯಾವುದೇ ಪ್ರಾದೇಶಿಕ ಪಕ್ಷಗಳು ಬಲಗೊಳ್ಳದಿರುವುದೇ ಇದಕ್ಕೆ ಕಾರಣ. ಇತ್ತೀಚೆಗೆ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರ ನೇತೃತ್ವದಲ್ಲಿ 17 ಪ್ರಾಂತೀಯ ಪಕ್ಷಗಳನ್ನು ಒಡೆಯುವ ಪ್ರಯತ್ನ ನಡೆದಿದ್ದು ಸುಳ್ಳಲ್ಲ. ಆದರೆ, ಪ್ರಾದೇಶಿಕ ಪಕ್ಷಗಳಿಗೆ ಅವುಗಳದ್ದೇ ಆದ ಸಮಸ್ಯೆಗಳಿರುವ ಕಾರಣ ಬಲವಾಗಿ ನಿಲ್ಲಲು ಸಾಧ್ಯವಾಗಿಲ್ಲ. ನಾನು ಪ್ರಧಾನಿಯಾಗಿದ್ದಾಗ ಬ್ರಹ್ಮಪುತ್ರ ನದಿ ಸೇತುವೆಗೆ ಚಾಲನೆ ನೀಡಿದ್ದೆ. ಕಾಶ್ಮೀರಕ್ಕೆ ೩ ಬಾರಿ ಭೇಟಿ ನೀಡಿದ್ದೆ. ಈಗ ತಮ್ಮ ಸರ್ಕಾರದ ಸಾಧನೆ ಬಗ್ಗೆ ಪ್ರಚಾರ ಗಿಟ್ಟಿಸುವ ಮೋದಿ ಅವರು, ಕಾಶ್ಮೀರದ ಪರಿಸ್ಥಿತಿ ಏನು ಎಂಬದುನ್ನು ಹೇಳುತ್ತಾರೆಯೇ ಎಂದು ಪ್ರಶ್ನಿಸಿದರು.
ಪ್ರಧಾನಿ ಅವರ ಮನ್‌ಕಿ ಬಾತ್‌ಗೆ ಅರ್ಥ ಇದೇಯೇ ಎಂದು ಪ್ರಶ್ನಿಸಿದ ಅವರು, ಮುಲಾಯಂ ಸಿಂಗ್ ಕುಟುಂಬ ಒಡೆದದ್ದು, ಮಾಯಾವತಿ ನಿವಾಸದ ಮೇಲೆ ಐಟಿ ದಾಳಿ, ಸಾರಂಗ್‌ಪುರ್ ದಲಿತರ ಮೇಲೆ ಹಲ್ಲೆ ಪ್ರಕರಣ ಎಲ್ಲವೂ ನನಗೆ ಗೊತ್ತಿದ್ದು, ಮುಂದೆ ಲೋಕಸಭೆಯಲ್ಲಿ ಈ ಬಗ್ಗೆ ಚರ್ಚಿಸುತ್ತೇನೆ. 
ರಾಷ್ಟ್ರಪತಿ ಹುದ್ದೆಗೆ ತಮ್ಮ ಹೆಸರು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು, ನನಗೆ ಜನರ ಮಧ್ಯದಲ್ಲೇ ಕೊನೆಯುಸಿರುಳೆಯುವ ಆಸೆ ಇದೆ. ದೆಹಲಿ ರಾಜಕಾರಣದಲ್ಲಿ ಒಲವಿಲ್ಲ. ನಮ್ಮ ಪಕ್ಷಕ್ಕೆ ಅಧಿಕಾರ ಸಿಕ್ಕರೆ ರಾಜ್ಯದ ಜನರ ಋಣ ತೀರಿಸಲು ಹೋರಾಡುತ್ತೇನೆ ಎಂದರು. 
click me!