ಪಾಸ್'ಪೋರ್ಟ್'ಗಾಗಿ ಒದ್ದಾಟ ಈಗ ಇನ್ನಷ್ಟು ಕಡಿಮೆ; ಇನ್ಮುಂದೆ ಅಂಚೆ ಕಚೇರಿಗಳಲ್ಲೂ ಲಭ್ಯ

By Internet DeskFirst Published Sep 26, 2016, 8:01 AM IST
Highlights

ನವದೆಹಲಿ: ವಿದೇಶ ಪ್ರಯಾಣಕ್ಕಾಗಿ ಪಾಸ್‌'ಪೋರ್ಟ್ ಬೇಕಾಗಿದೆಯೇ? ಹಾಗಿದ್ದರೆ ಚಿಂತೆ ಮಾಡುವ ಅಗತ್ಯವಿಲ್ಲ. ಇನ್ನು ಮುಂದೆ ಅಂಚೆ ಕಚೇರಿಗಳಲ್ಲಿಯೂ ಅದನ್ನು ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ‘ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಆರಂಭಿಕ ಹಂತದಲ್ಲಿ ಪ್ರಾಯೋಗಿಕವಾಗಿ ದೆಹಲಿಯ ಅಂಚೆಕಚೇರಿಗಳಲ್ಲಿ ಜಾರಿ ಮಾಡಲಾಗುತ್ತದೆ. ವರ್ಷಾಂತ್ಯಕ್ಕೆ ಈ ವ್ಯವಸ್ಥೆ ಜಾರಿಯಾಗಲಿದೆ. ಅದು ಯಶಸ್ವಿಯಾದರೆ ಅದನ್ನು ದೇಶದ ಉಳಿದ ಭಾಗಗಳಿಗೆ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರ ಇರಾದೆ ವ್ಯಕ್ತಪಡಿಸಿದೆ.

ವರ್ಷದಿಂದ ವರ್ಷಕ್ಕೆ ಪಾಸ್‌ಪೋರ್ಟ್ ಕೋರಿ ಅರ್ಜಿ ಸಲ್ಲಿಸುತ್ತಿರುವವ ಸಂಖ್ಯೆ ಹೆಚ್ಚುತ್ತಿದೆ. ಅದನ್ನು ವಿಲೇವಾರಿ ಮಾಡಲು ಕೇಂದ್ರ ವಿದೇಶಾಂಗ ಇಲಾಖೆಗೆ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ತ್ವರಿತವಾಗಿ ವಿಲೇವಾರಿ ಮಾಡಲು ಅಂಚೆ ಕಚೇರಿಗಳಲ್ಲೂ ಪಾಸ್‌ಪೋರ್ಟನ್ನು ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೆಹಲಿಯಲ್ಲಿ ಸದ್ಯಕ್ಕೆ ಐದು ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿದ್ದು, ಅವುಗಳು ಪ್ರತಿ ದಿನ ೨ ಸಾವಿರ ಅರ್ಜಿಗಳನ್ನು ಇತ್ಯರ್ಥಗೊಳಿಸುತ್ತವೆ. ಸದ್ಯ ಪಾಸ್‌ಪೋರ್ಟ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ೩-೪ ತಿಂಗಳು ಕಾಯಬೇಕು. ಅಂಚೆ ಕಚೇರಿಗಳಿಗೆ ಈ ಹೊಣೆ ವಹಿಸಿದರೆ ಪ್ರತಿಯೊಂದರಲ್ಲಿ ದಿನಕ್ಕೆ ೧೫೦-೨೦೦ ಅರ್ಜಿಗಳನ್ನು ವಿಲೇವಾರಿ ಮಾಡಲು ಅವಕಾಶ ಉಂಟು. ಪಾಸ್‌ಪೋರ್ಟ್ ಸೇವಾ ಕೇಂದ್ರ (ಪಿಎಸ್‌ಕೆ)ಗಳಲ್ಲಿ ಎ, ಬಿ ಮತ್ತು ಸಿ ಎಂಬ ವರ್ಗೀಕರಣಗಳಿವೆ. ಆ ಪೈಕಿ ಎ ವಿಭಾಗವನ್ನು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್)ಗೆ ಗುತ್ತಿಗೆ ನೀಡಲಾಗಿದೆ. ಅದರಲ್ಲಿ ಅರ್ಜಿದಾರನ ದಾಖಲೆಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ ಮತ್ತು ಬೆರಳಚ್ಚು ಮತ್ತು ಛಾಯಾಚಿತ್ರ ಪಡೆದುಕೊಳ್ಳಲಾಗುತ್ತದೆ. ಸದ್ಯ ಬಿ ಮತ್ತು ಸಿ ವಿಭಾಗಗಳನ್ನು ವಿದೇಶಾಂಗ ಇಲಾಖೆ ನೋಡಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಅದನ್ನು ಅಂಚೆ ಇಲಾಖೆ ನೋಡಿಕೊಳ್ಳಲಿದೆ.

Latest Videos

ಪಾಸ್‌ಪೋರ್ಟ್ ಮಾಹಿತಿ:
೧೫೦-೨೦೦ : ಅಂಚೆ ಕಚೇರಿಗಳಲ್ಲಿ ಪಾಸ್‌'ಪೋರ್ಟ್ ವಿಲೇವಾರಿ
೧,೫೪,೯೩೯ : ದೇಶದಲ್ಲಿರುವ ಅಂಚೆ ಕಚೇರಿಗಳು
೧.೨ ಕೋಟಿ : ೨೦೧೫ರಲ್ಲಿ ವಿಲೇವಾರಿಯಾದ ಅರ್ಜಿಗಳು
ಶೇ.೧೮ : ೨೦೧೪ಕ್ಕೆ ಹೋಲಿಕೆ ಮಾಡಿದರೆ ೨೦೧೫ರಲ್ಲಿ ಏರಿಕೆಯಾಗಿರುವ ಅಂಶ

(ಕೃಪೆ: ಕನ್ನಡಪ್ರಭ)

click me!