
ಕಾಂಗ್ರೆಸ್ ಮೇಲೆ ಗೌಡರ ಸೇಡು
ಕಾಂಗ್ರೆಸ್‌ಗೆ ಸೀತಾರಾಂ ಕೇಸರಿ 16 ವರ್ಷ ಖಜಾಂಚಿಯಾಗಿದ್ದರು. ಅವರು ಲೆಕ್ಕಪತ್ರ ಇಡುತ್ತಿದ್ದ ರೀತಿ ದೊಡ್ಡ ಜೋಕಾಗಿತ್ತು. ‘ನ ಖಾತಾ ನ ಬಾಹಿ, ಜೋ ಕೇಸರಿಜೀ ಕಹೇ ವಹೀ ಸಹಿ’ (ಖಾತೆಯೂ ಇಲ್ಲ ಕಿದ್ರಿಯೂ ಇಲ್ಲ, ಕೇಸರಿ ಹೇಳಿದ್ದೇ ಲೆಕ್ಕ) ಎಂಬುದು ಗಾದೆ ಮಾತಿನಂತಾಗಿತ್ತು. ಕೇಸರಿ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದಾಗ ದೇವೇಗೌಡರ (1996-97) ಹಾಗೂ ಐ.ಕೆ.ಗುಜ್ರಾಲ್‌ರ (1997 -98) ಸರ್ಕಾರವನ್ನು ಅಸ್ಥಿರಗೊಳಿಸುವಲ್ಲಿ ಮಹತ್ತರ ಕೆಲಸ ಮಾಡಿದ್ದರು.
ಅದಕ್ಕೆ ಸರಿಯಾಗಿ ದೇವೇಗೌಡರ ಸರ್ಕಾರ ಕಾಂಗ್ರೆಸ್ ಪಕ್ಷ ಹಾಗೂ ನಾಯಕರನ್ನು ಚೆನ್ನಾಗಿ ಗೋಳುಹೊಯ್ದು ಕೊಂಡಿತ್ತು. ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಮೇಲೆ ಭ್ರಷ್ಟಾಚಾರದ ಕೇಸು ಹಾಕಿ ವಿಚಾರಣೆಗೆ ಒಳಪಡಿಸಿತು. ಗೌಡರ ಅವಧಿಯಲ್ಲೇ ಬೋಪರ್ಸ್ ಹಗರಣದ ತನಿಖೆ ಮತ್ತೆ ಪುಟಿದೆದ್ದಿತು. ತನ್ನನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡುವ ಸರ್ಕಾರಕ್ಕೆ ಬೆಂಬಲ ನೀಡುವ ಯಾವ ದರ್ದು ಕಾಂಗ್ರೆಸ್ಸಿಗಿತ್ತು ಹೇಳಿ? ಇನ್ನು, ಅಸ್ಥಿರ ಮೈತ್ರಿ ಸರ್ಕಾರದ ಪ್ರಧಾನಿಯಾಗಿದ್ದರೂ ಗುಜ್ರಾಲ್ ಸಾಹೇಬರು ಕಾಂಗ್ರೆಸ್ಸಿನ ಒಂದೇ ಒಂದು ಮಾತಿಗೆ ಸೊಪ್ಪು ಹಾಕುತ್ತಿರಲಿಲ್ಲ. ಜೈನ್ ಆಯೋಗದ ವರದಿ ಬಂದಾಗ ಡಿಎಂಕೆ ಸಚಿವರನ್ನು ಸರ್ಕಾರದಿಂದ ಕೈಬಿಡಿ ಎಂದು ಕಾಂಗ್ರೆಸ್ ಎಷ್ಟೇ ಒತ್ತಡ ಹೇರಿದರೂ ಗುಜ್ರಾಲ್ ಕ್ಯಾರೇ ಅನ್ನಲಿಲ್ಲ. ಆಗೆಲ್ಲ ಕೇಸರಿ ‘ನನ್ನ ಬಳಿ ಟೈಮ್ ಇಲ್ಲ’ ಎಂದು ಪದೇಪದೇ ಹೇಳುತ್ತಿದ್ದರು. ಹಾಗಂದರೆ ಏನು? ಕೆಲ ಕಾಂಗ್ರೆಸಿಗರ ಪ್ರಕಾರ, ಕೇಸರಿಗೆ ಪ್ರಧಾನಿಯಾಗಬೇಕು ಎಂಬ ಆಸೆಯಿತ್ತು. ಹಾಗಾಗಿ ಯುನೈಟೆಡ್ ಫ್ರಂಟ್ ಸರ್ಕಾರವನ್ನು ಕೆಡವಿ ಒಂದು ಕೈ ನೋಡಿಬಿಡೋಣ ಎಂದು ಹೊರಟಿದ್ದರು. ಅದೇನೇ ಇರಲಿ, ಪ್ರಧಾನಿ ಗುಜ್ರಾಲ್ ತಮ್ಮ ಕ್ಯಾಬಿನೆಟ್‌ನಿಂದ ಒಬ್ಬನೇ ಒಬ್ಬ ಡಿಎಂಕೆ ಮಂತ್ರಿಯನ್ನು ಕೈಬಿಡದೆ ಹಟ ಸಾಧಿಸಿದ್ದು ಮರೆಯಲಾರದ ಘಟನೆ.
(ಸಂಗ್ರಹ ಚಿತ್ರ)
(ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬರೆದಿರುವ ‘ದಿ ಕೋಎಲಿಷನ್ ಇಯರ್ಸ್ 1996-2012’ ಪುಸ್ತಕದ ಅನುವಾದದ ಆಯ್ದ ಭಾಗ-ಕನ್ನಡಪ್ರಭ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.